Advertisement
ನಮ್ಮ ಅಕ್ಕಪಕ್ಕದವರೇ ನಮ್ಮ ಸುಖ-ದುಃಖಕ್ಕೆ ಮೊದಲು ಆಗುತ್ತಾರೆ, ಹಾಗಾಗಿ, ಅವರನ್ನು ಯಾವುದೇ ಕಾರಣಕ್ಕೂ ಕೆಡಿಸಿಕೊಳ್ಳಬಾರದು ಎನ್ನುವುದು ನಮ್ಮಮ್ಮನ ಕುರುಡು ನಂಬಿಕೆ ಅಥವಾ ಮೂಢ ನಂಬಿಕೆ ಅನ್ನಿ. ಹಾಗಾಗಿ, ಅವರು ಏನೇ ಆಟ ಆಡಿದರೂ ಇವಳು ನೋಡಿಯೇ ಇಲ್ಲವೆಂಬಂತೆ ನಾಟಕ ಮಾಡುವುದನ್ನು ಕರತಲಾಮಲಕ ಮಾಡಿಕೊಂಡುಬಿಟ್ಟಿದ್ದಾಳೆ. ಇದರಿಂದಾಗಿ ಅವಳಿಗೆ ಉಂಟಾಗುವ ಈ ನೆರೆಮನೆಯವರ ಕಾಟವನ್ನೇ ನಾನು ನೆರೆಹಾವಳಿ ಎಂದದ್ದು.
Related Articles
Advertisement
ಹಾಗೆ ಈ ನೆರೆಹಾವಳಿ ನನ್ನನ್ನೇನೂ ಕರುಣೆ ತೋರಿ ಬಿಟ್ಟುಬಿಟ್ಟಿದೆ ಎಂದಲ್ಲ, ಆದರೆ, ಅಮ್ಮನನ್ನು ಬಾಧಿಸಿದಷ್ಟು ನನ್ನನ್ನು ಬಾಧಿಸಿಲ್ಲ ಎನ್ನುವುದೊಂದು ಸಮಾಧಾನ ನನಗೆ. ರಸ್ತೆಯ ಮೇಲೆಯೇ ಒಮ್ಮೆಲೇ ಉದ್ಭವಿಸಿಬಿಟ್ಟಂತಹ ಒತ್ತುಒತ್ತಾಗಿರುವ ಮನೆಗಳಿರುವ ಅಂಕುಡೊಂಕಿನ ಓಣಿಯಲ್ಲಿ ಇವಳೊಬ್ಬಳ ಮನೆಗೆ ಮುಂದೆ ಒಂದಿಷ್ಟು ಜಾಗವನ್ನು ಬಿಟ್ಟುಕೊಂಡಿದ್ದರೆ ಅದಿಲ್ಲದ ಇತರರಿಗೆ ಹೇಗಾಗಬೇಡ? ಮೊದಲೇ ಅವರಿಗೆ ಇವಳಿಗಿಲ್ಲದ ನೂರೆಂಟು ಕೆಲಸಗಳಿರುತ್ತವೆ, ಮತ್ತು ಅವಕ್ಕೆಲ್ಲ ಮನೆ ಮುಂದಿನ ಅಂಗಳ ಬೇಕೇಬೇಕಿರುತ್ತದೆ, ಯಾರ ಮನೆ ಅಂಗಳ ಎನ್ನುವುದು ಇಲ್ಲಿ ನಗಣ್ಯ. ಹಾಗಾಗಿ ಅವರ ಮನೆಯಲ್ಲಿ ಒಣಮೆಣಸಿನಕಾಯಿ ತಂದಕೂಡಲೇ ಬಿಸಿಲಿಗೆ ಇನ್ನಷ್ಟು ಒಣಗಿಸಲೆಂದು ನಮ್ಮ ಮನೆಯ ಅಂಗಳಕ್ಕೆ ಹಕ್ಕಿನಿಂದ ಬಂದು ಸೀರೆಯೊಂದನ್ನು ಉದ್ದಕೇ ಹರಡಿ ಅದರ ಮೇಲೆ ಕೆಂಪಗೆ ಮಿರಿಮಿರಿ ಮಿಂಚುವ ಬ್ಯಾಡಗಿ ಮೆಣಸಿನಕಾಯಿಗಳನ್ನು ಹರಡಿ ನೆನಪಿನಿಂದ ಗೇಟು ಹಾಕಿಕೊಂಡು ಹೋಗುತ್ತಾರೆ. ಬಾಯಿಮಾತಿಗೂ ಅಮ್ಮನ ಹತ್ತಿರ ಹೇಳುವುದಿಲ್ಲ. ಅವರು ಹಾಗೆ ತಮ್ಮ ಕೆಲಸ ಮಾಡುವಾಗ ತಾನು ಹೊರಗೆ ಬಂದುಬಿಟ್ಟರೆ ಅವರಿಗೆ ಮುಜುಗರವಾಗಬಹುದೆಂದು ಇವಳೂ ಹೊರಗೆ ಬರುವುದೇ ಇಲ್ಲ. ಗೊತ್ತಾಗದೇ ಬಂದರೂ ಅವರೇನೂ ಹೆದರದೇ ಧೈರ್ಯವಾಗಿಯೇ ತಮ್ಮ ಕೆಲಸ ಮುಂದುವರೆಸುತ್ತ ಇವಳೆಡೆಗೆ ನೋಡಿ ಒಂದು ನಗೆಯನ್ನು ಒಗೆಯುವ ಕೃಪೆ ತೋರುತ್ತಾರೆ.
ಒಮ್ಮೊಮ್ಮೆ ತೊಳೆದ ಅಕ್ಕಿಯನ್ನು ತಂದು ಹರಡುತ್ತಾರೆ, ಇನ್ನೊಮ್ಮೆ ಹುಣಿಸೆಹಣ್ಣು, ಹಪ್ಪಳ, ಸಂಡಿಗೆ, ಬೇಳೆಕಾಳು, ಒಂದಿಲ್ಲ ಒಂದು ಶುರುವೇ ಇರುತ್ತದೆ. ಆಗೀಗ ಇವರು ತೊಳೆದುಹಾಕುವ ಬೆಡ್‌ಶೀಟುಗಳು, ಚಾದರಗಳು, ಡೋರ್ ಮ್ಯಾಟುಗಳಿಗೂ ನಮ್ಮ ಮನೆಯ ಕಂಪೌಂಡ್ ಗೋಡೆಯೇ ಗತಿ. ಕೆಟ್ಟುಹೋಗಲು ತಯಾರಾಗುತ್ತಿರುವ ಒಣಕೊಬ್ಬರಿಯ ಬುಟ್ಟಿಯೂ ಒಮ್ಮೊಮ್ಮೆ ಕಂಪೌಂಡು ಗೋಡೆ ಏರಿ ಕುಳಿತುಬಿಟ್ಟಿರುತ್ತದೆ. ಹೀಗೆ ಇವರ ಅಡುಗೆ ಮನೆಯ ಸಕಲ ಸಾಮಾನುಗಳು ಮೈಯೊಣಗಿಸಿಕೊಳ್ಳುವುದು ನಮ್ಮ ಮನೆಯಂಗಳದಲ್ಲಿಯೇ. ವಾರಕ್ಕೊಮ್ಮೆ ನಾನು ತೌರುಮನೆಗೆ ಹೋದಾಗ ಗೇಟು ತೆಗೆಯುವುದಕ್ಕೂ ಕಣ್ಣಿಗೆ ಬೀಳುವ ಈ ಎಲ್ಲ ವಸ್ತುಗಳನ್ನು ನೋಡಿ ನನ್ನ ಮೈಯುರಿದು ಹೋಗಿ ಅವನ್ನೆಲ್ಲ ಎತ್ತಿಒಗೆಯುವ ಆಸೆಯಾದರೂ ಅಮ್ಮನ ನೆರೆಹೊರೆಯವರ ಪ್ರೀತಿ ನೆನಪಾಗಿ ಸುಮ್ಮನಿರುತ್ತೇನೆ.
ನೆರೆ ಮಹಿಮೆ ಅಪರಂಪಾರವಾದದ್ದು. ಕಾರು ಖರೀದಿಸುವ ಪಕ್ಕದ ಮನೆಯವರು, ಅದನ್ನು ಪಾರ್ಕ್ ಮಾಡುವುದು ಎಲ್ಲಿ ಎನ್ನುವ ಸಮಸ್ಯೆಯ ಬಗ್ಗೆ, “ಆಮೇಲೆ ನೋಡಿದರಾಯ್ತು ಬಿಡು’ ಎಂದುಕೊಳ್ಳುತ್ತಾರೆ. ಗಾಡಿ ಕೊಂಡಕೂಡಲೇ ನೇರವಾಗಿ ಅಮ್ಮನ ಮುಂದೆ ಬಂದುನಿಲ್ಲುತ್ತಾರೆ. ಗಾಡಿ ಪಾರ್ಕಿಂಗ್‌ಗೆ ನಮ್ಮದೇ ಅಂಗಳ ಎನ್ನುವುದು ನನಗಂತೂ ಅರ್ಥವಾಗಿಬಿಡುತ್ತಿತ್ತು.
ನೆರೆಯವರ ಜೊತೆ ಗಡಿ ತಕರಾರು ಎಲ್ಲ ಕಡೆಯೂ ಇದ್ದದ್ದೇ. ಗಡಿ ತಂಟೆಯ ಕಾರಣಕ್ಕೆ ಪಾಕಿಸ್ತಾನ, ಬಾಂಗ್ಲಾ ದೇಶಗಳ ಜೊತೆಗೆ ಭಾರತ ಸೆಣಸಾಡಬೇಕಾಗಿದೆ. ನಮ್ಮ ದೇಶ ಅಪಾರ ನಷ್ಟವನ್ನೂ ಅನುಭವಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ನಾವು ಬೆಳಗಾವಿಯಲ್ಲಿರುವ ಕಾರಣ ಇನ್ನೊಂದು ಗಡಿತಂಟೆಗೂ ಸಾಕ್ಷಿಯಾಗುವ ಸಂಕಟ ನಮ್ಮದು. ಹೀಗೆ ಬಲಾಡ್ಯವಾದ ರಾಜ್ಯಗಳು, ದೇಶಗಳೇ “ನೆರೆ’ ಹಾವಳಿಯಿಂದ ತತ್ತರಿಸುವಾಗ ನಮ್ಮದೇನು ಮಹಾ ಎನಿಸಿ ಸ್ವಲ್ಪ ಉಪಶಮನ ಮಾಡಿಕೊಳ್ಳುತ್ತೇನೆ.
ನೀತಾ ರಾವ್