Advertisement
ಶತಮಾನಗಳಿಂದ ವ್ಯಾಪಾರ ಕೇಂದ್ರವಾಗೇ ಬೆಳೆದು ಬಂದಿರುವ ನಗರದ ಮಾರುಕಟ್ಟೆಗಳಿಗೆ ವಿಶೇಷ ಇತಿಹಾಸವಿದೆ. ಹೀಗಾಗಿ, ನಗರದ ಜನರಿಗೂ ಮಾರುಕಟ್ಟೆಗೂ ಅವಿನಾಭಾವ ಸಂಬಂಧವಿದೆ. ಸುತ್ತಮುತ್ತಲಿನ ಸಮುದಾಯಗಳಿಗೆ ಬೇಕಾದ ದಿನನಿತ್ಯದ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ವ್ಯಾಪಾರ ಕೇಂದ್ರವಾಗಿ ರೂಪುಗೊಂಡ ಬೆಂಗಳೂರು, ಇಂದು ಬೃಹದಾಕಾರವಾಗಿ ಬೆಳೆದಿದೆ.
Related Articles
Advertisement
ನಗರದ ಪ್ರಮುಖ ಮಾರುಕಟ್ಟೆಗಳು ಕೆಲವರಿಗೆ ಬದುಕಿನ ಬಂಡಿ ಸಾಗಿಸಲು ಹೆಗಲು ಕೊಟ್ಟಿವೆ. ಉಳಿದವರಿಗೆ ಜೀವನಾವಶ್ಯಕತೆಗಳೆಲ್ಲವನ್ನೂ ಪೂರೈ ಸುವ ಕೇಂದ್ರಗಳಾಗಿವೆ. ಕೂಲಿ ಕಾರ್ಮಿಕರು, ಚಾಲ ಕರು, ವ್ಯಾಪಾರಿಗಳಿಂದ ಹಿಡಿದು ಹಲವು ವರ್ಗಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಾರುಕಟ್ಟೆಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಮಾರುಕಟ್ಟೆಗಳಿಂದ ಬಿಬಿಎಂಪಿ ಪ್ರತಿ ತಿಂಗಳು ಹಣ ಸಂಗ್ರಹಿಸಿಕೊಳ್ಳುತ್ತಿದೆ. ಆದರೆ ಮೂಲ ಸೌಕರ್ಯಗಳು, ಸುರಕ್ಷತಾ ಕ್ರಮಗಳು ಮಾತ್ರ ಶೂನ್ಯ!
ನಗರದ ಮಾರುಕಟ್ಟೆಗಳನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳನ್ನು ಬಿನ್ನಿ ಮಾರುಕಟ್ಟೆ ಮತ್ತು ಮತ್ತೂಂದನ್ನು ಸಾಮಾನ್ಯ ಮಾರುಕಟ್ಟೆ ಎಂದು ವಿಂಗಡಿಸಲಾಗಿದೆ. ಪ್ರತಿದಿನ ಬಿನ್ನಿ ಮಾರುಕಟ್ಟೆಯಲ್ಲಿ ಅಂದಾಜು 130ರಿಂದ 140 ಟನ್‌ನಷ್ಟು ಹಣ್ಣು ಮತ್ತು ತರಕಾರಿ ಮಾರಾಟವಾಗುತ್ತಿದ್ದು, ಇದರಿಂದ 4ರಿಂದ 5 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಉಳಿದ ಮಾರುಕಟ್ಟೆಗಳಲ್ಲಿ 600ರಿಂದ 700 ಟನ್‌ನಷ್ಟು ಸಾಮಗ್ರಿಗಳು ಮಾರಾಟವಾಗುತ್ತಿವೆ. ಇದರಿಂದ 31ರಿಂದ 51 ಕೋಟಿ ರೂ.ನಷ್ಟು ವ್ಯವಹಾರ ನಡೆಯುತ್ತದೆ ಎನ್ನುತ್ತಾರೆ ತಜ್ಞರು.
ನಗರದಲ್ಲಿ ಹಲವು ಪಾರಂಪರಿಕ ಕಟ್ಟಡಗಳಿವೆ. ಕೃಷ್ಣರಾಜೇಂದ್ರ ಮಾರುಕಟ್ಟೆ ಇನ್ನು ಕೆಲವೇ ವರ್ಷಗಳಲ್ಲಿ ಶತಮಾನದ ಸಂಭ್ರಮ ಆಚರಿಸಿಕೊ ಳ್ಳಲಿದೆ. ರಸೆಲ್ ಮಾರುಕಟ್ಟೆ ಮತ್ತು ಜಾನ್ಸನ್ ಮಾರುಕಟ್ಟೆಗಳು ಕೃಷ್ಣರಾಜೇಂದ್ರ ಮಾರುಕಟ್ಟೆಯ ಕಿರಿಯ ಸಹೋದರರು.
ಬಿಬಿಎಂಪಿಯ ಕೇಂದ್ರ ಭಾಗದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ 134 ಮಾರು ಕಟ್ಟೆಗಳಿವೆ. ಇವುಗಳಲ್ಲಿ ಬಹುತೇಕ ಮಾರುಕಟ್ಟೆಗಳು 20ರಿಂದ 80 ವರ್ಷದಷ್ಟು ಹಳೆಯದಾಗಿವೆ. ಇವು ಕಾಯಕಲ್ಪದ ನಿರೀಕ್ಷೆಯಲ್ಲಿವೆ.
ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ (ಸಿಟಿ ಮಾರುಕಟ್ಟೆ), ರಸೆಲ್ ಮಾರುಕಟ್ಟೆ, ಜಾನ್ಸನ್ ಮಾರುಕಟ್ಟೆ ಮತ್ತು ಮಡಿವಾಳ, ಯಶವಂತಪುರ, ಕೃಷ್ಣರಾಜಪುರ (ಕೆ.ಆರ್.ಪುರ) ಮಾರುಕಟ್ಟೆಗಳಲ್ಲಿ ಪ್ರತಿದಿನ ಸಾವಿರಾರು ಜನ ಬಂದು ಹೋಗುತ್ತಾರೆ. ಪ್ರತಿಯೊಂದು ಮಾರುಕಟ್ಟೆಯ ಒಡಲೊಳಗೆ ಹಲವು ಸಮಸ್ಯೆಗಳಿವೆ. ದಶಕಗಳ ಇತಿಹಾಸವಿರುವ ಈ ಮಾರುಕಟ್ಟೆಗಳನ್ನು ಉಳಿಸಿ ಕೊಳ್ಳುವ ಕೆಲಸವೇ ಆಗಿಲ್ಲ. ಜಯನಗರದ ನಾಲ್ಕನೇ ಬ್ಲಾಕ್ ಮತ್ತು ಮಲ್ಲೇಶ್ವರ ಮಾರುಕಟ್ಟೆಗಳಿಗೆ ಕಾಯಕಲ್ಪ ನೀಡಲು ಬಿಬಿಎಂಪಿ ಮುಂದಾಯಿ ತಾದರೂ ಅದು ಕಗ್ಗಂಟಾಗಿ ಉಳಿದಿದೆ. ಮಾರುಕಟ್ಟೆಗ ಳಿಂದಲೇ ಪ್ರತಿದಿನ ನಗರದ ನಾಲ್ಕನೇ ಒಂದು ಭಾಗದಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಒಂದು ಅರ್ಥದಲ್ಲಿ ಮಾರ್ಕೆಟ್‌ಗಳು ತ್ಯಾಜ್ಯ ಉತ್ಪಾದನೆಯ ಕಾರ್ಖಾನೆಗಳು ಎಂದರೂ ತಪ್ಪಾಗುವುದಿಲ್ಲ.
ಮಾರುಕಟ್ಟೆಗಳನ್ನು ತ್ಯಾಜ್ಯದಿಂದ ಮುಕ್ತಗೊಳಿಸಿ, ಸ್ವಚ್ಛವಾಗಿಡಲು ಅಂದಿನಿಂದ ಇಂದಿನವರೆಗೂ ಮೇಯರ್‌ಗಳು, ಆಯುಕ್ತರು ಮತ್ತು ಸಂಬಂಧಿತ ಇಲಾಖೆಯವರಿಂದ ಹಿಡಿದು ಇಂದಿನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರವರೆಗೆ ಶ್ರಮಿಸಿದ್ದಾರೆ. ಆದರೆ, ಸ್ವಚ್ಛತೆಯ ಕನಸು ಇಂದಿಗೂ ಕೈಗೂಡುತ್ತಿಲ್ಲ. ಕಟ್ಟೆ ಸತ್ಯ ಅವರು ವಿಶೇಷ ಅಭಿಯಾನವನ್ನೇ ನಡೆಸಿದ್ದರು. ಕಾಲೇಜು ವಿದ್ಯಾರ್ಥಿಗಳೇ ಮಾರುಕಟ್ಟೆಯ ರಸ್ತೆಗಳಿಗೆ ಇಳಿದು ಸ್ವಚ್ಛತೆ ಕೆಲಸ ಕೈಗೊಂಡಿದ್ದರು. ಕೆಲವೇ ದಿನಗಳಲ್ಲಿ ಬಣ್ಣ ಕಳೆದುಕೊಂಡ ಗೋಡೆಯಂತೆ ಮಾರುಕಟ್ಟೆಗಳು ಯಥಾಸ್ಥಿತಿ ತಲುಪಿಬಿಟ್ಟಿವೆ.
ಸಾವಿರಾರು ಜನ ನಿತ್ಯ ನಡೆದಾಡುವ ಈ ಮಾರು ಕಟ್ಟೆಗಳಲ್ಲಿ ಅವಘಡಗಳು ಸಂಭವಿಸಿದರೆ ಬಾಯಿ ಬಡಿದುಕೊಳ್ಳಬೇಕು. ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ ಬರಲಾಗದಷ್ಟು ಕುರಿದಾದ ರಸ್ತೆಗಳು ಮಾರುಕಟ್ಟೆಗಳಲ್ಲಿವೆ. ತುರ್ತಾಗಿ ಬೆಂಕಿ ನಂದಿಸುವ ಒಂದೇ ಒಂದು ಸಾಧನ ಕೂಡ ಇಲ್ಲಿ ಕಾಣಸಿಗುವುದಿಲ್ಲ. ಯಾವ ದಿಕ್ಕಿನಲ್ಲಿ ಓಡಿ ತಪ್ಪಿಸಿಕೊಳ್ಳಬೇಕು ಎನ್ನುವುದಕ್ಕೆ ಸಣ್ಣ ಮಾರ್ಗಸೂಚಿಯೂ ಇಲ್ಲ. ಜನ ಹೆಚ್ಚಿರುವುದರಿಂದ ಅವಘಡಗಳು ಸಂಭವಿಸಿದರೆ ಕಾಲ್ತುಳಿವಾಗುವ ಸಾಧ್ಯತೆಯೂ ಇರುತ್ತದೆ. ಈ ಹಿಂದೆ ಬೆಂಕಿ ಅವಘಡದಿಂದ ನರಳಿರುವ ರಸೆಲ್ ಮಾರುಕಟ್ಟೆಯ ಮೇಲಿನ ಬೆಂಕಿ ಅವಘಡದ ಕರಿನೆರಳು ಇನ್ನೂ ಮಾಸಿಲ್ಲ.
● ಹಿತೇಶ್ ವೈ