Advertisement

ನರ್ಸ್‌ಗಳಿಂದ ಪ್ರಧಾನಿಗೆ ಇ-ಮೇಲ್‌ ದೂರು

03:20 PM Apr 23, 2020 | mahesh |

ಮಂಡ್ಯ: ಕೋವಿಡ್ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಮಿಮ್ಸ್‌ ಆಸ್ಪತ್ರೆ ಸ್ಟಾಫ್ ನರ್ಸ್‌ಗಳಿಗೆ ಯಾವುದೇ ಸುರಕ್ಷತಾ ಕಿಟ್‌ಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಸ್ಟಾಫ್ ನರ್ಸ್‌ ಅಸೋಸಿಯೇಷನ್‌ ಪ್ರಧಾನಿ ನರೇಂದ್ರಮೋದಿ ಅವರಿಗೆ ಇ-ಮೇಲ್‌ ಮೂಲಕ ದೂರು ನೀಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ದೂರಿಗೆ ಸ್ಪಂದಿಸಿರುವ ಪ್ರಧಾನಿ ಮೋದಿ,
ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ಸಿಎಂ ಯಡಿಯೂರಪ್ಪನವರಿಗೆ ಸೂಚಿಸಿದ್ದು, ಸಿಎಂ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ರನ್ನು ಸಂಪರ್ಕಿಸಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆನ್ನಲಾಗಿದೆ.

Advertisement

ಕೋವಿಡ್ ಸೋಂಕಿತ 12 ಮಂದಿಯನ್ನು ಆಸ್ಪತ್ರೆ ಐಸೋಲೇಷನ್‌ ವಾರ್ಡ್‌ಗಳಲ್ಲಿ ದಾಖಲಿಸಲಾಗಿದೆ. ಆಸ್ಪತ್ರೆಯ ಕ್ವಾರಂಟೈನ್‌ ನಲ್ಲಿ 4 ಮಂದಿ ಇದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ವಹಿಸಿರುವ ವೈದ್ಯರು ಹಾಗೂ ಸ್ಟಾಫ್ ನರ್ಸ್‌ಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ವೈದ್ಯರಿಗೆ ಮಾತ್ರ ಸುರಕ್ಷತಾ ಕವಚಗಳನ್ನು ನೀಡಿ ಸ್ಟಾಫ್ ನರ್ಸ್‌ಗಳಿಗೆ ನೀಡದೆ ನೇರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ನಿಯೋಜಿಸಲಾಗಿದೆ. ವೈದ್ಯರಿಗೆ ವಿಐಪಿ ಸೌಲಭ್ಯ ಕಲ್ಪಿಸಿ ಸ್ಟಾಫ್ ನರ್ಸ್‌ಗಳಿಗೆ ಆಸ್ಪತ್ರೆಯೊಳಗಿರುವ ವ್ಯವಸ್ಥೆಯಲ್ಲೇ ಉಳಿಯುವಂತೆ ತಿಳಿಸಿ ಅವರ ಸುರಕ್ಷತೆ ಬಗ್ಗೆ ಮಿಮ್ಸ್‌ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್‌ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಮಿಮ್ಸ್‌ ನಿರ್ದೇಶಕರು, ಆಸ್ಪತ್ರೆ ಐಸೋಲೇಷನ್‌ ವಾರ್ಡ್‌ನಲ್ಲಿರುವ ಎಲ್ಲಾ ವೈದ್ಯರು,  ನರ್ಸ್‌ಗಳ ಆರೋಗ್ಯದ ಬಗ್ಗೆಯೂ ಕಾಳಜಿಯೂ ವಹಿಸಬೇಕಿತ್ತು. ವೈದ್ಯರ ಬಗ್ಗೆಯಷ್ಟೇ ಕಾಳಜಿ ವಹಿಸಿ ಅವರಿಗೆ ಮಾತ್ರ
ಸಂಪೂರ್ಣ ದೇಹವನ್ನು ಆವರಿಸುವ ಸುರಕ್ಷತಾ ಕವಚಗಳನ್ನು ಒದಗಿಸಿದ್ದಾರೆ. ಅಲ್ಲದೆ, ಐಸೋಲೇಷನ್‌ ವಾರ್ಡ್‌ನಲ್ಲಿ ವೈದ್ಯರು ನರ್ಸ್‌ಗಳ ಮೂಲಕ ಚಿಕಿತ್ಸಾ ವಿಧಾನದ ವಿವರ ಹೇಳಿ ಆರೈಕೆ ಮಾಡಿಸುತ್ತಿದ್ದಾರೆ. ರೋಗಿಗಳ ಬಳಿ ತೆರಳಿ ಕೆಲಸ ನಿರ್ವಹಿಸುತ್ತಿರುವ ನರ್ಸ್‌ಗಳು ಸೋಂಕು ಹರಡುವ ಆತಂಕದಿಂದಲೇ ಕರ್ತವ್ಯನಿರ್ವಹಿಸುತ್ತಿದ್ದಾರೆ ಎಂದು ಹೆಸರೇಳಲಿಚ್ಛಿಸದ ನರ್ಸ್‌ಗಳು ನೋವಿನಿಂದ ಹೇಳಿದ್ದಾರೆ.

ಪ್ರಧಾನಿಯಿಂದ ಮುಖ್ಯಮಂತ್ರಿಗೆ ಸೂಚನೆ
ಸ್ಟಾಫ್ ನರ್ಸ್‌ಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರಿಂದ ಬೇಸತ್ತ ಸಿಬ್ಬಂದಿ ಪ್ರಧಾನಿ ಇ-ಮೇಲ್‌ಗೆ ದೂರು ನೀಡಿದ್ದರು. ಈ ದೂರಿಗೆ ತಕ್ಷಣವೇ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಕ್ರಮ ವಹಿಸುವಂತೆ ಸಿಎಂಗೆ ಸೂಚನೆ ನೀಡಿದ್ದರ ಮೇರೆಗೆ, ಸಿಎಂ ಜಿಲ್ಲಾಧಿಕಾರಿ ಅವರಿಂದ ವರದಿ ಕೇಳಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಿಮ್ಸ್‌ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್‌ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಅಗತ್ಯವಿರುವ ಸುರಕ್ಷತಾ ಕವಚಗಳನ್ನು ಸ್ಟಾಫ್ ನರ್ಸ್‌ಗಳಿಗೆ ನೀಡುವಂತೆ ಸೂಚಿಸಿದ್ದರು. ಇದರಿಂದ ತಕ್ಷಣವೇ ಎಚ್ಚೆತ್ತ ಮಿಮ್ಸ್‌ ನಿರ್ದೇಶಕರು ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ ಹಾಗೂ ಕ್ವಾರಂಟೈನ್‌ನಲ್ಲಿರುವ ನರ್ಸ್‌ಗಳಿಗೆ ಅಗತ್ಯವಿರುವಷ್ಟು ಸುರಕ್ಷತಾ ಕವಚ, ಮಾಸ್ಕ್, ಗ್ಲೌಸ್‌ಗಳನ್ನು ನೀಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next