Advertisement

ಮುಂಬಯಿಯ ಮುಂಜಾನೆಯ ಸಂಗಾತಿ

09:06 AM Mar 01, 2020 | mahesh |

ನಾನು ಪ್ರಾಯೋಗಿಕ ಸಂಚಿಕೆ ಪ್ರಕಟವಾಗುತ್ತಿದ್ದ ಕಾಲದಿಂದಲೂ ಉದಯವಾಣಿಯನ್ನು ಓದುತ್ತಾ ಬಂದವನು. ಊರಿನಲ್ಲಿರುವಾಗ ಪ್ರತಿದಿನ ತಾಜಾ ಸಮಾಚಾರವನ್ನು ಹೊತ್ತು ತರುತ್ತಿದ್ದ ಉದಯವಾಣಿಯನ್ನು ಓದುವುದೇ ಅವಿಸ್ಮರಣೀಯ ಅನುಭವವಾಗಿತ್ತು.ಉದ್ಯೋಗ ನಿಮಿತ್ತ ಮುಂಬಯಿಗೆ ಕಾಲಿರಿಸಿದಾಗ, ಇಲ್ಲೂ ಉದಯವಾಣಿಯನ್ನು ಓದುವ ಅವಕಾಶ ಸಿಗುವ ಖಾತ್ರಿ ನನಗಿರಲಿಲ್ಲ .ಆಗಿನ ಕಾಲದಲ್ಲಿ ಮಣಿಪಾಲದಿಂದ ಮಾತ್ರ ಪ್ರಕಟವಾಗುತ್ತಿದ್ದ ಉದಯವಾಣಿ ಮರುದಿನ ಮುಂಜಾನೆ ಮುಂಬಯಿಗೆ ಬರುತ್ತಿತ್ತು . ಹಾಗಾಗಿ ನನ್ನ ಮತ್ತು ಉದಯವಾಣಿಯ ನಂಟು ಮೊದಲಿನಂತೆಯೇ ಮುಂದುವರಿಯಿತು.ಅನಂತರ ಮುಂಬಯಿ ಕನ್ನಡಿಗರ ಬೇಡಿಕೆಗೆ ಸ್ಪಂದಿಸಿ ಉದಯವಾಣಿಯ ಮುಂಬಯಿ ಆವೃತ್ತಿಯನ್ನು ಆರಂಭಿಸಿದಂದಿನಿಂದ ಬೆಳಗ್ಗಿನ ಚಹಾದೊಂದಿಗೆ ಪತ್ರಿಕೆಯನ್ನು ಓದುವ ಅವಕಾಶ ಒದಗಿಬಂತು. ಈಗ ಮುಂಬಯಿಯಲ್ಲಿರುವ ಕನ್ನಡ ಸಂಘಸಂಸ್ಥೆಗಳ ಚಟುವಟಿಕೆಯ ಸಮಗ್ರ ವರದಿಯು ಉದಯವಾಣಿಯ ಮುಂಬಯಿ ಆವೃತ್ತಿಯ ಮೂಲಕ ದೊರಕುತ್ತದೆ.

Advertisement

ಉದಯವಾಣಿಯ ಸಂಪಾದಕೀಯ, ಸಂಪಾದಕೀಯ ಪುಟದಲ್ಲಿ ತಜ್ಞರು ಬರೆಯುವ ಮಾಹಿತಿಪೂರ್ಣ ಲೇಖನಗಳು, ಜನತಾವಾಣಿ, ಶೇರು ಮಾರುಕಟ್ಟೆ ಮಾಹಿತಿ , ಸಾಪ್ತಾಹಿಕ ಸಂಪದ ಇವೆಲ್ಲಾ ನನಗೆ ಅಚ್ಚುಮೆಚ್ಚು . ಇವು ನನ್ನ ಜ್ಞಾನವರ್ಧನೆಗೆ ದಾರಿದೀಪವಾಗಿವೆ. ಅಲ್ಲದೆ ಇಲ್ಲಿ ಬಳಸಲಾಗುತ್ತಿರುವ ಭಾಷೆಯಿಂದ ನನ್ನ ಬರವಣಿಗೆಗೂ ಸಹಾಯವಾಗುತ್ತಿದೆ. ಪ್ರತಿದಿನ ಮುಂಬಯಿಯ ಲೋಕಲ್‌ ಟ್ರೈನ್‌ನಲ್ಲಿ ಒಂದು ತಾಸಿನ ಪ್ರಮಾಣದ ಕಾಲಾವಧಿಯಲ್ಲಿ ಇಡೀ ಪತ್ರಿಕೆಯನ್ನು ಓದಿ ಮುಗಿಸುತ್ತೇನೆ. “ಐವತ್ತರ ತಾರುಣ್ಯ’ದಲ್ಲಿರುವ ನನ್ನ ಮೆಚ್ಚಿನ ಉದಯವಾಣಿ ನೂರ್ಕಾಲ ಬಾಳಲಿ ಎಂದು ಹಾರೈಸುತ್ತೇನೆ.

 ಸೋಮನಾಥ ಎಸ್‌. ಕರ್ಕೇರ, ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next