Advertisement

ಕಲಿಕೆಯೊಂದಿಗೆ ಗಳಿಕೆಗೂ ಸೈ ಎಂದ ವಿದ್ಯಾರ್ಥಿಗಳು

11:50 PM Jul 19, 2019 | mahesh |

ಮಹಾನಗರ: ವಾರಾಂತ್ಯದ ರಜೆಯಲ್ಲಿ ಈ ಮಕ್ಕಳು ಟಿವಿ, ಮೊಬೈಲ್ ನೋಡುತ್ತಾ ಕಾಲ ಕಳೆಯುವುದಿಲ್ಲ. ಕೈಯಲ್ಲಿ ಪೇಪರ್‌ ಹಿಡಿದು ಬ್ಯಾಗ್‌ ತಯಾರಿಕೆಯಲ್ಲಿ ತೊಡಗುತ್ತಾರೆ. ತಾವೇ ತಯಾರಿಸಿದ ಬ್ಯಾಗ್‌ ಅನ್ನು ಮನೆ ಹತ್ತಿರದ ಅಂಗಡಿಗಳಿಗೆ ನೀಡಿ ಕಲಿಕೆಯೊಂದಿಗೆ ಗಳಿಕೆಯಲ್ಲಿ ನಿರತರಾಗಿದ್ದಾರೆ.

Advertisement

ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣದ ಸಂಕಲ್ಪ ತೊಟ್ಟಿರುವ ಬೆಂದೂರು ಸೈಂಟ್ ಆ್ಯಗ್ನೆಸ್‌ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳು ಪ್ಲಾಸ್ಟಿಕ್‌ ಬದಲು ಪರಿಸರಸ್ನೇಹಿ ಪೇಪರ್‌ ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿನಿ ಮಂಗಳಾ ಭಟ್ ಅವರ ಬಳಿ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಪೇಪರ್‌ ಬ್ಯಾಗ್‌ ತಯಾರಿಕೆ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. 4ರಿಂದ 7ನೇ ತರಗತಿಯ ಮಕ್ಕಳು ಪೇಪರ್‌ ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

200 ರೂ. ಗಳಿಕೆ!
15 ದಿನಗಳಿಂದ ಶಾಲೆಗೆ ರಜೆ ಇರುವ ದಿನಗಳಲ್ಲಿ ಮಕ್ಕಳು ಪೇಪರ್‌ ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು ತಯಾರಿಸಿದ ಬ್ಯಾಗ್‌ನ್ನು ಶಾಲೆಯ ಸುತ್ತಮುತ್ತಲಿರುವ ಅಂಗಡಿ ಗಳಿಗೆ ನೀಡಿದಾಗ ವಿದ್ಯಾರ್ಥಿಗಳಿಗೆ ಅಂಗಡಿಯವರು ಚಾಕೋಲೇಟ್, ಇತರ ಸಿಹಿತಿಂಡಿ ನೀಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರೇರಣೆಗೊಂಡ ಮಕ್ಕಳು ತಮ್ಮ ಮನೆ ಪರಿಸರದಲ್ಲಿರುವ ಅಂಗಡಿಗಳಿಗೆ ಬ್ಯಾಗ್‌ ತಯಾರಿಸಿ ನೀಡಿದ್ದಾರೆ. ಅಂಗಡಿಯವರು ಸುಮಾರು ಅರ್ಧ ಕೆಜಿ ಬ್ಯಾಗ್‌ಗೆ 200 ರೂ.ಗಳಷ್ಟು ಹಣ ನೀಡಿದ್ದು, ಕಲಿಕೆಯೊಂದಿಗೆ ಗಳಿಕೆಯ ಸಂಭ್ರಮದಲ್ಲಿ ವಿದ್ಯಾರ್ಥಿಗಳಿದ್ದಾರೆ. ಅಂಗಡಿಯವರು ನೇರವಾಗಿ ವಿದ್ಯಾ ರ್ಥಿಗಳ ಬ್ಯಾಂಕ್‌ ಖಾತೆಗೇ ಹಣ ಜಮಾವಣೆ ಮಾಡುವುದರಿಂದ ಹಣ ಉಳಿ ತಾಯಕ್ಕೂ ದಾರಿಯಾಗಿದೆ. ಬಹುತೇಕ ಬಡ ಮನೆಯ ವಿದ್ಯಾರ್ಥಿಗಳೇ ಇಲ್ಲಿ ಕಲಿಯುತ್ತಿರುವುದರಿಂದ ಅವರ ಶೈಕ್ಷಣಿಕ ವೆಚ್ಚಕ್ಕೂ ಇದು ದಾರಿಯಾಗುತ್ತದೆ ಎನ್ನು ತ್ತಾರೆ ಶಾಲೆಯ ಮುಖ್ಯ ಶಿಕ್ಷಕರು.

ವೃತ್ತ ಪತ್ರಿಕೆಗಳ ಎರಡು ಪುಟ ಗಳಲ್ಲಿ ಒಂದು ಬ್ಯಾಗ್‌ನ್ನು ತಯಾರಿ ಮಾಡ ಲಾಗುತ್ತದೆ. ಈ ಬ್ಯಾಗ್‌ ತಯಾರಿಗೆ ಕೇವಲ ಒಂದು ನಿಮಿಷ ಸಾಕು. ಬೇಳೆಕಾಳುಗಳು, ಇತರ ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ ಬದಲು ಇಂತಹ ಬ್ಯಾಗ್‌ಗಳಲ್ಲಿ ನೀಡಲು ಅಂಗಡಿಯವರಿಗೂ ಸಹಕಾರಿ ಯಾಗುತ್ತದೆ. ವಿದ್ಯಾರ್ಥಿಗಳು ದಪ್ಪನೆಯ ದಾರವನ್ನು ಪೋಣಿಸಿ ಹ್ಯಾಂಡ್‌ ಬ್ಯಾಗ್‌ಗಳನ್ನೂ ತಯಾರಿಸುತ್ತಿರುವುದರಿಂದ ಹೆಚ್ಚು ಉಪಯುಕ್ತವಾಗಿದೆ. ವಿವಿಧ ಗಾತ್ರಗಳ ಬ್ಯಾಗ್‌ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

-ಪರಿಸರಸ್ನೇಹಿ ಬ್ಯಾಗ್‌
-ಅರ್ಧ ಕೆ. ಜಿ. ಗೆ 200 ರೂ.
-ಸುಲಭ ತಯಾರಿ

ಸಂಪಾದನೆ ಮಾಡಿದ ಖುಷಿ

ಕಳೆದ ವಾರ ತಯಾರಿಸಿದ ಸುಮಾರು ಅರ್ಧ ಕೆಜಿಗೂ ಹೆಚ್ಚು ಬ್ಯಾಗ್‌ಗಳನ್ನು ಮನೆ ಪಕ್ಕದಲ್ಲಿರುವ ಅಂಗಡಿಗೆ ನೀಡಿದೆ. ಅಂಗಡಿಯವರು 200 ರೂ. ನೀಡಿದರು. ಇನ್ನು ಮುಂದೆಯೂ ಬ್ಯಾಗ್‌ ತಯಾರಿಸಿ ಅಂಗಡಿಯವರಿಗೆ ನೀಡುತ್ತೇನೆ. ಅದರಿಂದ ಬಂದ ಹಣವನ್ನು ನನ್ನ ಶಾಲಾ ಖರ್ಚಿಗೆ ಬಳಸಿಕೊಳ್ಳುತ್ತೇನೆ. ನನಗೆ ಸಾಧ್ಯವಾದಷ್ಟು ಹಣ ನಾನು ಸಂಪಾದಿಸಿದರೆ ಹೆತ್ತವರಿಗೂ ಸುಲಭವಾಗಬಹುದು.
– ಕೀರ್ತಿ,ವಿದ್ಯಾರ್ಥಿನಿ
ಪರಿಸರ ಪಾಠದಿಂದ ಪ್ರಯೋಜನ

ಪ್ಲಾಸ್ಟಿಕ್‌ನಿಂದ ಪರಿಸರಕ್ಕಾಗುವ ಹಾನಿಯ ಬಗ್ಗೆ ಮಕ್ಕಳಿಗೆ ಪಾಠದ ಸಮಯದಲ್ಲಿ ಹೇಳುತ್ತಲೇ ಇರುತ್ತೇವೆ. ಎಳೆಯ ಮಕ್ಕಳಿಗೂ ನೀರಿಗಾಗಿ ಸಂಕಷ್ಟ, ಪರಿಸರ ನಾಶದ ಬಗ್ಗೆ ತಿಳುವಳಿಕೆ ಮೂಡುತ್ತಿದೆ. ಅದಕ್ಕಾಗಿ ಪ್ಲಾಸ್ಟಿಕ್‌ ಬದಲಾಗಿ ಪೇಪರ್‌ ಬ್ಯಾಗ್‌ ಬಳಕೆಗಾಗಿ ಮಕ್ಕಳೂ ಮುಂದಾಗುತ್ತಿದ್ದಾರೆ. ಸುಮಾರು 15 ದಿನಗಳಿಂದ ಮಕ್ಕಳು ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿದ್ದಾರೆ.
– ಸಿ| ಜೋತ್ಸಾ ್ನ,ಮುಖ್ಯ ಶಿಕ್ಷಕಿ ಸಂತ ಆ್ಯಗ್ನೆಸ್‌ ಖಾಸಗಿ ಅ.ಹಿ. ಪ್ರಾ. ಶಾಲೆ
Advertisement

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next