Advertisement

Sagara ಮಾರಕ ವಸ್ತುವಿನ ಜಾಹಿರಾತಿನಲ್ಲಿ ನಟಿಸಿ ಕೋಟ್ಯಾಂತರ ರೂಪಾಯಿ ಆದಾಯ

04:44 PM Nov 27, 2023 | Shreeram Nayak |

ಸಾಗರ: ಹೆಸರಾಂತ ಚಿತ್ರನಟರು ಗುಟ್ಕಾ ಕಂಪನಿಯ ಜಾಹಿರಾತಿನಲ್ಲಿ ಭಾಗವಹಿಸಿ ನಟನೆಯಿಂದ ಬಂದ ಹಣ ಸಾಲದು ಎನ್ನುವಂತೆ ಮಾರಕ ವಸ್ತುವಿನ ಜಾಹಿರಾತಿನಲ್ಲಿ ನಟಿಸಿ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹಿಸುತ್ತಿದ್ದಾರೆ. ಜನರಿಗೆ ಗುಟ್ಕಾ ತಿನ್ನಿ ಎನ್ನುವ ಉಪದೇಶ ಮಾಡುತ್ತಿರುವುದು ಸಮಾಜದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಹಾಗೂ ಮಹಿಳಾ ಸಮ್ಮೇಳನಾಧ್ಯಕ್ಷೆ ಪ್ರಫುಲ್ಲಾ ಮಧುಕರ್ ಗುಡುಗಿದ್ದಾರೆ.

Advertisement

ಇಲ್ಲಿನ ಭಾರತೀತೀರ್ಥ ಸಭಾಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಮಹಿಳಾ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿ, ಮಾರಕ ವಸ್ತು ಮಾರಾಟವೇ ತಪ್ಪು ಎನ್ನುತ್ತಿರುವಾಗ ಅದನ್ನು ತಮ್ಮ ನಟನೆಯ ಇಮೇಜ್ ಬಳಸಿ ತಿನ್ನಿ ಎಂದು ಸಾರ್ವಜನಿಕವಾಗಿ ಜಾಹೀರಾತು ನೀಡುತ್ತಿರುವುದರಿಂದ ಯುವಸಮೂಹ ತನ್ನ ನೆಚ್ಚಿನ ನಟರೇ ತಿಂದ ಮೇಲೆ ನಾವ್ಯಾಕೆ ತಿನ್ನಬಾರದು ಎಂದು ಗುಟ್ಕಾ ದಾಸರಾಗುತ್ತಿದ್ದಾರೆ. ಇಂತಹ ನಟರು ನಟಿಸಿದ ಜಾಹೀರಾತುಗಳನ್ನು ದಿನಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಹಾಕದಂತೆ ಮಹಿಳೆಯರು ಪ್ರತಿರೋಧ ಮಾಡಬೇಕು ಎಂದರು.

ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಾಗ ಮಹಿಳೆಯರಿಗೆ ಭಾರತ ಅತ್ಯಂತ ಸುರಕ್ಷಿತ ಹಾಗೂ ಉತ್ತಮ ಜೀವನ ನಡೆಸಲು ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟ ದೇಶವಾಗಿದೆ. ಅಭಿವೃದ್ಧಿ ಹೊಂದಿದ ಮತ್ತು ಶ್ರೀಮಂತ ರಾಷ್ಟ್ರಗಳಲ್ಲಿ ಮಹಿಳೆಯರ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ಎರಡು ತಲೆಮಾರಿನ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸಾಮಾಜಿಕ ಸಮಾನತೆ ಪಡೆಯುವ ಹಕ್ಕು ಮಹಿಳೆಯರು ಮಂಡಿಸುತ್ತಿದ್ದಾರೆ. ಇಂತಹ ಸಮ್ಮೇಳನಗಳು ಮಹಿಳೆಯರ ಧ್ವನಿಯಾಗಬೇಕು. ಮಹಿಳೆ ಅಬಲೆಯಲ್ಲ, ಸಬಲೆ ಎನ್ನುವುದನ್ನು ಪ್ರತಿಪಾದಿಸಬೇಕು ಎಂದರು.

ವೇದಿಕೆಯಲ್ಲಿ ಚೂಡಾಮಣಿ ರಾಮಚಂದ್ರ, ಡಾ. ವಿಜಯಲಕ್ಷ್ಮೀ ಹೆಗಡೆ ಡಾ. ಕೆಳದಿ ವೆಂಕಟೇಶ್ ಜೋಯ್ಸ್, ಅಶ್ವಿನಿಕುಮಾರ್, ಪುಷ್ಪಾ ಮಲ್ಲಿಕಾರ್ಜುನ್ ಇನ್ನಿತರರು ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next