Advertisement

ಸಂಶೋಧನೆ ಗುಣಮಟ್ಟ ಹೆಚ್ಚಳಕ್ಕೆ ಇ-ಸಂಪನ್ಮೂಲ ನೆರವು

11:16 AM Jul 09, 2019 | Suhan S |

ಬೀದರ: ಕಲಿಕೆ, ಬೋಧನೆ, ಸಂಶೋಧನೆಯ ಗುಣಮಟ್ಟ ಹೆಚ್ಚಳಕ್ಕೆ ಇ-ಸಂಪನ್ಮೂಲಗಳು ನೆರವಾಗುತ್ತದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಲಹಾ ಸಮಿತಿ ಸದಸ್ಯ ಪ್ರೊ| ಪಿ.ವಿ. ಕಣ್ಣುರ್‌ ಹೇಳಿದರು.

Advertisement

ನಗರದ ಪ್ರತಿಷ್ಠಿತ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿಭಾಗ ಹಮ್ಮಿಕೊಂಡಿದ್ದ ಇ-ರಿಸೋರ್ಸ್‌ ಫಾರ್‌ ಅಕ್ಯಾಡೆಮಿಕ್‌ ಎಕ್ಸ್ಸಲೆನ್ಸ್‌ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹಿಂದೆ ಮಾಹಿತಿ ಸಂಗ್ರಹ ಸೇರಿದಂತೆ ಎಲ್ಲವೂ ಕಷ್ಟಕರವಾಗಿದ್ದವು. ಪ್ರತಿಯೊಂದಕ್ಕೂ ಪುಸ್ತಕಗಳ ಪುಟ ತಿರುವಿ ಹಾಕಬೇಕಿತ್ತು. ಗ್ರಂಥಾಲಯಗಳನ್ನು ಹುಡುಕಿಕೊಂಡು ಹೋಗಬೇಕಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಯಿಂದಾಗಿ ಈ ಕಷ್ಟ ನಿವಾರಣೆಯಾಗಿದೆ ಎಂದರು. ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಂತರ್ಜಾಲದಲ್ಲಿ ಪಡೆಯಬಹುದು. ಮಾಹಿತಿ ಹುಡುಕಾಟ, ಸಂಗ್ರಹವೂ ಸುಲಭವಾಗಿದೆ ಎಂದು ಹೇಳಿದರು.

ಇ- ರಿಸೋರ್ಸ್‌ ವಿದ್ಯಾರ್ಥಿ, ಅಧ್ಯಾಪಕರಿಬ್ಬರಿಗೂ ಸಹಕಾರಿಯಾಗಿದೆ. ಬೋಧನೆಗೆ ಮುನ್ನ ಅಧ್ಯಾಪಕರು ವಿಷಯ ಸಂಗ್ರಹಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಸಂಬಂಧಿತ ವಿಷಯದ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಬೋಧನೆ, ಕಲಿಕೆ ಮತ್ತು ಸಂಶೋಧನೆಯ ಗುಣಮಟ್ಟ ಹೆಚ್ಚಳಕ್ಕೂ ಇ-ರಿಸೋರ್ಸ್‌ ನೆರವಾಗುತ್ತದೆ ಎಂದು ಹೇಳಿದರು.

ಶಿಕ್ಷಣದ ಗುಣಮಟ್ಟ ಕುರಿತಂತೆ ಟೀಕೆ ಟಿಪ್ಪಣಿ ಕೇಳಿ ಬರುತ್ತಿವೆ. ಆದರೆ, ಇದಕ್ಕಾಗಿ ವಿದ್ಯಾರ್ಥಿಗಳನ್ನು ದೂರಬಾರದು. ಗುಣಮಟ್ಟ ಕಾಪಾಡುವ ಜವಾಬ್ದಾರಿ ಇರುವುದು ಅಧ್ಯಾಪಕರ ಮೇಲೆ. ಬಹುತೇಕ ಸಂಗತಿಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನೇ ಅನುಸರಿಸುತ್ತಾರೆ. ಹೀಗಾಗಿ ಅಧ್ಯಾಪಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ಟೀಕಿಸುವ ಮುನ್ನ ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಶಿಕ್ಷಣದಲ್ಲಿನ ಗುಣಮಟ್ಟ ಕುರಿತು ಮಾತನಾಡುವ ಮುನ್ನ ಶಾಲಾ ಕೋಣೆ ಹಾಗೂ ಮನೆಯಲ್ಲಿನ ಗುಣಮಟ್ಟ ಕುರಿತು ಚಿಂತನೆ ನಡೆಸಬೇಕು. ಮನೆ ಮತ್ತು ಶಾಲಾ ಕೋಣೆಗಳು ಸುಧಾರಿಸಿದಲ್ಲಿ ಶಿಕ್ಷಣದ ಮಟ್ಟವೂ ಸುಧಾರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕಲಿಕೆ ನಿರಂತರ ಪ್ರಕಿಯೆ. ಆದರೆ, ಬದುಕಿಗೆ ಮಿತಿ ಇದೆ. ಒಂದೇ ಒಂದು ದಿನ ಆಯುಷ್ಯ ಹೆಚ್ಚಿಸಿಕೊಳ್ಳಲು ಮನುಷ್ಯನಿಗೆ ಸಾಧ್ಯವಿಲ್ಲ. ಇರುವ ಸಮಯವನ್ನು ಕಲಿಕೆಗೆ ಮೀಸಲಿಡುವ ಮೂಲಕ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಧ್ಯಾಪಕರು ಶ್ರಮಿಸಬೇಕು ಎಂದು ಸಕಹೆ ನೀಡಿದರು. ಪದವಿ ಅಥವಾ ಸ್ನಾಕತೋತ್ತರ ಪದವಿಗಾಗಿ ಓದುವುದು ಜ್ಞಾನಾರ್ಜನೆ ಅಲ್ಲ. ಅದು ಕಲಿಕೆಯ ಪ್ರಕ್ರಿಯೆ ಮಾತ್ರ. ಇಂದಿನ ದಿನಗಳಲ್ಲಿ ಪದವಿಗಾಗಿ ಕಲಿಕೆ ಹೆಚ್ಚುತ್ತಿದೆ. ಕಲಿಯುವುದಕ್ಕಾಗಿ, ಜ್ಞಾನ ಪಡೆಯುವುದಕ್ಕಾಗಿ ಪದವಿ ಪಡೆಯುವ ಮನೋಭಾವ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಬಿ.ಎಸ್‌. ಧಾಲಿವಾಲ್ ಮಾತನಾಡಿ, ಜ್ಞಾನಾರ್ಜನೆಗೆ ಇರುವ ಎಲ್ಲ ದಾರಿಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬದಲಾದ ಸಂದರ್ಭದಲ್ಲಿ ಮಾಹಿತಿ ಲಭ್ಯತೆಯ ಸಾಧ್ಯತೆ ಹೆಚ್ಚಿದೆ. ಇರುವ ಸ್ಥಳದಲ್ಲಿಯೇ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿದೆ ಎಂದರು. ಅಧ್ಯಾಪಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ| ರವೀಂದ್ರ ಎಕಲಾರಕರ್‌ ಮಾತನಾಡಿ, ಕಾರ್ಯಾಗಾರದ ಮಹತ್ವ ತಿಳಿಸಿದರು. ಹೆಚ್ಚುವರಿ ಅಥವಾ ವಿವರವಾದ ಮಾಹಿತಿಗಾಗಿ ಗ್ರಂಥಾಲಯಗಳನ್ನು ಹುಡುಕಿಕೊಂಡು ಹೋಗಬೇಕಿತ್ತು. ಈಗ ಎಲ್ಲವೂ ಬದಲಾಗಿದೆ. ಬಯಸಿದ ವಿಷಯದ ಬಗ್ಗೆ, ಬಯಸಿದಷ್ಟು ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು. ಆದರೆ, ಓದುವ, ತಿಳಿದುಕೊಳ್ಳುವ ಆಸಕ್ತಿ ಮಾತ್ರ ವಿದ್ಯಾರ್ಥಿಗಳಲ್ಲಿ ಇರಬೇಕಾಗುತ್ತದೆ ಎಂದರು. ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ| ನೀಲಶೆಟ್ಟಿ, ಪ್ರೊ| ಶುಭಾ, ಶಿವರಾಮ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next