Advertisement

5 ಕೋಟಿ ವೆಚ್ಚದ ಕಟ್ಟಡದಲ್ಲಿಲ್ಲ ಇ-ಲೈಬ್ರರಿ

04:56 PM Sep 01, 2018 | Team Udayavani |

ಚಿಕ್ಕಬಳ್ಳಾಪುರ: ರಾಜ್ಯಕ್ಕೆ ಮಾದರಿಯಾಗಿ ಚಿಕ್ಕ ಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಮಹಾನಗರಗಳಲ್ಲಿ ನಿರ್ಮಾಣಗೊಳ್ಳುವ ಹೈಟೆಕ್‌ ಕಟ್ಟಡಗಳನ್ನು ನಾಚಿಸುವಂತೆ ತಲೆ ಎತ್ತಿರುವ ಜಿಲ್ಲಾ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಉದ್ಘಾಟನೆಗೊಂಡು ಬರೋಬ್ಬರಿ ಎರಡು ವರ್ಷ ಕಳೆದರೂ ಓದುಗರ ಪಾಲಿಗೆ ಮಾತ್ರ ಇ-ಲೈಬ್ರರಿ ಕನಸು ಇಂದಿಗೂ ನನಸಾಗದೆ ಹೆಸರಿಗೆ
ಮಾತ್ರ ಡಿಜಿಟಲ್‌ ಲೈಬ್ರರಿಯಾಗಿ ಉಳಿದುಕೊಂಡಿದೆ.

Advertisement

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಎಂ. ವೀರಪ್ಪ ಮೊಯ್ಲಿ ಕನಸಿನ ಕೂಸು ಆಗಿರುವ ಗ್ರಂಥಾಲಯವು ಸುಸಜ್ಜಿತವಾದ ಕಟ್ಟಡ ಹೊಂದಿದ್ದರೂ ಗ್ರಂಥಾಲಯ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಕೊರತೆ ಜತೆಗೆ ಇ-ಲೈಬ್ರರಿ ಸೌಲಭ್ಯ ಸಿಗದೇ ಓದುಗರ ಪಾಲಿಗೆ ಡಿಜಿಟಲ್‌ ಲೈಬ್ರರಿ ಬರೀ ಕನಸಿನ ಮಾತಾಗಿದೆ. ಕಳೆದ 2016ರ ಜುಲೈ 2 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸುಸಜ್ಜಿ ಗ್ರಂಥಾಲಯ ವನ್ನು ಲೋಕಾರ್ಪಣೆ ಮಾಡಿದ್ದರು.

ಇಡೀ ಜಗತ್ತನೇ ಬೆರಳ ತುದಿಯಲ್ಲಿ ನೋಡುವ ಇವತ್ತಿನ ಮಾಹಿತಿ, ತಂತ್ರಜ್ಞಾನ ಅವಿಷ್ಕಾರ ಯುಗದಲ್ಲಿ ಜಿಲ್ಲೆಯ ವಿದ್ಯಾರ್ಥಿ-ಯುವ ಜನತೆಗೆ ಅದರಲ್ಲೂ ಪುಸ್ತಕ ಓದುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರ ಗ್ರಂಥಾಲಯ ಆಶಾಕಿರಣವಾಗಿದೆ.

ಮೂರು ಅಂತಸ್ತಿನ ವಿಶಾಲವಾದ ಗ್ರಂಥಾಲಯ ಕಟ್ಟಡದಲ್ಲಿ ಲಕ್ಷಾಂತರ ಪುಸ್ತಕಗಳ ಭಂಡಾರವನನೇ ಶೇಖರಿಸಿ ಇಡುವಷ್ಟು ಸ್ಥಳಾವಕಾಶ ಇದೆ. ಆದರೆ, ಗ್ರಂಥಾಲಯ ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ಇಂದಿಗೂ ಮಹತ್ವಾಕಾಂಕ್ಷಿ ಇ-ಲೈಬ್ರರಿ ಆರಂಭವಾಗದಿರುವುದು ಪುಸ್ತಕ ಪ್ರೇಮಿಗಳಲ್ಲಿ ತೀವ್ರ ನಿರಾಸೆ ಮೂಡಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಕಟ್ಟಡ ನಿರ್ಮಾಣಕ್ಕೆ ತೋರಿದ ಆಸಕ್ತಿಯನ್ನು ಗ್ರಂಥಾ ಲಯದೊಳಗೆ ಇ-ಲೈಬ್ರರಿ ಸೌಲಭ್ಯ ಕಲ್ಪಿಸುವುದರತ್ತ ಗಮನ ಹರಿಸದಿರುವುದು ಆಕ್ರೋಶಕ್ಕೆ ಕಾರಣ ವಾಗಿದೆ.

ಮುದ್ರಣಕ್ಕೂ ಮೊದಲು ಆನ್‌ಲೈನ್‌ನಲ್ಲಿ ಲಭ್ಯ: ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ಲೇಖಕರು, ಬರಹ ಗಾರರು, ಚಿಂತಕರು ಬರೆಯುವ ಮಹತ್ವದ ಕೃತಿಗಳು ಮುದ್ರಣಗೊಂಡು ಮಾರುಕಟ್ಟೆಗೆ ತಲುಪುವ ಮುನ್ನವೇ ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತಿವೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುವ ಅದ ರಲ್ಲೂ ಸರ್ಕಾರಿ ಹಾಗೂ ಖಾಸಗಿ ರಂಗದ ಉದ್ಯೋಗಾಕಾಂಕ್ಷಿಗಳಿಗೆ ಇ-ಲೈಬ್ರರಿ ಸಾಕಷ್ಟು ಮಹತ್ವದಾಗಿದೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಗತ್ಯವುಳ್ಳ ಕಲೆ, ಸಾಹಿತ್ಯ, ಇತಿಹಾಸ ಕುರಿತು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕವಾಗಿ ಪ್ರಸಿದ್ಧ ಲೇಖಕರ ಕೃತಿಗಳ ಅಧ್ಯಯನಕ್ಕೆ ಇ-ಲೈಬ್ರರಿ ಹೆಚ್ಚು ಪ್ರಯೋಜನ ಕಾರಿಯಾದರೂ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಇ-ಲೈಬ್ರರಿ ಇನ್ನೂ ಗಗನ ಕುಸುಮವಾಗಿದೆ. 

Advertisement

ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆ: ಸುಮಾರು 5 ಕೋಟಿಗಿಂತಲೂ ಅಧಿಕ ಅನುದಾನದಲ್ಲಿ ಭವ್ಯವಾದ ಗ್ರಂಥಾಲಯ ಕಟ್ಟಡ ಜಿಲ್ಲೆಗೆ ಸಿಕ್ಕರೂ ಅದರ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ. ಗ್ರಂಥಾಲಯಕ್ಕೆ ಒಟ್ಟು 13 ಸಿಬ್ಬಂದಿ ಮಂಜೂರಾಗಿದ್ದರೂ ಕೆಲಸ ಮಾಡುತ್ತಿರುವ 6- 7 ಮಂದಿ ಮಾತ್ರ. ಇನ್ನೂ 7 ಸಿಬ್ಬಂದಿ ಕೊರತೆ ಇದೆ. ಗ್ರಂಥಾಲಯಕ್ಕೆ ಭದ್ರತಾ ಸಿಬ್ಬಂದಿ ಕೊರತೆ ಇದ್ದರೂ ಗ್ರಂಥಾಲಯದ ಕೆಳಗೆ ಸಾರ್ವಜನಿಕರು ಪ್ರವೇಶಿಸಿ ಓದುಗರಿಗೆ ಕಿರಿಕಿರಿ ಉಂಟು ಮಾಡುತ್ತಾರೆಂಬ ಆರೋಪ ಇದ್ದರೂ ಗ್ರಂಥಾಲಯ ಆವರಣದೊಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸುವಲ್ಲಿ ಅಲ್ಲಿನ ಅಧಿಕಾರಿ, ಸಿಬ್ಬಂದಿ ವಿಫ‌ಲವಾಗಿರುವುದು ಎದ್ದು ಕಾಣುತಿದೆ.

ಒಟ್ಟಾರೆ ಜಿಲ್ಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಯುವ ಜನತೆಗೆ ಜ್ಞಾನ ದೇಗುಲದಂತಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಇಂದಿಗೂ ಇ-ಲೈಬ್ರರಿ ಸೌಲಭ್ಯ ಮರೀಚಿಕೆಯಾಗಿರುವುದು ಜನಪ್ರತಿನಿಧಿಗಳು ಇಚ್ಛಾಶಕ್ತಿ, ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ. 

ವಾರ್ಷಿಕ ತಮ್ಮ ತಮ್ಮ ಕ್ಷೇತ್ರಗಳ ಪ್ರಾದೇಶಾಬಿವೃದ್ಧಿಗೆ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಪಡೆದು ಖರ್ಚು ಮಾಡುವ ಜಿಲ್ಲೆಯ ಜನಪ್ರತಿನಿಧಿಗಳು ಕನಿಷ್ಠ ಓದುಗರಿಗೆ ಅನುಕೂಲವಾಗುವ ರೀತಿ ಯಲ್ಲಿ ಜಿಲ್ಲಾ ಗ್ರಂಥಾಲಯದಲ್ಲಿ ಇ-ಲೈಬ್ರರಿ ಸೌಲಭ್ಯ ಒದಗಿಸಲು ಮುಂದಾಗದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿಸಿದೆ.

ಗ್ರಂಥಾಲಯಕ್ಕೆ ಬರಬೇಕು 2 ಕೋಟಿ ರೂ. ಸೆಸ್‌ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಅದರಲ್ಲೂ ಇ-ಲೈಬ್ರರಿಯಂತಹ ಸೌಲಭ್ಯದಿಂದ ವಂಚಿತವಾಗಿರುವ ಜಿಲ್ಲಾ ಸಾರ್ವಜನಿಕ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲೆಯ ಗ್ರಾಪಂ, ನಗರಸಭೆ, ಪುರಸಭೆಗಳಿಂದ ಬರೋಬ್ಬರಿ 2 ಕೋಟಿ ರೂ.ಗೂ ಮೀರಿ ಹೆಚ್ಚಿನ ಸೆಸ್‌ ಬಾಕಿ ಉಳಿಸಿಕೊಂಡಿವೆಯೆಂದು ತಿಳಿದು ಬಂದಿದೆ. ಪದೇ ಪದೆ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದರೂ ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಅಭಿವೃದ್ಧಿ ಸೆಸ್‌ ಪಾವತಿಸಲು ಗ್ರಾಪಂ ನಗರಸಭೆ, ಪುರಸಭೆಗಳು ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಡಳಿತ ಅಧಿಕಾರಿಗಳು ಎಚ್ಚೆತ್ತಿಕೊಂಡು ಗ್ರಂಥಾಲಯಕ್ಕೆ ಬರಬೇಕಾದ ಸೆಸ್‌ ವಸೂಲಿ ಮಾಡಿಕೊಡಬೇಕಿದೆ.

ನಿತ್ಯ 500 ಓದುಗರು ಗ್ರಂಥಾಲಯಕ್ಕೆ ಭೇಟಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಪತ್ರಿಕೆ, ನಿಯತಕಾಲಿಕೆಗಳು, ಸಾಹಿತ್ಯ, ಸಂಸ್ಕೃತಿ, ಕಲೆ, ಪರಿಸರ, ಆರೋಗ್ಯ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನಕ್ಕಾಗಿ ಪ್ರತಿದಿನ 500 ಕ್ಕೂ ಹೆಚ್ಚು ಓದುಗರು ಭೇಟಿ ನೀಡುತ್ತಾರೆ. ಈ ಪೈಕಿ 300ಕ್ಕೂ ಹೆಚ್ಚು ಮಂದಿ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಿದ್ಧಗೊಳ್ಳಲೆಂದು ಗ್ರಂಥಾಲಯವನ್ನು  ಶ್ರಯಿಸಿಕೊಂಡಿದ್ದಾರೆ. ಆದರೆ, ಸ್ಪರ್ಧಾತ್ಮ ಪರೀಕ್ಷೆಗೆ ಸಿದ್ಧಗೊಳ್ಳುವ ಉದ್ಯೋಗಾಕಾಂಕ್ಷಿಗಳಿಗೆ ಇ-ಲೈಬ್ರರಿ ಇಲ್ಲದೇ ಸಾಕಷ್ಟು ತೊಂದರೆ ಆಗಿದೆ. ಇ-ಲೈಬ್ರರಿ ಅನುಷ್ಠಾನಕ್ಕಾಗಿಯೇ ಸಾರ್ವಜನಿಕ ಗ್ರಂಥಾಲಯ ಕಟ್ಟಡದಲ್ಲಿ ಬರೋಬ್ಬರಿ 50 ಆಸನಗಳನ್ನು ಅಳವಡಿಸುವಷ್ಟು ಸುಸಜ್ಜಿತ ಕೊಠಡಿಗಳನ್ನು ಸಹ ನಿರ್ಮಿಲಾಗಿದ್ದರೂ ಉಪಯೋಗವಾಗುತ್ತಿಲ್ಲ

ಇ-ಲೈಬ್ರರಿಗೆ ಪ್ರಸ್ತಾವನೆ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಇ-ಲೈಬ್ರರಿ ಗ್ರಂಥಾಲಯಕ್ಕೆ ಅನುಕೂಲವಾಗುವಂತೆ 50
ಆಸನಗಳ ವ್ಯವಸ್ಥೆಗೆ ಬೇಕಾದ ಗಣಕಯಂತ್ರಗಳು, ಪೀಠೊಪಕರಣಗಳನ್ನು ಒದಗಿಸುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಈಗಾಗಲೇ ಇಲಾಖೆ ನಿರ್ದೇಶಕರಿಗೆ ಸಲ್ಲಿಸಿದ್ದೇವೆ. ಸರ್ಕಾರ ಈ ವರ್ಷದೊಳಗೆ ಮಂಜೂರಾತಿ ನೀಡುವ ನಿರೀಕ್ಷೆ ಇದೆ. ಇಲಾಖೆ ಅನುದಾನ ಬಿಡುಗಡೆ ಮಾಡಿದ ತಕ್ಷಣ ಓದಿಗೆ ಇ-ಲೈಬ್ರರಿ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾ ಮುಖ್ಯ ಗ್ರಂಥಪಾಲಕ ಶಂಕರಪ್ಪ ತಿಳಿಸಿದ್ದಾರೆ.

 ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next