Advertisement
ಸಂಸ್ಕೃತದ ಸವಿಯನ್ನು ಪಡೆಯುವ ಆಸೆಯಿಂದ ವೆಂಕಟೇಶ್ ಎಂಬೊಬ್ಬ ನನ್ನ ಗೆಳೆಯರ ಸಹಾಯವನ್ನು ಪಡೆದು ಸಂಸ್ಕೃತದಲ್ಲಿ ಒಂದಿಷ್ಟು ಪಾಠ ಮಾಡಿಸಿಕೊಂಡಿದ್ದೆ. ಅವರು ನನಗೆ ಭೋಜಪ್ರಬಂಧ ಎಂಬ ಕಾವ್ಯದ ಬಗ್ಗೆ ತಿಳಿಯಪಡಿಸಿದರು.
Related Articles
Advertisement
ಪ್ರಮೇಯವೆಂದರೆ ಕಾವ್ಯರಚನೆಗೆ ಕೊಡುವ ಪರೀಕ್ಷೆ. ಭೋಜಪ್ರಬಂಧದಲ್ಲಿರುವುದು ಇಂಥ ನೂರಾರು ಪ್ರಮೇಯಗಳು. ಸಣ್ಣಸಣ್ಣ ಅಧ್ಯಾಯಗಳುಳ್ಳ ಈ ಕೃತಿ ಕುಂಬಾರನೊಬ್ಬನೋ ಮಹಿಳೆಯೊಬ್ಬಳ್ಳೋ (ಮಹಿಳೆಯರೂ ಅವನ ಆಸ್ಥಾನದಲ್ಲಿ ಸ್ವರಚಿತ ಕಾವ್ಯವಾಚನ ಮಾಡುತ್ತಿದ್ದರು!) ಆಸ್ಥಾನಕ್ಕೆ ಬಂದು ರಾಜನಿಗೆ ಸ್ವಸ್ತಿ ಹೇಳಿ ತನ್ನೊಂದು ಕಾವ್ಯವನ್ನು ಪ್ರಸ್ತುತಪಡಿಸುವ ಇಚ್ಛೆ ವ್ಯಕ್ತಪಡಿಸುವಾಗ ಮೊದಲು ಗದ್ಯರೂಪದ ಬರವಣಿಗೆ ಇದ್ದು ಆಮೇಲೆ ಕಾವ್ಯರೂಪದ ಶ್ಲೋಕ ಬರುತ್ತದೆ. ಭೋಜರಾಜನ ನಗರದಲ್ಲಿ ಇದ್ದವರೆಲ್ಲ ಕಾವ್ಯಪ್ರಯೋಗ ಪರಿಣತಮತಿಗಳಲ್ಲವೇ? ಭೋಜರಾಜನೊಮ್ಮೆ ಗುಲು ಗುಗ್ಗುಲು ಗುಲು ಗುಗ್ಗುಲೂ ಎಂದು ಸಾಲು ಬರುವ ಹಾಗೆ ಶ್ಲೋಕ ರಚಿಸಿ ಎಂದು ಕೇಳಿಕೊಳ್ಳುತ್ತಾನೆ. ಯಥಾಪ್ರಕಾರ ಕಾಳಿದಾಸ ರಚನೆ ಮಾಡಿಕೊಡುತ್ತಾನೆ.
ಜಂಬೂ ಫಲಾನಿ ಪಕ್ವಾನಿ ಪತಂತಿ ವಿಮಲೇ ಜಲೇಕಪಿ ಕಂಪಿತ ಶಾಖಾಭ್ಯೋ
ಗುಲು ಗುಗ್ಗುಲು ಗುಲು ಗುಗ್ಗುಲೂ
(ಜಂಬುನೇರಳೆ ಮರದ ಕೊಂಬೆಯನ್ನು ಕಪಿಗಳು ಅಲ್ಲಾಡಿಸಿದಾಗ ಹಣ್ಣಾದ ಫಲಗಳು ಕೆಳಗಿರುವ ಕೊಳದ ನಿರ್ಮಲ ನೀರಿನಲ್ಲಿ ಬಿದ್ದು ಗುಲು ಗುಗ್ಗುಲು ಗುಲು ಗುಗ್ಗುಲೂ ಎಂಬ ಶಬ್ದ ಕೇಳಿಸಿತು)
ಇನ್ನೊಮ್ಮೆ ಭೋಜರಾಜ, “ಠಠಂಠಠಂಠಂ ಠಠಠಂಠಠಂ ಠಃ ಎಂಬ ವಾಕ್ಯ ಸೇರಿಸಿ ಶ್ಲೋಕ ರಚಿಸಿ ಕೊಡಿ’ ಎಂದು ಕವಿಗಣಕ್ಕೆ ಹೇಳಿದ. ಕಾಳಿದಾಸ ಹೀಗೆ ಬರೆದು ತಂದ-
ರಾಮಾಭಿಷೇಕೇ ಮದವಿಹ್ವಲಾಯಾಃ
ಹಸ್ತಾಚ್ಯುತೋ ಹೇಮಘಟಸ್ತರುಣ್ಯಾಃ
ಸೋಪಾನಮಾರ್ಗೇಷು ಕರೋತಿ ಶಬ್ದಂ
ಠಠಂಠಠಂಠಂ ಠಠಠಂಠಠಂ ಠಃ
(ರಾಮನ ರಾಜ್ಯಾಭಿಷೇಕದ ಸಮಯದಲ್ಲಿ, ಬಂಗಾರದ ತೀರ್ಥ ತಂಬಿಗೆಯೊಂದು ತರುಣಿಯ ಕೈಯಿಂದ ಜಾರಿ ಕೆಳಗೆ ಬಿತ್ತು. ಅದು ಮೆಟ್ಟಿಲುಗಳ ಮೇಲೆ ಉರುಳುತ್ತ ಠಠಂಠಠಂಠಂ ಠಠಠಂಠಠಂ ಠಃ ಎಂದು ಸದ್ದು ಮಾಡಿತು.)
ಒಂದು ಒಳ್ಳೆಯ ಕೃತಿ ಬಂದು ಜನಪ್ರಿಯವಾದರೆ ಮುಂದೆ ಅದಕ್ಕೆ ಕೆಲವು ಬುದ್ಧಿವಂತರು ತಮ್ಮದೇ ಕೆಲವು ಶ್ಲೋಕಗಳನ್ನು ರಚಿಸಿ ಸೇರಿಸುವುದೂ ಇದೆ. ಮಹಾಭಾರತ ದಲ್ಲಿಯೂ ವ್ಯಾಸರು ಬರೆದಿರದ ಇಂಥ ಭಾಗಗಳು ಇದ್ದಾವೆಂದು ವೆಂಕಟಾಚಲ ಅಯ್ಯರ್ ಎಂಬವರು ಇಂಗ್ಲಿಷ್‌ನಲ್ಲಿ 450 ಪುಟಗಳ ಒಂದು ಪ್ರೌಢ ಪ್ರಬಂಧವನ್ನೇ ಬರೆದಿದ್ದಾರೆ. ಹಾಗೆ ಭೋಜಪ್ರಬಂಧ ದಲ್ಲಿಯೂ ಕೆಲವು ಶ್ಲೋಕಗಳನ್ನು ಕಾಣಬಹುದು. ಅಂಥ ಒಂದು ಭಾಗ ಹೀಗಿದೆ. ಭೋಜರಾಜ ಒಂದು ದಿನ ಕ ಖ ಗ ಘ ಎಂದು ಕವಿತೆಯಲ್ಲಿ ಸೇರಿಸಲು ಹೇಳಿದನಂತೆ. ಉಳಿದ ಕವಿಗಳು ರಚಿಸಲಾಗದೆ ಸೋಲೊಪ್ಪುತ್ತಾರೆ. ಕಾಳಿದಾಸನಿಗೂ ಏನು ಮಾಡುವುದೆಂದು ತಿಳಿಯುವುದಿಲ್ಲ. ಅವನು ಸೋಲೊಪ್ಪಿಕೊಳ್ಳಲು ಆಸ್ಥಾನಕ್ಕೆ ಬರುವ ದಾರಿಯಲ್ಲಿ ಒಬ್ಬಳು ಹುಡುಗಿ ಭೇಟಿಯಾಗುತ್ತಾಳೆ. (ಕಾಳಿದಾಸನನ್ನು ಇಂಥವರೇ ಭೇಟಿಯಾಗುವುದು!) ಕಾಳಿದಾಸ ಅವಳನ್ನು ಮಾತನಾಡಿಸುತ್ತಾನೆ. ಅವರ ಪ್ರಶ್ನೋತ್ತರವೇ ಒಂದು ಶ್ಲೋಕವಾಗುತ್ತದೆ. ಕಾ ತ್ವಂ ಬಾಲೇ? – ಕಾಂಚನ ಮಾಲಾ
ಕಸ್ಯಾಃ ಪುತ್ರೀ? -ಕನಕಲತಾಯಾಃ
ಹಸ್ತೇ ಕಿಂ ತೇ? -ತಾಲೀಪತ್ರಂ
ಕಾ ವಾ ರೇಖಾ -ಕ ಖ ಗ ಘ
(ಯಾರು ನೀನು ಹುಡುಗಿ? ನಾನು ಕಾಂಚನಮಾಲಾ; ಯಾರ ಮಗಳು? ಕನಕಲತೆ ಎಂಬವರ ಮಗಳು; ನಿನ್ನ ಕೈಲಿರುವುದೇನು? ತಾಳೆಯೋಲೆ; ಅಲ್ಲಿ ಏನು ಬರೆದಿದೆ? ಕ ಖ ಗ ಘ) ಕಾಳಿದಾಸ ಭೋಜರಾಜನಲ್ಲಿ ಆ ಶ್ಲೋಕ ಹೇಳಿ ಉಡುಗೊರೆ ಪಡೆಯುತ್ತಾನೆ. ಭೋಜರಾಜನಿಗೆ ಎಲ್ಲ ರಾಜರುಗಳಿಗಿರುವಂತೆ ತಾನು ಅಜರಾಮರನಾಗಬೇಕೆಂಬ ಆಸೆಯಾಯಿತು. ಅದಕ್ಕಾಗಿ ಕಾಳಿದಾಸನೊಡನೆ ಅವನ ಹೆಸರಿನಲ್ಲೊಂದು ಚರಮಗೀತೆ ಬರೆಯಲು ಕೇಳಿಕೊಂಡ. “ಚರಮಗೀತೆಯೇ, ಸಾಧ್ಯವಿಲ್ಲ’ ಎಂದ ಕಾಳಿದಾಸ. ತಾನು ಬರೆದದ್ದು ಸತ್ಯವಾಗುತ್ತದೆ ಎಂದ ಅವನು. ಸರಸ್ವತೀಪುತ್ರನಲ್ಲವೆ? ಆದರೆ, ಭೋಜರಾಜ ಕೇಳಬೇಕಲ್ಲ? ಅವನು ಒಂದು ಉಪಾಯಹೂಡಿದ. ಎಲ್ಲೋ ಅಡಗಿ ಕುಳಿತು ನಗರದಲ್ಲಿ “ಭೋಜರಾಜ ಸತ್ತಿದ್ದಾನೆ’ ಎಂದು ಪುಕಾರು ಹುಟ್ಟಿಸಿದ. ಕಾಳಿದಾಸ ಒಂದು ಚರಮಗೀತೆ ಬರೆದ. ಅದ್ಯ ಧಾರಾ ನಿರಾಧಾರಾ, ನಿರಾಲಂಬಾ ಸರಸ್ವತೀ
ಪಂಡಿತಾ ಖಂಡಿತಾ ಸರ್ವೆà, ಭೋಜರಾಜೇ ದಿವಂಗತೇ (ಇಂದು ಧಾರಾನಗರವು ಆಧಾರವಿಲ್ಲದಂತಾಯಿತು, ಸರಸ್ವತಿಯೂ ಆಧಾರವಿಲ್ಲದವಳಾಗಿದ್ದಾಳೆ. ವಿದ್ವಾಂಸರೆಲ್ಲ ಅನಾಥರಾದರು, ಭೋಜರಾಜನು ದಿವಂಗತನಾದುದರಿಂದ ಎಲ್ಲ ಪಂಡಿತರೂ ಶೋಕಾಕುಲರಾಗಿದ್ದಾರೆ.)
ಚರಮಗೀತೆ ಕೇಳಿ ಭೋಜರಾಜ ಪ್ರಕಟಗೊಂಡ. ಆಗ ಕಾಳಿದಾಸ ತನ್ನ ಗೀತೆಯನ್ನು ಹೀಗೆ ಬದಲಾಯಿಸಿದ-
ಅದ್ಯ ಧಾರಾ ಸದಾಧಾರಾ, ಸದಾಧಾರಾ ಸರಸ್ವತೀ
ಪಂಡಿತಾ ಮಂಡಿತಾ ಸರ್ವೆ, ಭೋಜರಾಜೇ ಭುವಿ ಸ್ಥಿತೇ
(ಇಂದು ಧಾರಾನಗರವು ಆಧಾರಪೂರ್ಣವಾಗಿದೆ. ಅಂತೆಯೇ ಸರಸ್ವತಿಗೂ ಆಧಾರ ಒದಗಿದೆ. ಭೋಜರಾಜನು ಭೂಮಿಯ ಮೇಲೆ ಜೀವಂತ ಇದ್ದುದರಿಂದ ಪಂಡಿತರು ಸುಖಸಂತೋಷಗಳಿಂದ ಬದುಕುತ್ತಿದ್ದಾರೆ.) ಇದು ಭಾಷೆಯಲ್ಲಿ ಆಡುವ ಆಟ. ಒಂದು ರೀತಿಯ ತುಂಟತನ. ಹೀಗೆ ಭಾಷೆಯಲ್ಲಿ ಆಟ ಆಡಬೇಕಾದರೆ ಅದರಲ್ಲಿ ನೈಪುಣ್ಯ ಬೇಕು. ಬಳಸುವುದರಲ್ಲಿ ಪ್ರಭುತ್ವವಿರಬೇಕು. ಶ್ರೀಬಲ್ಲಾಳನಿಗೆ ಇವು ಸಾಧಿಸಿದೆಯೆಂಬುದು ವೇದ್ಯ. ಆದುದರಿಂದಲೇ ಭೋಜಪ್ರಬಂಧ ಸಂಸ್ಕೃತದ ಮುಖ್ಯ ಕೃತಿಗಳಲ್ಲೊಂದಾಯಿತು. ಗೋಪಾಲಕೃಷ್ಣ ಪೈ