Advertisement

19ರಿಂದ ರಾಜ್ಯದಲ್ಲಿ ಇ-ಲೋಕ್‌ ಅದಾಲತ್‌

07:44 PM Aug 29, 2020 | Suhan S |

ರಾಯಚೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ದೇಶದಲ್ಲಿ ಮೊದಲ ಬಾರಿಗೆ ಸೆ.19ರಿಂದ ಮೆಗಾ ಇ-ಲೋಕ್‌ ಅದಾಲತ್‌ ಆಯೋಜಿಸುವ ಮೂಲಕ ರಾಜಿ ಸಂಧಾನಗಳ ಮೂಲಕ ವ್ಯಾಜ್ಯ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ| ಅರವಿಂದ ಕುಮಾರ ತಿಳಿಸಿದರು.

Advertisement

ಹೈಕೋರ್ಟ್‌ನಿಂದ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧಿಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಪತ್ರಕರ್ತರೊಂದಿಗೆ ಶುಕ್ರವಾರ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಅವರು ತಿಳಿಸಿದರು. ಸಕಾಲದಲ್ಲಿ ನ್ಯಾಯ ಒದಗಿಸಲು ಈ ರೀತಿ ಕ್ರಮ ಕೈಗೊಳ್ಳಲಾಗಿದೆ. ಮೊದಲಿಗೆ ಮೋಟಾರ ವಾಹನಗಳ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಅರ್ಹರಿಗೆ ನ್ಯಾಯ ಒದಗಿಸಲು ಇ-ಲೋಕ್‌ ಅದಾಲತ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಸಂಬಂಧಿತ ವಿಮಾ ಕಂಪನಿಗಳೊಂದಿಗೆ ನಾಲ್ಕು ಬಾರಿ ಸಭೆ ಹಮ್ಮಿಕೊಳ್ಳಲಾಗಿದೆ. ವಕೀಲರು, ಅವರ ಕಕ್ಷಿದಾರರು ಕಚೇರಿ ಅಥವಾ ಮನೆಯಲ್ಲಿ ಕುಳಿತು ತಮ್ಮ ಮೊಬೈಲ್‌ ಮೂಲಕವೇ ಪ್ರಕರಣಗಳಿಗೆ ಸಂಬಂಧಿ ಸಿದಂತೆ ನ್ಯಾಯ ಪಡೆಯಬಹುದು ಎಂದರು.

ಕೇವಲ ದಾಖಲಾತಿಗಳನ್ನು ಆಪ್‌ಲೋಡ್‌ ಮಾಡಿ ವಿಮಾ ಕಂಪನಿಗೆ ಕಳುಹಿಸಬೇಕು. ಇದನ್ನು ರಾಜ್ಯದ ಪ್ರತಿ ಜಿಲ್ಲೆ, ತಾಲೂಕಿನಲ್ಲೂ ಮಾಡಲಾಗುವುದು ಎಂದರು. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಅಲೋಕಾರಾಧ್ಯ ಮಾತನಾಡಿದರು. ಬಳಿಕ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ನ್ಯಾ| ಮುಸ್ತಫಾ ಹುಸೇನ್‌ ಎಸ್‌.ಎ. ಮಾತನಾಡಿ, ಕೋವಿಡ್‌-19 ಹಿನ್ನೆಲೆಯಲ್ಲಿ ಇ-ಲೋಕ್‌ ಅದಾಲತ್‌ ಜಾರಿ ಮಾಡಲಾಗುತ್ತಿದೆ. ವಾಹನ ಅಪಘಾತ ಪರಿಹಾರ ವ್ಯಾಜಗಳು, ಆಸ್ತಿ ಸಂಬಂಧಿತ ಕೌಟುಂಬಿಕ ಪ್ರಕರಣಗಳು, ಚೆಕ್‌ ಬೌನ್ಸ್‌ ಪ್ರಕರಣಗಳು ಸೇರಿದಂತೆ ರಾಜಿ ಸಂಧಾನದ ವ್ಯಾಪ್ತಿಗೆ ಒಳಪಡುವ ಪ್ರಕರಣಗಳನ್ನು ಅದಾಲತ್‌ ನಲ್ಲಿ ಮೊದಲಿಗೆ ತೆಗೆದುಕೊಳ್ಳಲಾಗುವುದು ಎಂದರು.

ಈ ಕುರಿತು ಸ್ಥಳೀಯ ನ್ಯಾಯಾಧೀಶರೊಂದಿಗೆ ಚರ್ಚಿಸಲಾಗಿದೆ. ಪ್ರಾಯೋಗಿಕ ಆಧಾರದ ಮೇಲೆ ವಾಹನ ಅಪಘಾತದ 12 ಪ್ರಕರಣಗಳನ್ನು  ಇ-ಅದಾಲತ್‌ ಮೂಲಕ ಕೈಗೊಳ್ಳಲಾಯಿತು. ಅದರಲ್ಲಿ ಒಟ್ಟು 10 ಪ್ರಕರಣಗಳು ಇತ್ಯರ್ಥಗೊಂಡಿದ್ದು, 47 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ ಎಂದು ತಿಳಿಸಿದರು. ಸೆ.4ರಿಂದ ಪೂರ್ವಭಾವಿಯಾಗಿ ಇ-ಅದಾಲತ್‌ ನಲ್ಲಿ ಭಾಗವಹಿಸುವ ಆಸಕ್ತರೊಂದಿಗೆ ಚರ್ಚಿಸಿ, ಪ್ರಕರಣಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆಯಲಾಗುವುದು. ವಾಹನ ಅಪಘಾತದ 1100 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಅವುಗಳಲ್ಲಿ ಶೇ.20ರಿಂದ 25 ಪ್ರಕರಣಗಳು ಇ-ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥವಾಗುವ ವಿಶ್ವಾಸ ಇದೆ ಎಂದು ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಸಿ ನಾಡಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next