Advertisement

ಮತಯಂತ್ರದ ಸುತ್ತ ಹದ್ದಿನ ಕಣ್ಗಾವಲು

02:21 PM May 14, 2018 | Team Udayavani |

ಮೈಸೂರು: ಇಡೀ ದೇಶದ ಗಮನ ಸೆಳೆದಿರುವ ರಾಜ್ಯ ವಿಧಾನಸಭಾ ಚುನಾವಣೆ ಸಮರ ಮುಗಿದಿದೆ. ಇದೀಗ ಕಣದಲ್ಲಿರುವ ಅಭ್ಯರ್ಥಿಗಳ ಜತೆಗೆ ಪ್ರತಿಯೊಬ್ಬರ ಚಿತ್ತ ಇದೀಗ ಮೇ 15ರಂದು ಹೊರಬೀಳಿಲಿರುವ ಚುನಾವಣಾ ಫ‌ಲಿತಾಂಶದತ್ತ ನೆಟ್ಟಿದೆ.

Advertisement

ಈ ಬಾರಿಯ ಚುನಾವಣೆ ಮೂರು ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸಲಿದ್ದು, ಹೀಗಾಗಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಮಾತ್ರವಲ್ಲದೆ ರಾಜ್ಯದ ಮತದಾರರಲ್ಲೂ ಕುತೂಹಲ ಮೂಡಿಸಿದೆ. ಜಿದ್ದಾಜಿದ್ದಿನ ಕದನದಲ್ಲಿ ಮೇ 12ರಂದು ನಡೆದ ಮತದಾನದಲ್ಲಿ ಮತದಾರ ಪ್ರಭು ಅಭ್ಯರ್ಥಿಗಳ ಹಣೆಬರಹ ಬರೆದಿದ್ದು, ಎಲ್ಲಾ ಮತಯಂತ್ರಗಳನ್ನು ಸ್ಟ್ರಾಂಗ್‌ರೂಂನಲ್ಲಿ ಭದ್ರವಾಗಿ ಇರಿಸಲಾಗಿದೆ.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಪ್ರಬಲ ಅಭ್ಯರ್ಥಿಗಳು ಸೇರಿದಂತೆ ಒಟ್ಟು 147 ಮಂದಿಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಸೇರಿಕೊಂಡಿದೆ. ಇದರ ನಡುವೆಯೂ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಆಪ್ತರು, ಬೆಂಬಲಿಗರು ಸೋಲು-ಗೆಲುವಿನ ಕುರಿತು ತಮ್ಮದೇ ಲೆಕ್ಕಾಚಾರದಲ್ಲಿ ನಿರತವಾಗಿದ್ದಾರೆ.

ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾ ಮತದಾನ ಮುಗಿದ ಕೂಡಲೇ ಎಲ್ಲರ ಗಮನ ಮೇ 15ರಂದು ನಡೆಯುವ ಮತ ಎಣಿಕೆಯತ್ತ ಅಡಗಿದೆ. ಮತ ಎಣಿಕೆ ಕಾರ್ಯಕ್ಕಾಗಿ ಜಿಲ್ಲಾಡಳಿತದ ಸಕಲ ಸಿದ್ಧತೆ ಮಾಡಿಕೊಂಡಿದ್ದು, 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಮತದಾನದ ಬಳಿಕ ಜಿಲ್ಲೆಯ ಕೆ.ಆರ್‌.ನಗರ, ಪಿರಿಯಾಪಟ್ಟಣ, ವರುಣಾ, ಚಾಮರಾಜ ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎನ್‌ಐಇ ಕಾಲೇಜಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಇರಿಸಲಾಗಿದೆ.

Advertisement

ಇನ್ನು ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ, ಹುಣಸೂರು, ಎಚ್‌.ಡಿ.ಕೋಟೆ, ನಂಜನಗೂಡು ಹಾಗೂ ತಿ.ನರಸೀಪುರ ಕ್ಷೇತ್ರಗಳ ಮತಯಂತ್ರಗಳನ್ನು ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಕಲಾ ಹಾಗೂ ವ್ಯಾಣಿಜ್ಯ ಕಾಲೇಜಿನ ನೂತನ ಕಟ್ಟದಲ್ಲಿ ಇಡಲಾಗಿದೆ.

14 ಟೇಬಲ್‌ ವ್ಯವಸ್ಥೆ: ಮೇ 15ರಂದು ರಾಜ್ಯ ವಿಧಾನಸಭೆಯ ಫ‌ಲಿತಾಂಶ ಹೊರಬೀಳಲಿದ್ದು, ಅಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡು, ಮಧ್ಯಾಹ್ನದ ವೇಳೆಗೆ ಫ‌ಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಎಣಿಕೆ ಕಾರ್ಯಕ್ಕಾಗಿ ಪ್ರತಿ ಕ್ಷೇತ್ರಕ್ಕೆ 14 ಟೇಬಲ್‌ಗ‌ಳನ್ನು ಅಳವಡಿಸಲಾಗಿದ್ದು ಮೀಡಿಯಾ ಸೆಂಟರ್‌, ಸರ್ವರ್‌ರೂಮ್‌, ವೀಕ್ಷಕರ ಕೊಠಡಿ, ಆರೋಗ್ಯ ಘಟಕಗಳನ್ನು ಸಹ ಸ್ಥಾಪಿಸಲಾಗಿದೆ. ಜತೆಗೆ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

ಮೂರು ಹಂತದ ಭದ್ರತೆ: ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತಯಂತ್ರಗಳು ಸ್ಟ್ರಾಂಗ್‌ ರೂಂನಲ್ಲಿ ಭದ್ರವಾಗಿದ್ದು ಮೂರು ಹಂತದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ನಗರ ಪೊಲೀಸರು ಹಾಗೂ ಅರೆಸೇನಾಪಡೆ ಮತ ಎಣಿಕೆ ಕೇಂದ್ರದತ್ತ ಹದ್ದಿನ ಕಣ್ಣಿಟ್ಟಿದ್ದು, ಮೊದಲ ಹಂತದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ, ಎರಡನೇ ಹಂತದಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿ ಹಾಗೂ ಮೂರನೇ ಹಂತದಲ್ಲಿ ನಗರ ಸಿವಿಲ್‌ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಇದಕ್ಕಾಗಿ ಒಟ್ಟು 120 ಮಂದಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಸ್ಟ್ರಾಂಗ್‌ ರೂಂ ಪ್ರವೇಶಿಸುವ ದ್ವಾರಗಳು ಸೇರಿದಂತೆ ಎರಡು ಮತ ಎಣಿಕೆ ಕೇಂದ್ರಗಳಲ್ಲಿ 100ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಎರಡೂ ಕೇಂದ್ರಗಳಲ್ಲಿ ಮುಖ್ಯದ್ವಾರ ಹಾಗೂ ಸ್ಟ್ರಾಂಗ್‌ ರೂಂ ಪ್ರವೇಶಿಸುವ ದ್ವಾರದಲ್ಲಿ 16 ಮೆಟಲ್‌ ಡಿಟೆಕ್ಟರ್‌ಗಳು ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next