Advertisement

ಪ್ರತಿ ಕುಟುಂಬದವರು ಕನಿಷ್ಠ ಹತ್ತು ಸಸಿ ನೆಡಿ: ಜಯಲಕ್ಷ್ಮೀ

01:02 PM Jun 09, 2017 | Team Udayavani |

ಹುಣಸೂರು: ವಿಶ್ವಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ, ಔಟ್‌ ರಿಚ್‌ ಸಂಸ್ಥೆ ಹಾಗೂ ಐಟಿಸಿ ಕಂಪನಿ ವತಿಯಿಂದ ತಾಲೂಕಿನ ಹರವೆ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.

Advertisement

ನಂತರ ನಡೆದ ಸಮಾರಂಭದಲ್ಲಿ ಜಿಪಂ ಸದಸ್ಯೆ ಜಯಲಕ್ಷ್ಮೀರಾಜಣ್ಣ ಮಾತನಾಡಿ, ಜಾಗತಿಕ ತಾಪಮಾನ ಕಡಿಮೆ ಮಾಡುವ ಹಾಗೂ ಉತ್ತಮ ಪರಿಸರ ನಿರ್ಮಾಣ ಮಾಡಲು ಐಟಿಸಿ ಹಾಗೂ ಔಟ್‌ ರಿಚ್‌ ಸಂಸ್ಥೆ ಅರಣ್ಯ ಇಲಾಖೆ ಸಹಯೋಗದೊಂದಿಗೆ ಉಚಿತವಾಗಿ ಸಸಿಗಳನ್ನು ವಿತರಿಸುತ್ತಿದ್ದು, ಗ್ರಾಮೀಣ ಪ್ರದೇಶದ ರೈತ ಕುಟುಂಬದವರು ಕನಿಷ್ಠ 10 ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಿ ಎಂದರು.

ಐಟಿಸಿ ಕಂಪನಿ ಮಾರ್ಕೆಟಿಂಗ್‌ ಮ್ಯಾನೇಜರ್‌ ವಿ.ಪಿ ಆರ್‌.ಧೀಕ್ಷಿತ್‌ ಮಾತನಾಡಿ, ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಭಾಗದಲ್ಲಿ ರೈತರು ತಂಬಾಕು ಬೆಳೆಯನ್ನೇ ಪ್ರಧಾನವಾಗಿರಿಸಿಕೊಂಡಿದ್ದು, ಜಮೀನಿನಲ್ಲಿ ಬೆಳೆದ ಮರಗಳನ್ನೆಲ್ಲಾ ತಂಬಾಕು ಹದ ಮಾಡಲು ಉರುವಲಿಗಾಗಿ ಕಟಾವು ಮಾಡಿಕೊಂಡಿದ್ದಾರೆ.

ಅಲ್ಲದೇ ಪಕ್ಕದ ಜಿಲ್ಲೆ, ರಾಜ್ಯಗಳಿಂದಲೂ ಪ್ರತಿವರ್ಷ 40-50 ಸಾವಿರ ಲೋಡ್‌ ನಷ್ಟು ಸೌದೆ ಆಮದು ಮಾಡಿಕೊಳ್ಳುತ್ತಿದ್ದು, ತಾಂತ್ರಿಕತೆ ಬಳಸಿಕೊಂಡು ತಂಬಾಕು ಹದ ಮಾಡಿದಲ್ಲಿ ಕಡಿಮೆ ಖರ್ಚಿನಲ್ಲಿ ತಂಬಾಕು ಹದಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಐಟಿಸಿ ಕಂಪನಿ ಸದಾ ರೈತರೊಂದಿಗಿದ್ದು ಬಳಸಿಕೊಳ್ಳಿ ಎಂದು ತಿಳಿಸಿದರು.

ಔಟ್‌ ರಿಚ್‌ ಸಂಸ್ಥೆಯ ಯೋಜನಾಧಿಕಾರಿ ಶ್ರೀನಿವಾಸರಾವ್‌, ಸಂಸ್ಥೆಯ ತಾಲೂಕು ಸಮನ್ವಯಾಧಿಕಾರಿ ಧರಣೆಪ್ಪ ಮಾತನಾಡಿ, ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಆಸಕ್ತಿಯುಳ್ಳ ರೈತರಿಗೆ ಅಗತ್ಯವಾಗಿ ಬೇಕಾದ ಸಸಿಗಳನ್ನು ನೀಡಲು ಮುಂದೆ ಬಂದಿದ್ದು ಬಳಸಿಕೊಳ್ಳಬಹುದು ಎಂದರು.

Advertisement

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎಂ.ಸೋಮಪ್ಪ ಮಾತನಾಡಿ, ಅರಣ್ಯ ಇಲಾಖೆ ಆವರಣದಲ್ಲಿರುವ ಕೇಂದ್ರೀಯ ಸಸ್ಯಕ್ಷೇತ್ರ ಹಾಗೂ ಮರದೂರು ಅಲ್ಲದೆ ಪಿರಿಯಾಪಟ್ಟಣ, ಕೆ.ಆರ್‌.ನಗರದಲ್ಲೂ ಸಾಕಷ್ಟು ಸಸಿಗಳನ್ನು ಬೆಳೆಸಲಾಗಿದ್ದು, ಬೇಡಿಕೆ ಹೆಚ್ಚಿದ್ದಲ್ಲಿ ಬೇರೆಡೆಯಿಂದಲೂ ತರಿಸಿಕೊಡಲಾಗುವುದಲ್ಲದೆ, ಹಳ್ಳಿಗಳಲ್ಲಿ ಸೀಡ್‌ ಬಾಲ್‌ ಕಾರ್ಯಕ್ರಮದಡಿಯಲ್ಲಿಯೂ ಸಾಕಷ್ಟು ಬೀಜಗಳನ್ನು ಹಾಕಲಾಗಿದ್ದು, ಪೋಷಣೆ ಮಾಡುವ ಜವಾಬ್ದಾರಿ ಎಲ್ಲ ನಾಗರಿಕರೂ ಹೊರಬೇಕೆಂದು ಮನವಿ ಮಾಡಿದರು.

ತಂಬಾಕು ಮಂಡಳಿ ಪ್ರಾದೇಶಿಕ ವ್ಯಸ್ಥಾಪಕ ಶಿವರುದ್ರಯ್ಯ, ಸಿಟಿಆರ್‌ಐ ಮುಖ್ಯಸ್ಥ ಡಾ.ರಾಮಕೃಷ್ಣ, ತಾಪಂ ಅಧ್ಯಕ್ಷೆ ಪದ್ಮಮ್ಮಬಸವರಾಜು, ಗ್ರಾಪಂ ಅಧ್ಯಕ್ಷ ಮರಿಯಪ್ಪ, ಆರ್‌ಎಫ್ಒ ದೇವಯ್ಯ, ಸಿಆರ್‌ಪಿ ಮಹದೇವ್‌, ಮುಖ್ಯ ಶಿಕ್ಷಕ ಗುರುಮೂರ್ತಿ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು, ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next