Advertisement
ಮ್ಯಾಕ್ಸಿಲೊಫೇಶಿಯಲ್ ಗಾಯಗಳಿಂದ ಸಮಸ್ಯೆಗಳು ಉಂಟಾಗದಂತೆ ಮತ್ತು ಕೆಲವು ಸಂದರ್ಭಗಳಲ್ಲಿ ಪ್ರಾಣವನ್ನು ಉಳಿಸುವುದಕ್ಕೆ ಕೂಡ ಜನಸಾಮಾನ್ಯರು ಏನು ಮಾಡಬಹುದು ಎಂಬ ಮಾಹಿತಿ ಈ ಲೇಖನದಲ್ಲಿದೆ.
– ರಕ್ತಸ್ರಾವದ ನಿರ್ವಹಣೆ: ಮುಖದ ಮೇಲೆ ಯಾವುದೇ ಗಾಯ ಉಂಟಾಗಿದ್ದು, ರಕ್ತಸ್ರಾವ ಆಗುತ್ತಿದ್ದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಒಯ್ಯುವ ಸಂದರ್ಭದಲ್ಲಿ ಗಾಯದಿಂದ ಆಗುತ್ತಿರುವ ರಕ್ತಸ್ರಾವವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಶುಭ್ರ ಬಟ್ಟೆ ಅಥವಾ ಗಾಸ್‌ನಿಂದ ಗಾಯವನ್ನು ಒತ್ತಿ ಹಿಡಿಯುವುದರ ಮೂಲಕ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಹೆಚ್ಚು ರಕ್ತ ನಷ್ಟವಾಗುವುದನ್ನು ತಡೆಯಬಹುದು.
– ಅವಘಡದಿಂದಾಗಿ ಹಲ್ಲು ಹೊರಕ್ಕೆ ಬಂದಿದ್ದರೆ: ಅವಘಡದಿಂದಾಗಿ ಹಲ್ಲು ಹೊರಬಂದಿದ್ದರೆ ಅದನ್ನು ಗಾಯಾಳುವಿನ ಬಾಯಿಯೊಳಗೆ ಇರಿಸಬೇಕು (ಪ್ರಜ್ಞೆ ಇದ್ದ ಸಂದರ್ಭದಲ್ಲಿ ಮಾತ್ರ) ಮತ್ತು ಗಾಯಾಳುವನ್ನು ಆದಷ್ಟು ಬೇಗನೆ ಆಸ್ಪತ್ರೆಗೆ ಸಾಗಿಸಬೇಕು. ಹಲ್ಲನ್ನು ಬಾಯಿಯೊಳಗೆ ಇರಿಸುವುದು ಸಾಧ್ಯವಾಗದೆ ಇದ್ದರೆ ಅದನ್ನು ಎಲ್ಲ ಮನೆಗಳಲ್ಲಿ ಲಭ್ಯವಿರುವ ಕಡಿಮೆ ಕೊಬ್ಬಿನ ಹಾಲಿನೊಳಗೆ ಮುಳುಗಿಸಿಟ್ಟು ಒಯ್ಯಬೇಕು. ಯಾವುದೇ ಸಂದರ್ಭದಲ್ಲಿ ಹಲ್ಲನ್ನು ಶುದ್ಧಗೊಳಿಸಲು ತೊಳೆಯಬಾರದು ಅಥವಾ ಉಜ್ಜಬಾರದು.
– ಊತದ ನಿರ್ವಹಣೆ: ಅಪಘಾತದ ಬಳಿಕ ದವಡೆಯಲ್ಲಿ ಊತ ಕಂಡುಬಂದರೆ ಬಾಧಿತ ಪ್ರದೇಶ ಮೇಲೆ ಐಸ್ ಇರಿಸಬೇಕು. ಇದು ಆಂತರಿಕ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಊತವನ್ನು ಕಡಿಮೆಗೊಳಿಸಲು ಕೂಡ ನೆರವಾಗುತ್ತದೆ.
– ಮೂಗಿನ ರಕ್ತಸ್ರಾವದ ನಿಭಾವಣೆ: ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಹೆಪ್ಪುಗಟ್ಟಿದ ರಕ್ತವು ಉಚ್ಛಾಸ-ನಿಶ್ವಾಸಕ್ಕೆ ತಡೆಯಾಗದಂತೆ ಮುಖವನ್ನು ಕೆಳಮುಖವಾಗಿ ಬಾಗಿಸಿ ಹಿಡಿಯಬೇಕು. ಮೂಗಿನ ಹೊಳ್ಳೆಗಳನ್ನು ಸ್ವಲ್ಪಕಾಲ ಒತ್ತಿ ಹಿಡಿಯಬಹುದು. ರಕ್ತಸ್ರಾವವನ್ನು ತಡೆಯಲು ಐಸ್‌ಪ್ಯಾಕ್ ಅಥವಾ ಬಟ್ಟೆಯನ್ನು ಮೂಗಿನ ಮೇಲೆ ಇರಿಸಬಹುದು. ಮೂಗಿನಲ್ಲಿ ಗಾಯ ಅಥವಾ ನೋವು ಇದ್ದರೆ ಯಾವುದೇ ರೀತಿಯಲ್ಲಿ ಸರಿಪಡಿಸುವುದಕ್ಕೆ ಹೋಗಬಾರದು; ತಜ್ಞ ವೈದ್ಯರ ಸಲಹೆ ಪಡೆಯಬೇಕು.
– ಮ್ಯಾಕ್ಸಿಲೊಫೇಶಿಯಲ್ ಗಾಯ ಹೊಂದಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸುವ ವೇಳೆ ತಲೆಯ ಭಾಗ ಎತ್ತರಿಸಿರುವಂತೆ ಒಯ್ಯಬೇಕು. ಇದು ಉಸಿರಾಟ ನಿರಾತಂಕವಾಗಿರುವುದಕ್ಕೆ ಸಹಾಯ ಮಾಡುತ್ತದೆಯಲ್ಲದೆ ನಾಲಗೆ ಒಳಕ್ಕೆಳೆದುಕೊಳ್ಳದಂತೆ ಕಾಪಾಡುತ್ತದೆ.
– ಗಾಯಾಳುವನ್ನು ಹೆಚ್ಚು ವಿಳಂಬ ಮಾಡದೆ ಆದಷ್ಟು ಬೇಗನೆ ಆಸ್ಪತ್ರೆಗೆ ಕರೆದೊಯ್ಯಬೇಕು. ಮುಖಕ್ಕೆ ಗಾಯವಾದರೆ ನಿಭಾವಣೆ ಕಷ್ಟ. ಆದರೆ, ಸರಿಯಾದ ಎಚ್ಚರಿಕೆ ತೆಗೆದುಕೊಂಡು ಗಾಯಾಳುವನ್ನು ಕ್ಷಿಪ್ರವಾಗಿ ಆಸ್ಪತ್ರೆಗೆ ರವಾನಿಸಿದರೆ ಅನೇಕ ಸಮಸ್ಯೆಗಳನ್ನು ತಡೆಯಬಹುದು.
Related Articles
ರೀಡರ್, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ
Advertisement