Advertisement

ನಕಲಿ ಅಂಕಪಟ್ಟಿ ಪತ್ತೆಗೆ ಇ-ಸಿಗ್ನೇಚರ್‌

11:45 AM Jun 03, 2019 | Suhan S |

ಹುಬ್ಬಳ್ಳಿ: ಉನ್ನತ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿರುವ ನಕಲಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ಪತ್ತೆಗೆ ರಾಜ್ಯ ಸರಕಾರ ಇ-ಸಿಗ್ನೇಚರ್‌ ವೆರಿಫಿಕೇಶನ್‌ ವ್ಯವಸ್ಥೆ ಜಾರಿಗೊಳಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲಕುಮಾರ ಹೇಳಿದರು.

Advertisement

ನಗರದ ಹೋಟೆಲೊಂದರಲ್ಲಿ ಫ್ಯೂಲ್ ಪ್ರತಿಷ್ಠಾನ ಎಪಿಜೆ ಕಲಾಂ ಯೋಜನೆಯಡಿ ತಾಂತ್ರಿಕ ಮತ್ತು ಎಂಬಿಎ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಪ್ರಮಾಣಪತ್ರ ವಿತರಣೆ ಹಾಗೂ ‘ಭವಿಷ್ಯದಲ್ಲಿ ಕೌಶಲ’ ಸಮಾವೇಶದಲ್ಲಿ ಅವರು ಮಾತನಾಡಿದರು.

ಇ-ಸಿಗ್ನೇಚರ್‌ ವೆರಿಫಿಕೇಶನ್‌ ವ್ಯವಸ್ಥೆ ಜಾರಿಯಿಂದ ನಕಲಿ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ ಹಾವಳಿ ತಪ್ಪಲಿದೆ. ರಾಜ್ಯ ಸರಕಾರ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗೆ ಮುಂದಾಗಿದೆ. ದೂರ ಶಿಕ್ಷಣ ವ್ಯವಸ್ಥೆ ಡಿಜಿಟಲೀಕರಣ, 2020ರ ನಂತರ ತಾಂತ್ರಿಕ ಶಿಕ್ಷಣ ಪ್ರವೇಶ ಪರೀಕ್ಷೆಯನ್ನು ಆನ್‌ಲೈನ್‌ ತರುವ ಚಿಂತನೆ ನಡೆದಿದೆ ಎಂದರು.

ಜ್ಞಾನಗಂಗಾ ವಿಸ್ತರಣೆ: ವಿದ್ಯಾರ್ಥಿ ಹಂತದಲ್ಲಿ ಕೌಶಲಾಧಾರಿತ ಶಿಕ್ಷಣ ನೀಡುವ ಕಾರಣಕ್ಕೆ ರಾಜ್ಯ ಸರಕಾರ ಜಾರಿಗೊಳಿಸಿರುವ ಕೌಶಲ ಜ್ಞಾನಗಂಗಾ ಯೋಜನೆಯನ್ನು ಎಲ್ಲ ಕಾಲೇಜುಗಳಿಗೆ ವಿಸ್ತರಿಸಲಾಗುವುದು. ಈ ಯೋಜನೆಯಲ್ಲಿ ಆರಂಭವಾಗುವ ಕೇಂದ್ರಗಳು ಕೌಶಲ ತರಬೇತಿಯೊಂದಿಗೆ ಕೈಗಾರಿಕೆಗಳೊಂದಿಗೆ ಸಂಪರ್ಕ ಸಾಧಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿವೆ. ಈ ಯೋಜನೆ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ. ಇತರರಿಗೆ ಉದ್ಯೋಗ ನೀಡುವುದಕ್ಕಾಗಿ ಎನ್ನುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ. ಈಗಾಗಲೇ ಇಲಾಖೆಯಿಂದ ಸುಮಾರು 7 ಸಾವಿರ ಬೋಧಕರಿಗೆ ತರಬೇತಿ ಕೂಡ ನೀಡಲಾಗಿದೆ ಎಂದು ಹೇಳಿದರು.

ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಅನಿಲ ಸಹಸ್ರಬುಧೆ ಮಾತನಾಡಿ, ಕೌಶಲವಿಲ್ಲದ ಶಿಕ್ಷಣದಿಂದ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಉದ್ಯೋಗ ಪಡೆಯುವುದು ಅಷ್ಟೊಂದು ಸುಲಭವಾಗಿಲ್ಲ. ಯಾವ ವಿಷಯ ಆಯ್ಕೆ ಮಾಡಿಕೊಂಡರೆ ಉದ್ಯೋಗ ದೊರೆಯುತ್ತದೆ ಎಂಬುವುದನ್ನು ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕು. ಇಂದಿನ ಪರಿಸ್ಥಿತಿಯಲ್ಲಿ ಜೀವನ ರೂಪಿಸುವಂತಹ ಶಿಕ್ಷಣ ಅವಶ್ಯವಾಗಿದೆ ಎಂದರು.

Advertisement

ವಿದ್ಯಾರ್ಥಿಗಳಲ್ಲಿ ಭಾಷೆ ಹಾಗೂ ಸಂವಹನ ಕೌಶಲ ಬೆಳೆಸುವ ನಿಟ್ಟಿನಲ್ಲಿ ಎಐಸಿಟಿಇಯಲ್ಲಿ ಮೂರು ವಾರದ ತರಬೇತಿ ನಡೆಸಲಾಗುತ್ತಿದೆ. ಇಂಗ್ಲಿಷ್‌, ಹಿಂದಿ, ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಈ ತರಬೇತಿ ನೀಡಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹೊರ ಜಗತ್ತಿನ ಜ್ಞಾನ ಇರಬೇಕು ಎನ್ನುವ ಕಾರಣಕ್ಕೆ ಸಂವಿಧಾನ, ಪರಿಸರ ವಿಜ್ಞಾನ ಹಾಗೂ ಸಾಂಪ್ರದಾಯಿಕ ಶಿಕ್ಷಣ ನೀಡಲಾಗುತ್ತದೆ. ಈ ಮೂರು ವಿಷಯಗಳಿಗೆ ಯಾವುದೇ ಪರೀಕ್ಷೆ ಹಾಗೂ ಅಂಕ ಇರುವುದಿಲ್ಲ. ಕೌಶಲಾಧಾರಿತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಜೀವನ ರೂಪಿಸುವ ಕಾರ್ಯ ಎಐಸಿಟಿಇ ಮಾಡುತ್ತಿದೆ ಎಂದು ಹೇಳಿದರು.

ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿ, ಕೌಶಲಾಧಾರಿತ ತಾಂತ್ರಿಕ ಶಿಕ್ಷಣಕ್ಕೆ ಇಂದು ಸಾಕಷ್ಟು ಬೇಡಿಕೆ ಬಂದಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು, ಬೋಧಕ ವರ್ಗ ಗಂಭೀರವಾಗಿ ಚಿಂತನೆ ಮಾಡಬೇಕು. ಕ್ರಿಯಾಶೀಲತೆ ಆಧಾರಿತ ಜ್ಞಾನ ಮಾತ್ರ ಆವಿಷ್ಕಾರಕ್ಕೆ ನಾಂದಿ ಎಂಬುವುದನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು ಎಂದರು.

ಫ್ಯೂಲ್ ಚೇರ್ಮನ್‌ ಕೇತನ ದೇಶಪಾಂಡೆ, ಮುಖ್ಯಮಾರ್ಗದರ್ಶಿ ಸಂತೋಶ ಹುರಳಿಕೊಪ್ಪಿ, ಎಐಸಿ-ಎಂಐಟಿ ವಿವಿ ಸಿಇಒ ಡಾ| ಮೋಹಿತ ದುಬೆ, ಐಐಎಂ ಮಾಜಿ ನಿದೇರ್ಶಕ ಡಾ| ಕೆಆರ್‌ಎಸ್‌ ಮೂರ್ತಿ, ಪುಣೆ ಎಂಐಟಿ ವಿವಿ ಡೀನ್‌ ಡಾ| ಸಯಾಲಿ ಗಾವಂಕರ, ಅಡೋಬ್‌ ಪ್ರೋಗಾಂ ಮುಖ್ಯಸ್ಥೆ ಗರೀಮಾ ಗಬ್ಬರ, ಯುಎನ್‌ಡಿಪಿ ಯೋಜನೆ ಮುಖ್ಯಸ್ಥೆ ಕಾಂತಾ ಸಿಂಗ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next