ಕೆ.ಆರ್.ನಗರ: ರೈತರಿಗೆ ಕುಕ್ಕುಟ ಮಹಾ ಮಂಡಳಿಯ ವತಿಯಿಂದ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದ್ದು, ಅವುಗಳನ್ನು ಸಾಕಾಣಿಕೆ ಮಾಡಿ ಲಾಭ ಗಳಿಸಬೇಕು ಎಂದು ಪಶುವೈದ್ಯಾಧಿಕಾರಿ ಡಾ.ರಾಮು ಹೇಳಿದರು.
ಪಟ್ಟಣದಲ್ಲಿ ಕುಕ್ಕುಟ ಮಹಾ ಮಂಡಳಿಯ ವತಿಯಿಂದ ನಡೆದ 2019-20ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಅಸಿಲ್ ಕೋಳಿ ಮರಿಗಳನ್ನು ವಿತರಿಸಿ ಮಾತನಾಡಿದ ಅವರು, ತಾಲೂಕಿನ ಗುಂಪು ಗ್ರಾಮಗಳಲ್ಲಿ ಆಯ್ಕೆಯಾದ 52 ಮಂದಿ ಫಲಾನುಭವಿಗಳಿಗೆ ತಲಾ 30 ಕೋಳಿ ಮರಿ ವಿತರಿಸಲಾಗುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ರಾಜ್ಯದಲ್ಲಿ ಕೋಳಿ ಮಾಂಸಕ್ಕೆ ಹೆಚ್ಚು ಬೇಡಿಕೆ ಇರುವ ಹಿನ್ನೆಲೆಯಲ್ಲಿ ತಮ್ಮ ಮನೆ ಅಥವಾ ಅತಿ ಕಡಿಮೆ ಸ್ಥಳಾವಕಾಶದಲ್ಲಿ ಈ ಕೋಳಿ ಮರಿಗಳನ್ನು ಸಾಕಾಣಿಕೆ ಮಾಡಿ ರೈತರು ಹೆಚ್ಚಿನ ಪ್ರಮಾಣದ ಆದಾಯ ಗಳಿಸಬಹುದಾಗಿದೆ ಎಂದರು.
ಅಸಿಲ್ ಕೋಳಿ ಮರಿಗಳು ನಾಟಿ ಕೋಳಿ ಮಾಂಸದ ಗುಣಗಳು ಮತ್ತು ವೈಶಿಷ್ಟ್ಯ ಹೊಂದಿದ್ದು, 5 ರಿಂದ 6 ವಾರಗಳು ತುಂಬಿರುವ ಮರಿಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಇವುಗಳ ಪಾಲನೆ ಮತ್ತು ಪೋಷಣೆ ಮಾಡಿದ ಐದಾರು ತಿಂಗಳಲ್ಲಿ ಮಾಂಸದ ಕಟಾವು ಅಥವಾ ಮೊಟ್ಟೆ ಇಡುವ ಹಂತಕ್ಕೆ ಬರುತ್ತವೆ. ಇದರ ಮಾಂಸ ಗುಣಮಟ್ಟದ್ದಾಗಿದ್ದು, ರೈತರಿಗೆ ಕಡಿಮೆ ಅವಧಿಯಲ್ಲಿ ಕೈತುಂಬ ಆದಾಯ ಗಳಿಸಲು ಸುಲಭವಾಗಲಿದೆ ಎಂದು ತಿಳಿಸಿದರು.
ಕುಕ್ಕುಟ ಮಹಾ ಮಂಡಳಿಯ ಸಹಾಯಕ ನಿರ್ದೇಶಕ ಡಾ.ಸುರೇಶ್‌ಕುಮಾರ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರವಿಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ.ಕೃಷ್ಣರಾವ್, ಫಲಾನುಭವಿಗಳಾದ ಜವರನಾಯಕ, ಪ್ರಭು, ರುಕ್ಮಿಣಿ, ರಮೇಶ್‌ನಾಯಕ ಇತರರಿದ್ದರು.