Advertisement

ಹಣ ಗಳಿಸದಿದ್ದರೂ ಗುಣ ಗಳಿಸಿ: ರಂಭಾಪುರಿ ಶ್ರೀ

12:00 PM Sep 14, 2017 | |

ಶಿವಮೊಗ್ಗ: ಹಲವು ಜನ್ಮದ ಪುಣ್ಯದ ಫಲ ಮಾನವ ಜೀವನ. ಮನುಷ್ಯ ಜೀವನದಲ್ಲಿ ಹಣ ಗಳಿಸದಿದ್ದರೂ ಗುಣ ಸಂಪಾದಿಸಿಕೊಂಡು ಬಾಳಬೇಕು. ಅಧರ್ಮದ ಕವಚ ಹೊತ್ತ ವಿಚಾರಗಳು ಬಹಳ ಕಾಲ ಉಳಿಯುವುದಿಲ್ಲವೆಂದು ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ಅಭಿಪ್ರಾಯಪಟ್ಟರು.

Advertisement

ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಅವರಣದಲ್ಲಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಧರ್ಮಾಚರಣೆಯಿಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗುವುದಿಲ್ಲ. ಅನ್ನ,ನೀರು, ಗಾಳಿ ಮನುಷ್ಯ ಬದುಕಿಗೆ ಅಗತ್ಯವಾಗಿರುವಂತೆ, ನೆಮ್ಮದಿಯ ಬದುಕಿಗೆ ಧರ್ಮ, ಪ್ರಜ್ಞೆ ಅವಶ್ಯಕ. ಪ್ರಕೃತಿ ಮಾನವನನ್ನು ಸೃಷ್ಟಿಸಿದರೆ, ಸಂಸ್ಕಾರ
ದೇವ ಮಾನವರನ್ನು ಸೃಷ್ಟಿಸುತ್ತದೆ. ಅತಿ ಶತ್ರುಗಳನ್ನು ನಿಯಂತ್ರಿಸಬಹುದು. ಆದರೆ ಮತಿ ಶತ್ರುಗಳನ್ನು ನಿಯಂತ್ರಿಸುವುದು ಕಷ್ಟ ಎಂದರು.

ಸಂಪತ್ತು ಹೆಚ್ಚಿದಂತೆಲ್ಲ ಮಾನವೀಯ ಸಂಬಂಧಗಳು ನಾಶಗೊಳ್ಳಬಾರದು. ಸತ್ಯದ ತಳಹದಿಯ ಮೇಲೆ ಸೈದ್ಧಾಂತಿಕ ನಿಲುವುಗಳು ಗಟ್ಟಿಗೊಳ್ಳುವ ಅವಶ್ಯಕತೆಯಿದೆ. ಭೌತಿಕ ಸಂಪತ್ತು ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು. ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೋಹದ ದಾರಿ ತೊರೆದರೆ ಮೋಕ್ಷದ ಹಾದಿ ದೊರೆಯುತ್ತದೆ. ಉನ್ನತ ಗುರಿ ಮತ್ತು ಧ್ಯೇಯ
ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ ಎಂದರು. ಮಳಲಿಯ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಚನ್ನಗಿರಿ ಶ್ರೀ ಶಿವಶಾಂತ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿ ನಮನ ಸಲ್ಲಿಸಿದರು.

ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಸೆ. 21ರಿಂದ 30ರ ವರೆಗೆ ಜರುಗುವ ಶ್ರೀ ರಂಭಾಪುರಿ ಜಗದ್ಗುರುಗಳ 26ನೇ ವರ್ಷದ
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಕರೆಯೋಲೆಯನ್ನು ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್‌.ಜೆ. ರಾಜಶೇಖರ ಬಿಡುಗಡೆ ಮಾಡಿದರು. ಡಿ.ವಿ. ಮಲ್ಲಿಕಾರ್ಜುನ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕೆ.ಸಿ. ನಾಗಠಾಣ ಸ್ವಾಗತಿಸಿದರು. ಶಾಂತಾ ಆನಂದ ನಿರೂಪಿಸಿದರು. ಎಚ್‌.ಎಂ. ಶಿವಾನಂದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next