ಶ್ರೀನಗರ್:ಜಮ್ಮು-ಕಾಶ್ಮೀರದಲ್ಲಿ ಮಂಗಳವಾರ ಲಘು ಭೂಕಂಪ ಸಂಭವಿಸಿದ್ದು, ಯಾವುದೇ ರೀತಿಯ ಸಾವು, ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿ ಹೇಳಿದೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಮಂಗಳವಾರ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಕಳೆದ 24ಗಂಟೆಗಳಲ್ಲಿ ನಾಲ್ಕು ಬಾರಿ ಭೂಕಂಪ ಸಂಭವಿಸಿರುವುದಾಗಿ ವರದಿ ವಿವರಿಸಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಇಂದು ಕಾಶ್ಮೀರದ ದೋಡಾ ಜಿಲ್ಲೆಯ ಭಾದೆರ್ವಾ ನಗರದಲ್ಲಿ 3.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ತಿಳಿಸಿದ್ದಾರೆ. ಭೌಗೋಳಿಕವಾಗಿ ಕಾಶ್ಮೀರ ಭೂಕಂಪದ ಕೇಂದ್ರಬಿಂದು ಪ್ರದೇಶವಾಗಿದೆ.
ಮಂಗಳವಾರ ಬೆಳಗ್ಗೆ 7ಗಂಟೆಗೆ ಮೊದಲ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರ ಸ್ಥಳ ತಜಕಿಸ್ತಾನವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನಕ್ಕೆ ಹೆದರಿದ ಜನರು ಮನೆಯಿಂದ ಹೊರಗೆ ಓಡಿಹೋಗಿರುವುದಾಗಿ ವರದಿ ಹೇಳಿದೆ. ಕಾಶ್ಮೀರ ಕಣಿವೆಯ ಶ್ರೀನಗರ ಸೇರಿದಂತೆ ಕಿಸ್ತ್ ವಾರ್, ದೋಡಾ ಜಿಲ್ಲೆಗಳಲ್ಲಿ ಭೂಕಂಪನವಾಗಿತ್ತು.
ಜೂನ್ 14ರ ರಾತ್ರಿಯಿಂದ ಸತತವಾಗಿ 3.0ರಷ್ಟು ತೀವ್ರತೆಯ ಆರು ಭೂಕಂಪಗಳು ಜಮ್ಮು ಕಾಶ್ಮೀರದ ಕಟ್ರಾ ನಗರದಲ್ಲಿ ಸಂಭವಿಸಿದ್ದವು. ಕೇಂದ್ರಾಡಳಿತ ಪ್ರದೇಶದಲ್ಲಿನ ಪುಟ್ಟ ನಗರ ಕಟ್ರಾ. ಇದು ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುವವರಿಗೆ ಮೂಲ ತಾಣವಾಗಿದೆ ಎಂದು ವರದಿ ತಿಳಿಸಿದೆ.