Advertisement

ಹಿಂದೆಯೇ ಎಚ್ಚರಿಸಿತ್ತು ಆರ್‌ಬಿಐ !

10:32 AM Feb 21, 2018 | Team Udayavani |

ಹೊಸದಿಲ್ಲಿ: ದೇಶವನ್ನೇ ಬೆಚ್ಚಿಬೀಳಿಸಿರುವ 11,400 ಕೋಟಿ ರೂ.ಗಳ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ ಬೆಳಕಿಗೆ ಬರುವ ಒಂದು ವರ್ಷ ಮುಂಚೆಯೇ ಬ್ಯಾಂಕುಗಳಿಗೆ 3 ಬಾರಿ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಎಚ್ಚರಿಕೆಯ ಸಂದೇಶ ರವಾನಿಸಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

Advertisement

ವ್ಯವಸ್ಥೆಯಲ್ಲಿರುವ ಲೋಪಗಳ ಬಗ್ಗೆ ಎಚ್ಚರಿಸಿ ಆರ್‌ಬಿಐ 2016ರ ಆಗಸ್ಟ್‌ನಲ್ಲಿ ಬ್ಯಾಂಕುಗಳಿಗೆ ಕಳುಹಿಸಿದ್ದ ಸುತ್ತೋಲೆಯ ಪ್ರತಿಯು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಅನಧಿಕೃತವಾಗಿ ಹಣಕಾಸು ವರ್ಗಾವಣೆಗೆ ಸ್ವಿಫ್ಟ್ ಇಂಟರ್‌ಬ್ಯಾಂಕ್‌ ನೆಟ್‌ವರ್ಕ್‌ ಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದ್ದು, ಈ ಬಗ್ಗೆ ಎಚ್ಚರದಿಂದಿರಿ ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿತ್ತು. ಎಲ್ಲ ಬ್ಯಾಂಕುಗಳೂ ಸೈಬರ್‌ ಭದ್ರತಾ ನಿಯಮವನ್ನು ಅಳವಡಿಸಿಕೊಳ್ಳಬೇಕು ಎಂದೂ, ಸ್ವಿಫ್ಟ್ (ಸೊಸೈಟಿ ಫಾರ್‌ ವರ್ಲ್xವೈಡ್‌ ಇಂಟರ್‌ಬ್ಯಾಂಕ್‌ ಫೈನಾನ್ಶಿ ಯಲ್‌ ಟೆಲಿಕಮ್ಯೂನಿಕೇಷನ್ಸ್‌) ಮೂಲಸೌಕರ್ಯ ವನ್ನು ಸಮಗ್ರವಾಗಿ ಆಡಿಟ್‌ ಮಾಡುವಂತೆಯೂ ಸೂಚಿಸಲಾಗಿತ್ತು. ಪಿಎನ್‌ಬಿ ಹಗರಣಕ್ಕೆ ಆರ್‌ಬಿಐನ ಮೇಲ್ವಿಚಾರಣಾ ವೈಫ‌ಲ್ಯವೇ ಕಾರಣ ಎಂದು ಕೇಂದ್ರ ಸರಕಾರ ಆರೋಪ ಮಾಡಿದ ಬೆನ್ನಲ್ಲೇ ಈ ಸುತ್ತೋಲೆ ಬಹಿರಂಗವಾಗಿದೆ.

ಮತ್ತಷ್ಟು ಬಂಧನ: ಈ ನಡುವೆ, ನೀರವ್‌ ಮತ್ತು ಚೋಕ್ಸಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಪುಲ್‌ ಅಂಬಾನಿ ಮತ್ತು ಇತರೆ ನಾಲ್ವರು ಅಧಿಕಾರಿಗಳನ್ನು ಮಂಗಳವಾರ ಸಿಬಿಐ ಬಂಧಿಸಿದೆ. ಪಿಎನ್‌ಬಿ ಕಾರ್ಯಕಾರಿ ನಿರ್ದೇಶಕ ಮತ್ತು 9 ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಜತೆಗೆ, ಹೊಸ ಕಪ್ಪುಹಣ ನಿಗ್ರಹ ಕಾನೂನಿನ ಅನ್ವಯ ನೀರವ್‌ ವಿರುದ್ಧ ಐಟಿ ಇಲಾಖೆ ಆರೋಪ ದಾಖಲಿಸಿದೆ.

ರೇಟಿಂಗ್ಸ್‌ ಇಳಿಕೆ:  ಭಾರೀ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ರೇಟಿಂಗ್‌ ಏಜೆನ್ಸಿಗಳಾದ ಮೂಡೀಸ್‌ ಮತ್ತು ಫಿಚ್‌ ಮಂಗಳವಾರ ಪಿಎನ್‌ಬಿ ರೇಟಿಂಗ್ಸ್‌ ಅನ್ನು ಇಳಿಕೆ ಮಾಡಿದೆ.

ಇಂದು ಪಿಐಎಲ್‌ ವಿಚಾರಣೆ: ಪಿಎನ್‌ಬಿ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು, ನೀರವ್‌ ಮೋದಿಯನ್ನು 2 ತಿಂಗಳೊಳಗೆ ಭಾರತಕ್ಕೆ ವಾಪಸ್‌ ಕರೆತರಬೇಕು ಮತ್ತು ದೊಡ್ಡ ಮಟ್ಟದ ಸಾಲ ನೀಡಲು ಹೊಸ ಮಾರ್ಗಸೂಚಿ ರಚಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿದೆ. ಬುಧವಾರ ಅರ್ಜಿಯ ವಿಚಾರಣೆ ನಡೆಯಲಿದೆ. 

Advertisement

ಇದು 2ಜಿ, ಬೋಫೋರ್ಸ್‌ನಂಥ ಕೇಸು
ಪಿಎನ್‌ಬಿಗೆ ನೀರವ್‌ ಬರೆದ ಪತ್ರ ಬಹಿರಂಗವಾದ ಬೆನ್ನಲ್ಲೇ ಅವರ ಪರ ವಕೀಲ ವಿಜಯ್‌ ಅಗರ್ವಾಲ್‌ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ್ದಾರೆ. “ನೀರವ್‌ ಮೋದಿ ಓಡಿಹೋದರು ಎಂದು ಎಲ್ಲರೂ ಹೇಳುತ್ತಿದ್ದಾರೆ. 5 ಸಾವಿರ ಕೋಟಿ ರೂ.ಗಳ ಆಸ್ತಿಯನ್ನು ಬಿಟ್ಟು ಯಾರಾದರೂ ಓಡಿ ಹೋಗುತ್ತಾರೆಯೇ? ನಾನು ಈ ಕೇಸನ್ನು ಸರಿಯಾಗಿ ಅಧ್ಯಯನ ಮಾಡಿದ್ದೇನೆ. ಇದು 2ಜಿ ಮತ್ತು ಬೋಫೋರ್ಸ್‌ ಹಗರಣದಂತೆಯೇ ಆಗಲಿದೆ. ಸಿಬಿಐ ಆರೋಪಗಳೆಲ್ಲ ಸುಳ್ಳು. ಮಾಧ್ಯಮಗಳಲ್ಲಿ ಮಾತ್ರವೇ ತನಿಖಾ ಸಂಸ್ಥೆಗಳು ಆರೋಪ ಮಾಡುತ್ತಿವೆ. ಆದರೆ, ಅವರಲ್ಲಿ ಒಂದೇ ಒಂದು ಸಾಕ್ಷ್ಯವೂ ಇಲ್ಲ. ಹೀಗಾಗಿ ನೀರವ್‌ ದೋಷಿ ಎಂದು ಸಾಬೀತಾಗುವುದಿಲ್ಲ,’ ಎಂದಿದ್ದಾರೆ.

ಗೀತಾಂಜಲಿಗೆ ಬೀಗ
ಹಗರಣ ಹಿನ್ನೆಲೆಯಲ್ಲಿ ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್ಸ್‌ ಮಳಿಗೆ ಶಾಶ್ವತವಾಗಿ ಮುಚ್ಚುವ ಸುಳಿವು ಸಿಕ್ಕಿದೆ. ಮಂಗಳವಾರ ಸಂಸ್ಥೆಯು ತನ್ನ ಸಿಬಂದಿಗೆ ಈ ಕುರಿತು ಸೂಚನೆ ನೀಡಿದ್ದು, ಎಲ್ಲರೂ ತಮ್ಮ ಬಿಡುಗಡೆ ಪತ್ರ(ರಿಲೀವಿಂಗ್‌ ಲೆಟರ್‌)ವನ್ನು ಪಡೆದುಕೊಳ್ಳುವಂತೆ ಸೂಚಿಸಿದೆ ಎಂದು ಹೇಳಲಾಗಿದೆ.

14 ಬ್ಯಾಂಕ್‌ ಖಾತೆ ಜಪ್ತಿ
ಸಿಬಿಐ ಮತ್ತು ಇ.ಡಿ. ಬಳಿಕ ಇದೀಗ ಆದಾಯ ತೆರಿಗೆ ಇಲಾಖೆಯೂ ರೊಟೋಮ್ಯಾಕ್‌ ಗ್ರೂಪ್‌ ವಿರುದ್ಧ ಕ್ರಮ ಕೈಗೊಳ್ಳಲು ಆರಂಭಿಸಿದ್ದು, ಕಂಪೆನಿಗೆ ಸೇರಿದ 14 ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿದೆ. ಉ.ಪ್ರದೇಶದ ಬೇರೆ ಬೇರೆ ಬ್ಯಾಂಕ್‌ಗಳ ಶಾಖೆಗಳಲ್ಲಿದ್ದ ಖಾತೆಗಳಿವು. ಏತನ್ಮಧ್ಯೆ, ಮೆಹುಲ್‌ ಚೋಕ್ಸಿ ಮತ್ತು ಗೀತಾಂಜಲಿ ಗ್ರೂಪ್‌ಗೆ ಸೇರಿದ 20 ಕಡೆ ಮಂಗಳವಾರ ಐಟಿ ಇಲಾಖೆ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದೆ. 

ಸಿಂಘವಿ ಪತ್ನಿಗೆ ಐಟಿ ನೋಟಿಸ್‌
ನೀರವ್‌ ಮೋದಿ ಅವರ ಮಳಿಗೆಯಲ್ಲಿ 6 ಕೋಟಿ ರೂ.ಗಳ ಆಭರಣ ಖರೀದಿಗೆ ಸಂಬಂಧಿಸಿ ವಿವರಣೆ ನೀಡುವಂತೆ ಸೂಚಿಸಿ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಸಿಂಘವಿ ಅವರ ಪತ್ನಿಗೆ ಐಟಿ ಇಲಾಖೆ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ. ಕೆಲವು ವರ್ಷಗಳ ಹಿಂದೆ ಖರೀದಿಸಿದ ಈ ಆಭರಣಗಳಿಗೆ ಎಷ್ಟು ಮೊತ್ತವನ್ನು ನಗದು ರೂಪದಲ್ಲಿ ಮತ್ತೆ ಎಷ್ಟು ಮೊತ್ತವನ್ನು ಚೆಕ್‌ ರೂಪದಲ್ಲಿ ನೀಡಲಾಗಿತ್ತು ಎಂಬ ಬಗ್ಗೆ ಮಾಹಿತಿ ನೀಡುವಂತೆ ಅನಿತಾ ಸಿಂ Ì ಅವರಿಗೆ ಸೂಚಿಸಲಾಗಿದೆ. ಅನಿತಾ ಅವರು 1.5 ಕೋಟಿ ರೂ.ಗಳನ್ನು ಚೆಕ್‌ ಮೂಲಕವೂ, 4.8 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಪಾವತಿಸಿದ್ದಾರೆ ಎಂದು ಐಟಿ ಇಲಾಖೆ ಶಂಕಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಂ Ì, ನಾನು ವಿಪಕ್ಷಕ್ಕೆ ಸೇರಿರುವ ಕಾರಣ ಉದ್ದೇಶಪೂರ್ವಕವಾಗಿ ದೌರ್ಜನ್ಯ ಎಸಗಲು ಇಂಥ ಕೃತ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 

ಬ್ಯಾಂಕಿಂಗ್‌ ವ್ಯವಸ್ಥೆಗೆ ಮೋಸ ಮಾಡುವವರನ್ನು ಸರಕಾರ ಸುಮ್ಮನೆ ಬಿಡುವುದಿಲ್ಲ. ಅವರನ್ನು ಬೆನ್ನಟ್ಟಿ ಹಿಡಿಯಲಿದೆ. ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ವಿಫ‌ಲವಾದ ಬ್ಯಾಂಕ್‌ ಆಡಳಿತ ಮಂಡಳಿಗಳು ತಮ್ಮ ಕರ್ತವ್ಯವನ್ನು ಮರೆತಂತಿದೆ. ಇಂಥ ವಂಚನೆ ನಡೆಯುತ್ತಿದ್ದಾಗ ಆಡಿಟರ್‌ಗಳು ಏನು ಮಾಡುತ್ತಿದ್ದರು?
 ಅರುಣ್‌ ಜೇಟ್ಲಿ , ವಿತ್ತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next