Advertisement
ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘ ಶನಿವಾರ ನಗರದ ನೂತನ್ ಕಾಲೇಜು ಮೈದಾನದಲ್ಲಿ ಗ್ರಾಮ ಆಡಳಿತ ಅಧಿಕಾರಿ ಬೇಡಿಕೆ ಘೋಷಣೆಗಾಗಿ ಏರ್ಪಡಿಸಿದ್ದ ಗ್ರಾಮಲೆಕ್ಕಾಧಿಕಾರಿಗಳ ರಾಜ್ಯಮಟ್ಟದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕಳೆದ 40 ವರ್ಷಗಳಿಂದ ಆಗದ ವೃಂದ ಮತ್ತು ನೇಮಕಾತಿ ನಿಯಮಕ್ಕೆ ಸಾಕಷ್ಟು ವಿರೋಧದ ನಡುವೆಯೂ ತಿದ್ದುಪಡಿ ತಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಮುಂಬಡ್ತಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಈ ಕೆಲಸ ಹಿಂದೆಯೇ ಆಗಿದ್ದರೆ ಅದೇಷ್ಟೋ ಗ್ರಾಮಲೆಕ್ಕಾಧಿಕಾರಿಗಳು ಬಡ್ತಿ ಲಾಭ ಪಡೆದುಕೊಳ್ಳುತ್ತಿದ್ದರು ಎಂದ ಸಚಿವರು, ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ, 78 ಗಂಟೆಗಳಲ್ಲಿ ಒಂದು ಕರೆ ಮಾಡಿದರೆ ಪಿಂಚಣಿ ಕೊಡುವ ಕಾರ್ಯಕ್ರಮ, ರೈತರೇ ತಮ್ಮ ಜಮೀನಿನ ನಕ್ಷೆ ಹಾಕಿಕೊಳ್ಳಲು ಅನುಕೂಲ ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ ಎಂದರು.
ಕೇಂದ್ರ ಮಾದರಿ ವೇತನದ ಬಗ್ಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಒಂದು ಸುತ್ತು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದಾರೆ. ನಾನೂ ಈ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇನೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳು ಗ್ರಾಮಲೆಕ್ಕಾಧಿಕಾರಿಗಳ ಮೂಲಕವೇ ಅನುಷ್ಠಾನವಾಗುತ್ತವೆ. ಹಾಗಾಗಿ ಗ್ರಾಮಲೆಕ್ಕಾಧಿಕಾರಿಗಳು ಇಲ್ಲದಿದ್ದರೆ ಗ್ರಾಮವೇ ಇಲ್ಲ ಎನ್ನುವ ಸ್ಥಿತಿ ಇದೆ. ಗ್ರಾಮಲೆಕ್ಕಾಧಿಕಾರಿಗಳು ಬಡವರ, ರೈತರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕು. ತನ್ಮೂಲಕ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷ ಬಿ. ದೊಡ್ಡಬಸಪ್ಪರೆಡ್ಡಿ ಇನ್ನಿತರ ಪ್ರಮುಖರು ಸಮಾವೇಶದಲ್ಲಿದ್ದರು.
ಕಾದು ಕಾದು ಸುಸ್ತಾದರು
ಗ್ರಾಮಲೆಕ್ಕಿಗರ ಸಮಾವೇಶದ ಉದ್ಘಾಟನೆ ಕಾರ್ಯಕ್ರಮ ಬೆಳಗ್ಗೆ 11ಗಂಟೆಗೆ ನಿಗದಿಯಾಗಿತ್ತು. ಆದರೆ, ಕಾರ್ಯಕ್ರಮ ಶುರುವಾಗಿದ್ದು ಸಂಜೆ 4 ಗಂಟೆಗೆ. ರಾಜ್ಯದ ವಿವಿಧೆಡೆಯಿಂದ ಬಂದ ಗ್ರಾಮಲೆಕ್ಕಾಧಿಕಾರಿಗಳು ಕಾರ್ಯಕ್ರಮ ವಿಳಂಬವಾಗಿದಕ್ಕೆ ಬೇಸರ ವ್ಯಕ್ತಪಡಿಸಿದರು. ನಿರೂಪಕರು “ಕೆಲವೇ ನಿಮಿಷಗಳಲ್ಲಿ ಅತಿಥಿಗಳು ಬರುತ್ತಾರೆ’ ಎಂದಾಗಲೆಲ್ಲ ಸಭಿಕರು ಕೇಕೇ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು. ಅನೇಕರು ದಾವಣಗೆರೆ ನಗರ ಸುತ್ತಾಡಿ ಶಾಂಪಿಂಗ್ ಮಾಡಿದರು. ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಂದಾಯ ಸಚಿವರ ಹೆಸರು ಮುದ್ರಿಸಲಾಗಿತ್ತು. ಆದರೆ, ಕಂದಾಯ ಸಚಿವರು ಮಾತ್ರ ಬಂದಿರುವುದು ಗ್ರಾಮಲೆಕ್ಕಾಧಿಕಾರಿಗಳಿಗೆ ಇನ್ನಷ್ಟು ಬೇಸರ ಮೂಡಿಸಿತು.
ನಿರಾಸೆಗೊಳಗಾದ ಗ್ರಾಮ ಲೆಕ್ಕಿಗರು
ಗ್ರಾಮಲೆಕ್ಕಾಧಿಕಾರಿಗಳನ್ನು ‘ಗ್ರಾಮ ಆಡಳಿತ ಅಧಿಕಾರಿ’ ಎಂದು ಘೋಷಿಸುವ ಬೇಡಿಕೆಯನ್ನೇ ಮುಖ್ಯವಾಗಿರಿಸಿಕೊಂಡು ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದಿಂದ ರಾಜ್ಯಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ಎಲ್ಲರೂ ಕಂದಾಯ ಸಚಿವರು ಇದೇ ವೇದಿಕೆಯಲ್ಲಿ ಗ್ರಾಮಲೆಕ್ಕಾಧಿಕಾರಿಗಳನ್ನು ‘ಗ್ರಾಮ ಆಡಳಿತ ಅಧಿಕಾರಿ’ ಎಂದು ಘೋಷಿಸುತ್ತಾರೆ ಎಂದು ಆಶಿಸಿದ್ದರು. ಆದರೆ, ಸಚಿವರು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರಿಂದ ಗ್ರಾಮಲೆಕ್ಕಾಧಿಕಾರಿಗಳು ನಿರಾಸೆಗೊಳಗಾದರು.