ದಾವಣಗೆರೆ: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ ಇ-ಕಚೇರಿ ತಂತ್ರಾಂಶಕ್ಕೆ ಮಹಾಂತೇಶ ಬೀಳಗಿ ಚಾಲನೆ ನೀಡಿದರು.
ಈ ವೇಳೆ ಬೆಂಗಳೂರಿನ ಎಸ್‌ಸಿಆರ್‌ಬಿ ಹಿರಿಯ ಕಾರ್ಯಕ್ರಮಾಧಿಕಾರಿ ನಾಗೇಶ್. ಎನ್ ಮಾತನಾಡಿ, ಕಾಗದ ರಹಿತ ಆಡಳಿತಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಇ- ಕಚೇರ ತಂತ್ರಾಂಶ ಅಳವಡಿಸಲಾಗುತ್ತಿದೆ. ರಾಜ್ಯಾದ್ಯಂತ ಇ- ಕಚೇರಿಗಳನ್ನು ಚಾಲನೆಗೊಳಿಸುತ್ತಿದ್ದು,
ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿ 43ನೇ ಘಟಕವಾಗಿದೆ. ಉಡುಪಿಯಲ್ಲಿ ಮ್ಯಾನುವಲ್ ಕಡತ ವ್ಯವಹಾರ ನಿಲ್ಲಿಸಿ, ಸಂಪೂರ್ಣವಾಗಿ ಕಾಗದರಹಿತ ಇ-ಕಚೇರಿ ಆಡಳಿತ ಜಾರಿಗೊಳಿಸಿ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.
ಇ-ಕಚೇರಿ ವ್ಯವಸ್ಥೆಯಲ್ಲಿ ಅರ್ಜಿದಾರರಿಂದ ಅರ್ಜಿ ಪಡೆದು, ಮೊಬೈಲ್ ಸಂಖ್ಯೆ ಪಡೆದು ಕಡತದ ಪ್ರತಿ ಹಂತದ ಮಾಹಿತಿಯನ್ನು ಮೊಬೈಲ್ ಮೂಲಕ ಕಾಲ ಕಾಲಕ್ಕೆ ಕಳುಹಿಸಲಾಗುವುದು. ಅರ್ಜಿದಾರರು ತಮ್ಮ ಕಡತದ ಕುರಿತಾದ ಮಾಹಿತಿಯನ್ನು ಆನ್ ಲೈನ್ ಮೂಲಕ ತಾವು ಇರುವಲ್ಲಿಯೇ ನೋಡಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಎಸ್.ಪಿ ಹನುಮಂತರಾಯ ಮಾತನಾಡಿ, ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇ-ಕಚೇರಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುವುದು ಎಂದರು.
ಕಚೇರಿ ಸಹಾಯಕ ಆಡಳಿತಾಧಿಕಾರಿ ಕೆ.ಎಸ್ ನಾಗೇಶ್ ಮಾತನಾಡಿ, ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇ- ತಂತ್ರಾಂಶ ಪರಿಚಯಿಸಲಾಗಿದ್ದು, ಇ- ಕಚೇರಿ ತಂತ್ರಾಂಶ ನಿರ್ವಹಣೆ ಕುರಿತು ಅ ಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ವ್ಯವಸ್ಥೆಯು ಕಾಗದ ರಹಿತವಾಗಿದ್ದು, ಅರ್ಜಿದಾರರು ತಮ್ಮ ಕಡತದ ಮಾಹಿತಿ ಮತ್ತು ಕಡತವು ಯಾವ ಹಂತದಲ್ಲಿದೆ ಎಂಬುದನ್ನು ಆನ್‌ಲೈನ್ ಮೂಲಕ ತಿಳಿಯಬಹುದಾಗಿದೆ. ಇದರಿಂದಾಗಿ ಅರ್ಜಿದಾರರು ಕಚೇರಿಗಳಿಗೆ ಅಲೆಯುವುದು ಹಾಗೂ ಸಮಯ ಉಳಿತಾಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇ-ಕಚೇರಿಯ ಕುರಿತು ತರಬೇತಿ ಪಡೆದ ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ವಿತರಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್, ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಗ್ರಾಮಾಂತರ ಡಿವೈಎಸ್‌ಪಿ ಮಂಜುನಾಥ್ ಗಂಗಲ್, ಇತರರು ಈ ಸಂದರ್ಭದಲ್ಲಿದ್ದರು.