ವಿಧಾನಪರಿಷತ್ತು: ಜೀವಂತ ಬದುಕಿನಲ್ಲಂತೂ ಸಮಾನತೆ ಮರೀಚಿಕೆಯಾಗಿದೆ, ಸಾವು-ಸಮಾಯಲ್ಲಾದರೂ ಸಮಾನತೆ ತನ್ನಿ, ಜಾತಿಗೊಂದು ಸ್ಮಶಾನ ಯಾಕೆ, ಎಲ್ಲ ಜಾತಿಗಳಿಗೂ ಅನ್ವಯವಾಗುವಂತೆ ಗ್ರಾಮಕ್ಕೊಂದು ಸಾರ್ವಜನಿಕ ಸ್ಮಶಾನ ಮಾಡಿ.
ಈ ರೀತಿ ಸ್ಮಶಾನದ ವಿಚಾರದಲ್ಲಿ ಗಂಭೀರ ಸ್ವರೂಪದ ಚರ್ಚೆಗೆ ಬುಧವಾರ ಮೇಲ್ಮನೆ ವೇದಿಕೆಯಾಯಿತು.
ಪಕ್ಷೇತರರ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ (ಅಣ್ಣಯ್ಯ) “ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಸಮುದಾಯಗಳಿಗೆ
ರುದ್ರಭೂಮಿಗಾಗಿ ಸರ್ಕಾರಿ ಜಮೀನು ಮಂಜೂರು ಮಾಡುವ’ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪೂರಕವಾಗಿ ಚರ್ಚೆ ಬೆಳೆಯಿತು.
ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಮಾತನಾಡಿ, ಮನುಷ್ಯನ ಜೀವಂತ ಬದುಕಿನಲ್ಲಿ ಸಮಾತೆ ಮರೀಚಿಕೆಯಾಗಿದೆ. ಆದರೆ ಆತನ ಸಾವಿನಲ್ಲಾದರೂ ಸಮಾನತೆ ತರಬೇಕು. ಜಾತಿ-ಧರ್ಮ ಆಧಾರಿತ ರುದ್ರಭೂಮಿಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ದಲಿತರಿಗೆ-ಸವರ್ಣೀಯರಿಗೆ ಬೇರೆ ಬೇರೆ ಸ್ಮಶಾನ ಅನ್ನುವುದನ್ನು ಸರ್ಕಾರ ನಿಲ್ಲಿಸಬೇಕು. ಅಂತ್ಯಕ್ರಿಯೆಗಳಲ್ಲಿನ ಭೇದ-ಭಾವ ಹೊಗಲಾಡಿಸಲು ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ರಾಮಚಂದ್ರಗೌಡ ಮಾತನಾಡಿ, ಮನುಷ್ಯ ಬದುಕಿರುವವರೆಗೆ ಮಾತ್ರ ಜಾತಿ, ಸತ್ತ ಮೇಲೆ ಯಾವ ಜಾತಿ, ಸತ್ತ ಮೇಲೆ ಎಲ್ಲರೂ ಹೆಣ ಎಂದು ಹೇಳುತ್ತಾರೆ. ದೇವಸ್ಥಾನಕ್ಕೆ, ಹೊಟೇಲ್‌ಗಳಿಗೆ ಹೋಗಲು ಜಾತಿ ಬೇಕಿಲ್ಲ. ಆದರೆ, ಸ್ಮಶಾನಕ್ಕೆ ಹೋಗಲು ಜಾತಿ ಬೇಕು. ಧರ್ಮಕ್ಕೊಂದು ಸ್ಮಶಾನ ಒಪ್ಪಬಹುದು. ಆದರೆ, ಜಾತಿಗೊಂದು ಸ್ಮಶಾನ ಮಾಡುತ್ತಾ ಹೋದರೆ ಹೇಗೆ. ಜಾತಿಗೊಂದು ಸ್ಮಶಾನ ಬೇಕಾ ಅಥವಾ ಧರ್ಮಕ್ಕೊಂದು ಸ್ಮಶಾನ ಬೇಕಾ ಅನ್ನುವುದನ್ನು ಸರ್ಕಾರ ಮೊದಲು ತೀರ್ಮಾನಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮಕ್ಕೊಂದು ಸ್ಮಶಾನ: ಚರ್ಚೆಗೆ ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ರಾಜ್ಯದ ಪ್ರತಿ ಗ್ರಾಮಕ್ಕೊಂದು ಸ್ಮಶಾನ ವ್ಯವಸ್ಥೆ ಮಾಡಲಾಗುವುದು. ಸ್ಮಶಾನಕ್ಕಾಗಿ ಸರ್ಕಾರಿ ಜಮೀನು ಲಭ್ಯವಿದ್ದರೆ ವಾರದೊಳಗೆ ಅದನ್ನು ಸ್ಮಶಾನ ಭೂಮಿ ಎಂದು ಕಾಯ್ದಿರಿಸಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಜಮೀನಿದ್ದರೆ ಸಂಬಂಧಪಟ್ಟವರಿಂದ ಅದನ್ನು ಖರೀದಿಸಲಾಗುವುದು. ಅವಶ್ಯಕತೆ ಬಿದ್ದ ಕಡೆ ಜಮೀನು ಸ್ವಾಧೀನ ಸಹ ಪಡಿಸಿಕೊಳ್ಳಲಾಗುವುದು. 2014-15ನೇ ಸಾಲಿನಲ್ಲಿ ರುದ್ರಭೂಮಿ ಸೌಲಭ್ಯಕ್ಕಾಗಿ ಖಾಸಗಿ ಜಮೀನು ಖರೀದಿಸಲು ಅವಶ್ಯಕತೆಯಿದ್ದ 11 ಜಿಲ್ಲೆಗಳಿಗೆ 9.99 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.