ಹೊಸದಿಲ್ಲಿ: ಭಾರತೀಯ ಜನತಾ ಪಾರ್ಟಿ ಈಗ ಬೆಳೆದಿದೆ, ಸದೃಢ ವಾಗಿದೆ. ಹಾಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಆಸರೆಯ ಅಗತ್ಯ ಈಗ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
“ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಮಯಕ್ಕೂ ಈಗಿನ ಸಮಯಕ್ಕೂ ಆರೆಸ್ಸೆಸ್‌ನ ಉಪಸ್ಥಿತಿಯಲ್ಲಿ ವ್ಯತ್ಯಾಸ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ಆರಂಭದಲ್ಲಿ ನಾವು ಸಮರ್ಥರಾಗಿರಲಿಲ್ಲ. ಚಿಕ್ಕ ಪಕ್ಷವಾಗಿದ್ದೆವು. ಹಾಗಾಗಿ ಆರೆಸ್ಸೆಸ್‌ನ ಅಗತ್ಯ ಇತ್ತು. ಆದರೆ ಈಗ ನಾವು ಬೆಳೆದಿದ್ದೇವೆ. ನಮಗೆ ನಮ್ಮದೇ ಆದ ಸಾಮರ್ಥ್ಯ ಬಂದಿದೆ. ಬಿಜೆಪಿ ಈಗ ತನ್ನಷ್ಟಕ್ಕೆ ತಾನೇ ಮುನ್ನಡೆಯು ತ್ತಿದೆ ಎಂದು ಹೇಳಿದ್ದಾರೆ.
ಈಗ ಆರೆಸ್ಸೆಸ್‌ನ ಬೆಂಬಲ ಬಿಜೆಪಿಗೆ ಅಗತ್ಯ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ಪಕ್ಷ ಬೆಳೆದಿದೆ. ಎಲ್ಲರಿಗೂ ಅವರ ಪಾತ್ರ ಮತ್ತು ಕರ್ತವ್ಯ ಏನು ಎಂಬುದು ಗೊತ್ತು. ಆರೆಸ್ಸೆಸ್ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಯಾಗಿದೆ. ನಮ್ಮದು ರಾಜಕೀಯ ಸಂಘಟನೆ. ಹಾಗಾಗಿ ಆರೆಸ್ಸೆಸ್‌ನ ಅಗತ್ಯದ ಪ್ರಶ್ನೆಯೇ ಬರುವುದಿಲ್ಲ. ಅದು ಸೈದ್ಧಾಂತಿಕ ವೇದಿಕೆಯಾಗಿದೆ. ಸೈದ್ಧಾಂತಿಕವಾಗಿ ಏನು ಮಾಡಬೇಕೋ ಆ ಕೆಲಸವನ್ನು ಅದು ಮಾಡುತ್ತದೆ. ಪಕ್ಷದ ವ್ಯವಹಾರಗಳನ್ನು ನಮ್ಮದೇ ಆದ ರೀತಿಯಲ್ಲಿ ನಾವು ನಿರ್ವಹಣೆ ಮಾಡುತ್ತಿದ್ದೇವೆ. ಒಂದು ರಾಜಕೀಯ ಪಕ್ಷವಾಗಿ ನಾವು ಹೀಗೆಯೇ ಇರಬೇಕು ಎಂದರು.
ಮಥುರಾ, ಕಾಶಿ ದೇಗುಲ ಯೋಜನೆ ಇಲ್ಲ
ಮಥುರಾ ಮತ್ತು ಕಾಶಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಯೋಚನೆಯನ್ನಾಗಲೀ, ಇಚ್ಛೆಯನ್ನಾಗಲೀ ಬಿಜೆಪಿ ಹೊಂದಿಲ್ಲ ಅಥವಾ ಆ ಕುರಿತ ಯಾವುದೇ ಚರ್ಚೆಗಳೂ ನಡೆದಿಲ್ಲ. ಸಂಸದೀಯ ಮಂಡಳಿಯಲ್ಲಾದ ಚರ್ಚೆಯಂತೆ ನಮ್ಮ ಪಕ್ಷದ ವ್ಯವಹಾರಗಳು ನಡೆಯುತ್ತವೆ ಎಂದು ಪ್ರಶ್ನೆಯೊಂದಕ್ಕೆ ನಡ್ಡಾ ಉತ್ತರಿಸಿದರು.
ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರು ಮಥುರಾ ಮತ್ತು ಕಾಶಿಯಲ್ಲಿ ದೇಗುಲ ನಿರ್ಮಾಣದ ಭರವಸೆ ನೀಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ಈ ವಿಷಯದಲ್ಲಿ ಗೊಂದಲ ಬೇಡ. 1989ರಲ್ಲಿ ಪಾಲಂಪುರ್‌ನಲ್ಲಿ ಕೈಗೊಳ್ಳಲಾದ ನಿರ್ಣಯದಲ್ಲಿ ರಾಮಮಂದಿರ ನಿರ್ಮಾಣದ ಅಜೆಂಡಾವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಸುದೀರ್ಘ ಹೋರಾಟದ ಬಳಿಕ ಈಗ ರಾಮಮಂದಿರ ನಿರ್ಮಾಣವಾಗಿದೆ. ಅದು ನಮ್ಮ ಅಜೆಂಡಾ ಆಗಿತ್ತು. ಆದರೆ ಕೆಲವರು ಭಾವುಕರಾಗುತ್ತಾರೆ ಅಥವಾ ಅತ್ಯುತ್ಸಾಹದಲ್ಲಿ ಇತರ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ನಮ್ಮದು ದೊಡ್ಡ ಪಕ್ಷವಾಗಿದ್ದು, ಪ್ರತಿಯೊಬ್ಬ ನಾಯಕ ತಮ್ಮದೇ ಆದ ಮಾತಿನ ಶೈಲಿಯನ್ನು ಹೊಂದಿದ್ದಾರೆ ಎಂದರು.