Advertisement

ರಾಜ್ಯದಲ್ಲೂ ಇ-ಅಧಿವೇಶನ?

01:46 AM Jun 23, 2020 | Sriram |

ಬೆಂಗಳೂರು: ಕೋವಿಡ್-19 ಸೋಂಕು ತೀವ್ರ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ನಡೆಸದಿರಲು ಸರಕಾರ ತೀರ್ಮಾನಿಸಿದ್ದು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವೂ ನಡೆಯುವುದು ಅನುಮಾನ.

Advertisement

ಇ- ಸಂಸತ್‌ ಅಧಿವೇಶನ ನಡೆದರೆ ಅದೇ ಮಾದರಿಯಲ್ಲಿ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.

ಜುಲೈಯಲ್ಲಿ ಮುಂಗಾರು ಅಧಿವೇಶನ ನಡೆಯಬೇಕಿದ್ದು, ವಿಕಾಸಸೌಧ, ವಿಧಾನ ಸೌಧಕ್ಕೂ ಕೋವಿಡ್ -19 ಸೋಂಕು ವ್ಯಾಪಿಸಿರುವ ಕಾರಣ ಅಧಿವೇಶನ ನಡೆ ಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಅಧಿವೇಶನ ಬಹುತೇಕ ಮುಂದೂಡಿಕೆಯಾಗಲಿದೆ.

ನವೆಂಬರ್‌ನಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಉದ್ದೇಶ ಇತ್ತಾದರೂ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಕಳೆದ ವರ್ಷ ಪ್ರವಾಹ ಹಿನ್ನೆಲೆಯಲ್ಲಿ ಅದು ರದ್ದಾಗಿತ್ತು.

ರಾಜ್ಯದಲ್ಲೂ ಇ-ವಿಧಾನಸಭೆ
ಎಲ್ಲ ಶಾಸಕರು ಶಾಸಕರ ಭವನದ ಕೊಠಡಿಗಳಲ್ಲಿ ಕುಳಿತು ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಅಥವಾ ಸಾಮಾಜಿಕ ಅಂತರ ಕಾಯ್ದುಕೊಂಡು ಆಡಳಿತ ಮತ್ತು ವಿಪಕ್ಷಗಳಿಂದ ನಿರ್ದಿಷ್ಟ ಸಂಖ್ಯೆಯ ಸದಸ್ಯರು ಮಾತ್ರ ಪಾಲ್ಗೊಂಡು ಅಧಿವೇಶನ ನಡೆಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗುತ್ತಿದೆ.

Advertisement

60 ದಿನಗಳ ತೀರ್ಮಾನ ಪಾಲನೆಯಾಗದು
ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕು ಎಂದು ಹಿಂದೆ ತೀರ್ಮಾನಿಸಲಾಗಿದೆ. ಜಂಟಿ ಅಧಿವೇಶನ, ಅನಂತರ ಬಜೆಟ್‌ ಅಧಿವೇಶನ, ಬಳಿಕ ಮುಂಗಾರು ಮತ್ತು ಚಳಿಗಾಲದ ಅಧಿವೇಶನ ಸೇರಿ 60 ದಿನ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈ ಬಾರಿ ವರ್ಷದ ಜಂಟಿ ಅಧಿವೇಶನವೂ ತಡವಾಗಿ ಆರಂಭವಾಗಿ 20 ದಿನ ಮಾತ್ರ ನಡೆದಿದೆ. ಈಗ ಮುಂಗಾರು ಮತ್ತು ಚಳಿಗಾಲದ ಅಧಿವೇಶನಗಳೂ ಎಷ್ಟು ದಿನ ನಡೆಯುವುದೋ ಖಚಿತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next