Advertisement

ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

02:13 PM Sep 25, 2020 | keerthan |

ಮಣಿಪಾಲ: ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳು, ಹೀರೋಗಳ ಸ್ವರಕ್ಕೆ ಅನುಗುಣವಾದ ರೀತಿಯಲ್ಲಿ ಹಾಡುವ ಶೈಲಿ, ಯಾವ ಹಾಡನ್ನು ಬೇಕಾದರೂ ಲೀಲಾಜಾಲವಾಗಿ ಹಾಡಬಲ್ಲ ಸಾಮರ್ಥ್ಯವಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

Advertisement

ಶ್ರೀಪತಿ ಪಂಡಿತಾರಾದ್ಯಲು ಬಾಲಸುಬ್ರಹ್ಮಣ್ಯಂ 1946ರ ಜೂನ್ 4ರಂದು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ಎಸ್ ಪಿ. ಸಾಂಬಮೂರ್ತಿ ಅವರು ಹರಿಕಥೆ ದಾಸರಾಗಿದ್ದರು. ತಂದೆಯ ಹರಿಕಥೆ ಕೇಳುತ್ತಿದ್ದ ಬಾಲಕ ಬಾಲು ಅವರಿಂದಲೇ ಪ್ರೇರಿತರಾಗಿ ಸಂಗೀತದತ್ತ ಆಕರ್ಷಿತರಾಗದರು.

ಹಾಡುಗಾರಿಕೆ, ಹಾರ್ಮೋನಿಯಂ, ಕೊಳಲು ನುಡಿಸುವುದನ್ನು ಸ್ವಯಂ ಪ್ರೇರಿತರಾಗಿ ತಾವು ನುಡಿಸುತ್ತಾ ಕಲಿತರು. ಅನಂತಪುರದ ಜೆಎನ್ ಟಿಯು ಕಾಲೇಜ್ ಆಫ್ ಇಂಜಿನಿಯರಿಂಗ್ ಗೆ ವ್ಯಾಸಂಗಕ್ಕೆ ಸೇರಿದ ಅವರು ಟೈಫಾಯ್ಡ್ ಕಾರಣದಿಂದ ವ್ಯಾಸಂಗವನ್ನು ಅರ್ಧದಲ್ಲೇ ಕಡಿತಗೊಳಿಸಿದರು.

ಇದನ್ನೂ ಓದಿ: ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

ಕಾಲೇಜು ದಿನಗಳಲ್ಲಿ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಎಸ್ ಪಿಬಿ, 1966ರ ಡಿಸೆಂಬರ್ 15ರಂದು ತೆಲುಗಿನ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಿತ್ರದಲ್ಲಿ ಮೊದಲ ಬಾರಿಗೆ ಹಿನ್ನಲೆ ಗಾಯಕರಾದರು. ಅವರು ಹಾಡಿದ ಎರಡನೇ ಚಿತ್ರವೇ ಕನ್ನಡದ ನಕ್ಕರೆ ಅದೇ ಸ್ವರ್ಗ ಚಿತ್ರ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸುಂದರ ಕಂಠದ ಸುಂದರ ಹುಡುಗ ನಂತರದ ದಶಕಗಳಲ್ಲಿ ಚಿತ್ರಗೀತೆಗಳ ಸಾಮ್ರಾಜ್ಯವನ್ನು ಅಕ್ಷರಶಃ ಆಳಿದರು.

Advertisement

ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರಾಗಿದ್ದ ಕಾಲದಲ್ಲಿ ಚಿತ್ರರಂಗಕ್ಕೆ ಬಂದ ಎಸ್ ಪಿಬಿ ಅವರು ತಮ್ಮ ಸುಮಧುರ ಕಂಠದಿಂದ ಎಲ್ಲಾ ಚಿತ್ರರಂಗದ ಜನಮಾನಸದಲ್ಲಿ ನೆಲೆಯಾದವರು.

ಎಸ್‍ಪಿಬಿ ಗಾಯಕರಾಗಿ ಸರಿಸುಮಾರು ನಲವತ್ತು ಸಾವಿರ ಹಾಡುಗಳನ್ನ ಹಾಡಿದ್ದಾರೆ. ಇವರು ಕನ್ನಡ , ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಒರಿಯಾ, ಬೆಂಗಾಲಿ, ಮರಾಠಿ, ಪಂಜಾಬಿ ಸೇರಿದಂತೆ ಹದಿನೈದು ಭಾಷೆಗಳಲ್ಲಿ ಹಾಡಿದ್ದಾರೆ. ಹಾಡುವುದರ ಜೊತೆಗೆ ಎಸ್ ಪಿಬಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ, ಅದಕ್ಕಾಗಿ ಪ್ರಶಸ್ತಯನ್ನೂ ಪಡೆದಿದ್ದಾರೆ.

ಶಂಕರಾಭರಣಂ,ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು  ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇಷ್ಟೇ ಅಲ್ಲದೆ ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next