ಅಂಕೋಲಾ: ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಹೋಗಿ ತಮ್ಮ ಪಡಿತರ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರ ಬೆರಳಚ್ಚು ನೀಡಿ ಇ-ಕೆವೈಸಿ ಮಾಡಿಸಲು ರೇಷನ್ ಅಂಗಡಿ ಎದುರು ಜಮಾಯಿಸುತ್ತಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಆದೇಶದನ್ವಯ ಇ-ಕೆವೈಸಿ ಅಪ್‌ಲೋಡ್ ಕಾರ್ಯಗಳು ತಾಲೂಕಿನ ಎಲ್ಲಾ ರೇಷನ್ ಅಂಗಡಿಗಳಲ್ಲಿ ಆರಂಭವಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ನಿಯಮದಂತೆ ಅಂತ್ರ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್ ಮೂಲಕ ರೇಷನ್ ಅಂಗಡಿಯಲ್ಲಿ ಆಹಾರಧಾನ್ಯ ಪಡೆಯುತ್ತಿರುವವರು ಇ-ಕೆವೈಸಿ ಅನ್ನು ಜೂ.1 ರಿಂದ ಜು.31ರ ಒಳಗಾಗಿ ತಮ್ಮ ಕುಟುಂಬ ಸದಸ್ಯರ ಆನ್‌ಲೈನ್‌ನಲ್ಲಿ ಅಪಲೋಡ್ ಮಾಡಬೇಕಾಗಿದೆ. ಇದರ ಜೊತೆಯಲ್ಲಿಯೆ ಕಾರ್ಡ್‌ನಲ್ಲಿ ಬದಲಾವಣೆ ತಂದಿದ್ದು ಮನೆಯ ಯಜಮಾನಿ ಮುಖ್ಯಸ್ಥೆಯಾಗಿ ಮಾಡಲಾಗುತ್ತಿದೆ.
ಪರ ಊರಿನಲ್ಲಿರುವ ಮತ್ತು ಎರಡೆರಡು ರೇಷನ್ ಕಾರ್ಡ್ ಹೊಂದಿರುವವರು, ಮೃತಪಟ್ಟವರು ಕಾರ್ಡ್‌ನಲ್ಲಿ ಹೆಸರು ಉಳಿದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಅಂತಹದನ್ನು ಹೊರಹಾಕಲು ಮತ್ತು ಅಕ್ರಮವನ್ನು ತಪ್ಪಿಸಲು ಬೆರಳಚ್ಚು ಪಡೆಯಲಾಗುತ್ತಿದೆ. ಕಾರ್ಡ್‌ನಲ್ಲಿ ಹೆಸರಿರುವ ಎಲ್ಲರೂ ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ.
ತಾಲೂಕಿನಲ್ಲಿ ಒಟ್ಟೂ 35 ರೇಷನ್ ಅಂಗಡಿಯಲ್ಲಿ ಇ-ಕೆವೈಸಿ ಆರಂಭವಾಗಿದೆ. 28161 ಪಡಿತರ ಕಾರ್ಡ್ ತಾಲೂಕಿನಲ್ಲಿದ್ದು ಅದರಲ್ಲಿ ಅಂತ್ರ್ಯೋದಯ 944, ಬಿಪಿಎಲ್ 25077 ಮತ್ತು ಎಪಿಎಲ್ 2140 ಕಾರ್ಡುದಾರರು ಇದ್ದಾರೆ.
ಸರ್ವರ್ ಸಮಸ್ಯೆ: ಜೂ.1 ರಿಂದ ಇ-ಕೆವೈಸಿ ಕಾರ್ಯ ತಾಲೂಕಿನ ಎಲ್ಲಾ ರೇಷನ್ ಅಂಗಡಿಗಳಲ್ಲಿ ಆರಂಭವಾಗಿದ್ದು ಎಲ್ಲೆಡೆ ಸರ್ವರ್ ತೊಂದರೆ ಕೊಡುತ್ತಿರುವ ಕಾರಣ ಕಾರ್ಡುದಾರರ ಇ-ಕೆವೈಸಿ ಸರಿಯಾಗಿ ಆಗುತ್ತಿಲ್ಲ. ಇದರಿಂದ ಕಾರ್ಡುದಾರರು ಪ್ರತಿನಿತ್ಯ ತಮ್ಮ ಕುಟುಂಬವನ್ನು ಕರೆದುಕೊಂಡು ರೇಷನ್ ಅಂಗಡಿಗೆ ಅಲೆಯುತ್ತಿರುವುದು ಕಂಡುಬರುತ್ತಿದೆ. ನಿಗದಿತ ಅವಧಿಯೊಳಗೆ ಅಪ್‌ಲೋಡ್ ಮಾಡದಿದ್ದಲ್ಲಿ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ವಿತರಣೆ ಸ್ಥಗಿತಗೊಳ್ಳುತ್ತದೆ.
ಅಂಗಡಿ ಮಾಲಕರಿಗೆ ತರಬೇತಿ: ಇ-ಕೆವೈಸಿ ಮಾಡುವ ಕುರಿತು ತಾಲೂಕಿನ 35 ರೇಷನ್ ಅಂಗಡಿ ಕಂಪ್ಯೂಟರ್ ಆಪೇಟರ್‌ಗಳಿಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ತರಬೇತಿ ನೀಡಲಾಗಿದೆ. ಕಾರ್ಡುದಾರರಿಗೆ ಯಾವುದೇ ತೊಂದರೆ ಆಗದಂತೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವರಿಗೆ ಸೂಚಿಸಲಾಗಿದ್ದು ಅಂಗಡಿಯವರು ಕಾರ್ಡುದಾರರಿಗೆ ಮಾಹಿತಿ ನೀಡಿ ಕಾರ್ಯ ಆರಂಭಿಸಿದ್ದಾರೆ.