ಶಹಾಬಾದ: ದೈನಂದಿನ ವ್ಯವಹಾರದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಆರಂಭಿಸಿರುವ ಇ-ಸ್ಟ್ಯಾಪಿಂಗ್ ಸೌಲಭ್ಯ ಯಶಸ್ವಿಯಾಗಲಿ ಎಂದು ಸೇಡಂ ಸಹಕಾರ ಸಂಘದ ಸಹಾಯಕ ನಿಬಂಧಕ ರವೀಂದ್ರ ಹೇಳಿದರು.
ನಗರದ ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ನಿಯಮಿತದಲ್ಲಿ ಆಯೋಜಿಸಲಾಗಿದ್ದ ಇ-ಸ್ಟ್ಯಾಪಿಂಗ್ ಸೇವೆ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಇ-ಸ್ಟ್ಯಾಪಿಂಗ್ ಸೇವೆ ನೀಡುವುದರಿಂದ ಸಾರ್ವಜನಿಕರಿಗೆ ದೂರದ ಜಿಲ್ಲಾ ಕೇಂದ್ರಕ್ಕೆ ತೆರಳುವುದನ್ನು ತಪ್ಪಿಸಿದಂತಾಗುತ್ತದೆ. ಅಲ್ಲದೇ ಈಗ ಸರ್ಕಾರದ ಪ್ರತಿ ವ್ಯವಹಾರಕ್ಕೂ ಇ-ಸ್ಟಾಂಪ್ ಅಗತ್ಯವಿದ್ದು, ಈ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವಂತೆ ಆಗಲಿ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಬ್ಯಾಂಕಿನ ಆರ್ಥಿಕ ಪ್ರಗತಿಯೂ ಹೆಚ್ಚುತ್ತದೆ ಎಂದರು.
ನಿವೃತ್ತ ಲೆಕ್ಕ ಪರಿಶೋಧಕ ನವಲೆ ಭಾಗಪ್ಪ ಮಾತನಾಡಿ, ಜನರಿಗೆ ಅಗತ್ಯವಿರುವ ಇ-ಸ್ಟಾಂಪ್ ಸೇವೆ ಸುಲಭ ರೀತಿಯಲ್ಲಿ ಸಿಗುವಂತಾಗಲಿ ಎಂದರು.
ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ| ಅಹ್ಮದ್ ಪಟೇಲ್ ಮಾತನಾಡಿ, ತಾಂತ್ರಿಕ ಯುಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಮಯ ಉಳಿತಾಯ, ಶೀಘ್ರದಲ್ಲೇ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಇ-ಸ್ಟಾಂಪ್ ಸೇವೆ ಪ್ರಾರಂಭ ಮಾಡಿದ್ದೇವೆ ಎಂದರು.
ಮುಖಂಡರಾದ ನಿಂಗಣ್ಣ ಸಂಗಾವಿಕರ್, ಇಬ್ರಹಿಂಸಾಬ್, ಮಲ್ಲಿಕಾರ್ಜುನ ಸ್ವಾಮಿ, ನಿಂಗಣ್ಣ ಪೂಜಾರಿ, ರಾಜು ಕಣದಾ ಳಕರ್, ಶರಣು ಮಡಿವಾಳ ಇತರರು ಇದ್ದರು.