Advertisement

ಪ್ರತಿ ಕುಟುಂಬಕ್ಕಿದೆ 100 ಮಾನವ ದಿನಗಳ ಕೆಲಸ

12:25 PM Jul 31, 2019 | Team Udayavani |

ಹಾವೇರಿ: ಯಲಗಚ್ಚ ಗ್ರಾಮದಲ್ಲಿ ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೋಜಗಾರ್‌ ಹಾಗೂ 1ನೇ ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ ನಡೆಯಿತು.

Advertisement

ತಾಲೂಕು ಸಾಮಾಜಿಕ ಲೆಕ್ಕ ಪರಿಶೊಧಕ ಸಂಪತ್ತಕುಮಾರ ಪೂಜಾರ ಮಾತನಾಡಿ, ಸಾಮಾಜಿಕ ಪರಿಶೋಧನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಮಂಡಿಸಿ, ನಂತರ ಯೋಜನೆಯಡಿ ಇರುವ ವೈಯಕ್ತಿಕ ಕಾಮಗಾರಿಗಳ ಬಗ್ಗೆ ಮತ್ತು ಸಾಮಾಜಿಕ ಭದ್ರತಾ ಯೋಜನೆಯ ಬಗ್ಗೆ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವು ಉದ್ಯೋಗ ಚೀಟಿ ಹೊಂದುವ ಹಕ್ಕು ಹೊಂದಿರುತ್ತಾರೆ. ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲ ವಯಸ್ಕರು, ಅಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ. ಮಹಿಳೆಯರಿಗೆ ಮತ್ತು ಪುರುಷ‌ರಿಗೆ ಸಮಾನ ಕೂಲಿ, ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಹದಿನೈದು ದಿನದೊಳಗೆ ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆಗೆ ಅವಕಾಶವಿರುತ್ತದೆ. ವಾರಾಂತ್ಯದಲ್ಲಿ ಕೂಲಿಯನ್ನು ಪಾವತಿಸಬೇಕು. ತಪ್ಪಿದ್ದಲ್ಲಿ ಕೂಲಿ ವಿಳಂಬ ಪರಿಹಾರ ಭತ್ಯೆ ಪಡೆಯಲು ಅವಕಾಶವಿರುತ್ತದೆ. ಕೂಲಿ ಹಣ ನೇರವಾಗಿ ಖಾತೆಗೆ ಜಮೆ ಮಾಡಲಾಗುವುದು. ಕೆಲಸ ಮಾಡುವ ಸ್ಥಳದಲ್ಲಿ 6 ವರ್ಷದೊಳಗಿನ 5ಕ್ಕಿಂತ ಹೆಚ್ಚು ಮಕ್ಕಳು ಬಂದಲ್ಲಿ ಮಕ್ಕಳ ನಿರ್ವಹಣೆಗೆ ಒಬ್ಬರಿಗೆ ಅವಕಾಶ ಹಾಗೂ ಅವರಿಗೂ ಆ ದಿನದ ಭತ್ಯೆ ನೀಡಲಾಗುವುದು ಎಂದರು.

ಕೆಲಸವನ್ನು ಸಾಧ್ಯವಾದಷ್ಟು ಕಾರ್ಮಿಕರ ಗ್ರಾಮದ ಪರಿಮಿತಿಯಲ್ಲ್ಲಿಯೇ ಒದಗಿಸಲಾಗುವುದು. ಐದು ಕಿಲೋಮೀಟರ್‌ ಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿ ಉದ್ಯೋಗ ಒದಗಿಸಿದಲ್ಲಿ ಸಾರಿಗೆ ಮತ್ತು ಜೀವನ ನಿರ್ವಹಣಾ ವೆಚ್ಚಕ್ಕಾಗಿ ಕೂಲಿ ದರದ ಶೇ. 10ರಷ್ಟನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಉದ್ಯೋಗ ಚೀಟಿಯಲ್ಲಿ ನೊಂದಾಯಿತ ಕುಟುಂಬದ ಸದಸ್ಯರು ವಾರ್ಷಿಕ 100 ದಿನಗಳ ಕೆಲಸದ ಬೇಡಿಕೆಯನ್ನು ತಮ್ಮ ಇಚ್ಚೆಗನುಸಾರವಾಗಿ ಯಾವ ಸಮಯದಲ್ಲಾದರೂ ಪಡೆಯಬಹುದು. ನಮೂನೆ -6 ರಲ್ಲಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ ನಂತರ ಸೂಚಿಸಿದ ಸ್ಥಳದಲ್ಲಿ ಮತ್ತು ಸಮಯದಲ್ಲಿ ಹಾಜರಾಗಿ ನಿಗಧಿಪಡಿಸಿದ ಕೆಲಸವನ್ನು ನಿರ್ವಹಿಸುವುದು. ವಿಕಲಚೇತನರಿಗೆ ಮತ್ತು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50 ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿಯ ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿ ಜಿ.ಎಸ್‌. ಬೆನ್ನೂರ ಮಾತನಾಡಿ, ರೋಜಗಾರ ದಿವಸವನ್ನು ಒಂದು ತಿಂಗಳಲ್ಲಿ ಕನಿಷ್ಠ ಒಂದು ಬಾರಿ ವಾರ್ಡ್‌ ಮಟ್ಟದಲ್ಲಿ ಆಯೋಜಿಸಬೇಕು. ಹಂತವಾರು ಪ್ರಗತಿಯಲ್ಲಿರುವ ವಿವಿಧ ವಸತಿ ಯೋಜನೆ ಅಡಿ (ಮನೆ ನಿರ್ಮಾಣ ಕಾಮಗಾರಿಗೆ) ಪ್ರತಿಯೊಬ್ಬ ಫಲಾನುಭವಿಗೆ 90 ಮಾನವ ದಿನಗಳ ಮೊತ್ತವನ್ನು ಸಂಬಧಪಟ್ಟ ಫಲಾನುಭವಿಗೆ ಪಾವತಿಸಲಾಗುವುದು ಎಂದರು.

Advertisement

ರೋಜಗಾರ್‌ ದಿವಸವನ್ನು ವಾರ್ಡಿನ ಶಾಲೆಗಳಲ್ಲಿ, ಗ್ರಾಮ ಪಂಚಾಯಿತಿ ಭವನಗಳಲ್ಲಿ, ಸ್ವಸಹಾಯ ಸಂಘಗಳಲ್ಲಿ, ರಾಜೀವಗಾಂಧಿ ಸೇವಾಕೇಂದ್ರಗಳಲ್ಲಿ ನಡೆಸಬಹುದಾಗಿದೆ. ನಿಗದಿತ ಸಂಖ್ಯೆಯಲ್ಲಿ ಉದ್ಯೋಗದ ಬೇಡಿಕೆ ಇರುವಂತೆ ನೋಡಿಕೊಳ್ಳುವುದು ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ವ್ಯಕ್ತಿಗತ ಫಲಾನುಭವಿಗಳಿಗೆ ಪ್ಯಾಕೇಜ್‌ ಮಾದರಿಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಕೋಣನವರ, ಉಪಾಧ್ಯಕ್ಷೆ ಶಾಂತವ್ವ ಬಸಾಪೂರ, ಸದಸ್ಯರು, ಉದ್ಯೋಗ ಚೀಟಿ ಪಡೆದ ಕೂಲಿ ಕಾರ್ಮಿಕರು, ಜನಪ್ರತಿನಿಧಿಗಳು, ತಾಲೂಕುಮಟ್ಟದ ಶಿಶು ಯೋಜನಾಧಿಕಾರಿ ಉಮಾ ಕೆ.ಎಸ್‌., ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ ಯರೇಶಿಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next