ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಮತ್ತೂಮ್ಮೆ ಭೂಮಿಯೊಳಗಿಂದ ಭಾರೀ ಶಬ್ಧ ಕೇಳಿ ಬಂದಿದ್ದು, ಕೆಲ ಮನೆಗಳು ಬಿರುಕು ಬಿಟ್ಟಿವೆ. ಕಳೆದ ಕೆಲವು ದಿನಗಳಿಂದ ಕೊಗ್ರೆ ಹಾಗೂ ಸುತ್ತಲ ಗ್ರಾಮಗಳಲ್ಲಿ ಪದೇಪದೆ ಭೂಮಿಯೊಳಗಿಂದ ಶಬ್ಧ ಕೇಳಿ ಬರುತ್ತಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಿದೆ.
ಈ ಹಿಂದೆಯೂ ಕೆಲ ಮನೆಗಳು ಬಿರುಕು ಬಿಟ್ಟಿದ್ದವು. ಇದೀಗ ಶುಕ್ರವಾರ ಮಧ್ಯರಾತ್ರಿ ಮತ್ತೂಮ್ಮೆ ಇಂತಹುದೇ ಅನುಭವವಾಗಿದೆ. ಕೊಗ್ರೆ, ಅಬ್ಬಿಕಲ್ಲು ಗ್ರಾಮದಲ್ಲಿ ಈ ರೀತಿಯ ಅನುಭವವಾಗಿದೆ. ನಿರಂತರ ಶಬ್ಧ, ಭೂಕುಸಿತದಿಂದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಕೊಗ್ರೆ ಗ್ರಾಮದಲ್ಲಿ ಭೂಕಂಪ ಆಗಿಲ್ಲ. ಈ ಕುರಿತು ಜನರು ಭಯಪಡಬೇಕಾದ ಅವಶ್ಯಕತೆಯಿಲ್ಲ ಎಂದರು.
ಶನಿವಾರ ಕೊಗ್ರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆ ಗ್ರಾಮಕ್ಕೆ ಕಳೆದ ವಾರ ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿಗಳು ಸಹ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗುಡ್ಡಗಳಲ್ಲಿ ಇರುವಂತಹ ಕೆಲವು ಗ್ಯಾಪ್‌ಗ್ಳು ಸೇರಿಕೊಳ್ಳುತ್ತಿವೆ. ಒಮ್ಮೇಲೆ ಗುಡ್ಡ ಕೆಳಗೆ ಇಳಿದಾಗ ಈ ರೀತಿಯ ಶಬ್ಧವಾಗುತ್ತದೆ. ಸಹಜವಾಗಿಯೇ ಆಗ ಸುತ್ತಲ ಪ್ರದೇಶಗಳಲ್ಲಿ ಭೂಮಿ ಕಂಪಿಸುತ್ತದೆ.ಸ್ಥಳಕ್ಕೆ ಭೇಟಿ ನೀಡಿದ್ದ ವಿಜ್ಞಾನಿಗಳು ಸಹ ಇದೇ ರೀತಿಯ ವರದಿ ಸಲ್ಲಿಸಿದ್ದಾರೆ. ಜತೆಗೆ ಕೊಗ್ರೆ ಗ್ರಾಮದಲ್ಲಿ ಒಂದು ಗುಹೆ ಇದೆ. ಆ ಗುಹೆ ಎಲ್ಲಿಗೆ ಹೋಗುತ್ತದೆ ಎಂಬುದು ತಿಳಿದಿಲ್ಲ. ಒಳಗೆ ಕೊಚ್ಚೆ ಇರುವುದರಿಂದ ಹೋಗಿ ಪರಿಶೀಲಿಸಲೂ ಆಗುತ್ತಿಲ್ಲ. ಆ ಗುಹೆಯಲ್ಲಿಯೂ ಗ್ಯಾಪ್ ಇದ್ದು, ಉತ್ತಮ ಮಳೆ ಆಗಿರುವುದರಿಂದ ಸದರಿ ಗ್ಯಾಪ್ ಮುಚ್ಚುತ್ತಿದೆ. ಅದರಿಂದಲೂ ಶಬ್ದವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ರಿಕ್ಟರ್ ಮಾಪಕಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಭೂಕಂಪವಾದ ಕೂಡಲೆ ಮಾಹಿತಿ ಲಭ್ಯವಾಗುತ್ತದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಭೂಕಂಪವಾಗಿರುವ ಮಾಹಿತಿ ಇಲ್ಲ ಎಂದು ಹೇಳಿದರು.