Advertisement
ಮಹಾನಗರ: ಶಿಲುಬೆಗೇರಿಸಿದ ಯೇಸು ಕ್ರಿಸ್ತರು ತೃತೀಯ ದಿನ ಸಮಾಧಿಯಿಂದ ಪುನರುತ್ಥಾನಗೊಂಡ ಹಬ್ಬದ ಆಚರಣೆಯೇ ಈಸ್ಟರ್. “ಓರ್ವ ವ್ಯಕ್ತಿ ನಮ್ಮ ಪಾಪಗಳಿಗಾಗಿ ಯಾತನೆಯನ್ನು ಅನುಭವಿಸಿ, ಸಾವನ್ನಪ್ಪಿ ತೃತೀಯ ದಿನ ಪುನರುತ್ತಾನಗೊಳ್ಳುತ್ತಾನೆ’ ಎಂಬುದಾಗಿ ಪ್ರವಾದಿಗಳು ನುಡಿದ ಭವಿಷ್ಯ ನಿಜವಾದ ದಿನವೇ ಈಸ್ಟರ್ ಎನ್ನುವುದು ಕ್ರೈಸ್ತರ ನಂಬಿಕೆ.
Related Articles
ಈಸ್ಟರ್ ದಿನ ಕ್ರೈಸ್ತ ಸಭೆಗೆ ಮಹತ್ವದ ದಿನ. ಶಿಲುಬೆಗೇರಿದ ಯೇಸು ಕ್ರಿಸ್ತರು ತೃತೀಯ ದಿನ ಸಮಾಧಿಯಿಂದ ಮೇಲೆದ್ದು ಬಂದಿದ್ದಾರೆ ಎನ್ನುವುದು ಕ್ರೈಸ್ತ ವಿಶ್ವಾಸದ ಬುನಾದಿ. ಹಾಗಾಗಿ ಇದು ಸಮಸ್ತ ಕೈಸ್ತರಿಗೆ ಅತ್ಯಂತ ಪವಿತ್ರವಾದ ದಿನ.
Advertisement
ತನ್ನನ್ನು ಶಿಲುಬೆಗೇರಿಸುವ ಮುಂಚಿನ ದಿನ ಯೇಸು ಕ್ರಿಸ್ತರು ತನ್ನ ಶಿಷ್ಯರ ಜತೆ ಪಸ್ಕ ಹಬ್ಬದ ಭೋಜನವನ್ನು ಸೇವಿಸಿದ್ದರು. ಇದನ್ನು ಯೇಸು ಕ್ರಿಸ್ತರ ಕೊನೆಯ ಭೋಜನ ಎನ್ನುತ್ತಾರೆ. ಪಸ್ಕ ಹಬ್ಬ ಇಸ್ರೇಲ್ ದೇಶದ ಯಹೂದಿಯರಿಗೆ ಸಂಬಂಧ ಪಟ್ಟದ್ದಾಗಿದ್ದು, ಅದು ಯಹೂದಿಯರು ಈಜಿಪ್ಟ್ನ ಗುಲಾಮಗಿರಿಯಿಂದ ಬಿಡುಗಡೆಯಾಗಿ ಸ್ವಾತಂತ್ರÂ ಲಭಿಸಿ ವಲಸೆ ಹೋದ ಸ್ಮರಣೆಯ ಆಚರಣೆ ಆಗಿರುತ್ತದೆ. ಈ ಪಸ್ಕ ಹಬ್ಬದ ಭೋಜನದ ವೇಳೆ ಯೇಸು ಕ್ರಿಸ್ತರು ತಾನು ಮುರಿದ ರೊಟ್ಟಿಯು (ಬ್ರೆಡ್) ತನ್ನ ದೇಹದ ಸಂಕೇತವಾಗಿದೆ ಮತ್ತು ಪಾತ್ರೆಗೆ ಸುರಿದ ದ್ರಾಕ್ಷಾ ರಸವು (ವೈನ್) ತನ್ನ ರಕ್ತ ಆಗಿದ್ದು, ಲೋಕದ ಜನರ ಪಾಪಗಳ ವಿಮೋಚನೆಯ ಸಂಕೇತವಾಗಿದೆ ಎಂಬುದಾಗಿ ತನ್ನ ಶಿಷ್ಯರಿಗೆ ಹೇಳಿದ್ದರು ಎಂದು ಬೈಬಲ್ ತಿಳಿಸುತ್ತದೆ. ಹಾಗಾಗಿ ಯೇಸು ಕ್ರಿಸ್ತರು ಜನರ ಪಾಪ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು ಎನ್ನುವುದು ಕ್ರೈಸ್ತರ ನಂಬಿಕೆ. ಕ್ರೈಸ್ತ ದೇವಾಲಯಗಳಲ್ಲಿ ಈಗ ನಡೆಯುತ್ತಿರುವ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ (ಇದನ್ನು ಬಲಿ ಪೂಜೆ ಎನ್ನುತ್ತಾರೆ) ಕ್ರೈಸ್ತರು ಸೇವಿಸುವ ಪರಮ ಪ್ರಸಾದ ಮತ್ತು ವೈನ್ ಯೇಸು ಕ್ರಿಸ್ತರ ಈ ಬಲಿದಾನದ ಸಂಕೇತವಾಗಿದೆ.
ಪಸ್ಕ ಹಬ್ಬದ ಭೋಜನದ ಬಳಿಕ ಅದೇ ದಿನ ರಾತ್ರಿ ಯೇಸು ಕ್ರಿಸ್ತರು ಗೆತ್ಸೆಮನೆ ತೋಟದಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದಾಗ ಅವರನ್ನು ಹಿಡಿದು ಬಂಧಿಸಿ ಆಗಿನ ರೋಮನ್ ಚಕ್ರವರ್ತಿಯ ಸಮಕ್ಷಮ ಹಾಜರು ಪಡಿಸಿ ವಿಚಾರಣೆಗೆ ಗುರಿ ಪಡಿಸಿ ಬಳಿಕ ಚಾಟಿ ಏಟು ಮತ್ತಿತರ ಶಿಕ್ಷೆಗಳನ್ನು ನೀಡಿ ಅಂತಿಮವಾಗಿ ಶಿಲುಬೆಗೆ ಏರಿಸಲಾಗುತ್ತಿದೆ.
ಯೇಸು ಕ್ರಿಸ್ತರು ಮರಣದಿಂದ ಜೀವಿತದ ಕಡೆಗೆ ದಾಟಿದರು. ಅದೇ ರೀತಿ ಯೇಸು ಕ್ರಿಸ್ತರ ಮೇಲೆ ವಿಶ್ವಾಸ ಇರಿಸಿ ಅವರ ಅನುಯಾಯಿಗಳಾದ ಕ್ರೈಸ್ತರು ಕತ್ತಲೆಯಿಂದ ಬೆಳಕಿಗೆ, ಅಸತ್ಯದಿಂದ ಸತ್ಯದೆಡೆಗೆ, ಪಾಪದ ಕೂಪದಿಂದ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎನ್ನುವುದರ ಆಚರಣೆಯೇ ಈಸ್ಟರ್.
ಚರ್ಚ್‌ಗಳಲ್ಲಿ ಆಚರಣೆಈಸ್ಟರ್ ಹಬ್ಬದ ಮುನ್ನಾ ದಿನ ರಾತ್ರಿ ಚರ್ಚ್‌ಗಳಲ್ಲಿ ನಡೆಯುವ ಈಸ್ಟರ್ ಜಾಗರಣೆಯ ಸಮಾರಂಭದಲ್ಲಿ ಚರ್ಚ್‌ನ ಎಲ್ಲ ದೀಪಗಳನ್ನು ಆರಿಸಿ ಚರ್ಚ್‌ನ ಹೊರಗಡೆ ಆಶೀರ್ವಚನಗೈದ ಕೆಂಡದಿಂದ ಬೆಂಕಿಯನ್ನು ಉಂಟು ಮಾಡಿ ಪ್ರಥಮವಾಗಿ ದೊಡ್ಡ ಗಾತ್ರದ ಮೇಣದ ಬತ್ತಿಯನ್ನು (ಇದನ್ನು ಈಸ್ಟರ್ ಮೊಂಬತ್ತಿ ಎನ್ನುತ್ತಾರೆ) ಉರಿಸಲಾಗುತ್ತದೆ. ಬಳಿಕ ಪ್ರಾರ್ಥನೆಯನ್ನು ನೆರವೇರಿಸಿ ಈ ಮೊಂಬತ್ತಿಯಿಂದ ಕ್ರೈಸ್ತ ಭಕ್ತರೆಲ್ಲರೂ ಮೇಣದ ಬತ್ತಿಯನ್ನು ಉರಿಸಿ ಮೆರವಣಿಗೆಯಲ್ಲಿ ಚರ್ಚ್ ಒಳಗೆ ಪ್ರವೇಶಿಸುತ್ತಾರೆ. ಬಳಿಕ ಈಸ್ಟರ್ ಜಾಗರಣೆಯ ವಿಶೇಷ ಪ್ರಾರ್ಥನೆಗಳು, ಬೈಬಲ್ ವಾಚನ, ಪವಿತ್ರ ಜಲದ ಆಶೀರ್ವಚನ, ಕ್ರೈಸ್ತ ನಾಮಕರಣ ಸಂಸ್ಕಾರದ ಪುನಃ ದೃಢೀಕರಣ, ಬಲಿಪೂಜೆ ನಡೆಯುತ್ತದೆ. ಧಾರ್ಮಿಕವಾಗಿ ಹೆಚ್ಚಿನ ಮಹತ್ವ
ಯೇಸು ಕ್ರಿಸ್ತರು ದೇವರ ಪುತ್ರ ಎನ್ನುವುದು ಕ್ರೈಸ್ತರ ನಂಬಿಕೆ. ಯೇಸು ಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್, ಪುನರುತ್ಥಾನದ ಹಬ್ಬ ಈಸ್ಟರ್ ಕ್ರೈಸ್ತರ ಪ್ರಮುಖ ಎರಡು ಹಬ್ಬಗಳು. ಕ್ರಿಸ್ಮಸ್ ಆಚರಣೆಯ ಸಂದರ್ಭ ಇರುವ ಸಡಗರ, ಸಂಭ್ರಮ ಈಸ್ಟರ್ ಸಂದರ್ಭ ಇರುವುದಿಲ್ಲ; ಆದರೆ ಈ ಹಬ್ಬದ ಸಂದರ್ಭದಲ್ಲಿ ಧಾರ್ಮಿಕವಾಗಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಬೇಸಗೆ ಕಾಲದಲ್ಲಿ ಆಚರಿಸಲಾಗುತ್ತಿರುವುದರಿಂದ ಮನೆಯ ಕುಟುಂಬಗಳ ಬಹುತೇಕ ಸದಸ್ಯರು ಹಾಜರಿರುತ್ತಾರೆ. – ಹಿಲರಿ ಕ್ರಾಸ್ತಾ