Advertisement

ಇ-ಕೆವೈಸಿ: ಸುಳ್ಯದಲ್ಲಿ ಶೇ. 49ರಷ್ಟು ಪ್ರಗತಿ

10:46 PM Jan 09, 2020 | mahesh |

ಸುಳ್ಯ : ಆಹಾರ ಇಲಾಖೆ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಅರ್ಹ ಗ್ರಾಹಕರನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ಇ-ಕೆವೈಸಿ ಪ್ರಕ್ರಿಯೆ ತಾಲೂಕಿನಲ್ಲಿ ಶೇ. 49ರಷ್ಟು ಪ್ರಗತಿ ಕಂಡಿದೆ. ಮೂರು ದಿನಗಳಿಂದ ಸರ್ವರ್‌ ಕೈ ಕೊಟ್ಟಿರುವ ಕಾರಣ ಜ. 10ರಿಂದ ಹೆಬ್ಬೆಟ್ಟು ಗುರುತು ಪಡೆಯುವ ಪ್ರಕ್ರಿಯೆ ಪುನರಾರಂಭಗೊಳ್ಳಲಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. ಸರ್ವರ್‌ ವಿಳಂಬ ಕಾರಣಕ್ಕೆ ತಾಲೂಕು ಹಾಗೂ ಪಡಿತರ ಅಂಗಡಿಗಳ ಮುಂಭಾಗ ಹಲವರು ಸರತಿನಲ್ಲಿ ಕಾದು ಕುಳಿತುಕೊಳ್ಳುವ ಚಿತ್ರಣ ಸುಳ್ಯದಲ್ಲಿಯೂ ಕಂಡುಬರುತ್ತಿದೆ.

Advertisement

ಏನಿದು ಕೆವೈಸಿ?
ಪಡಿತರ ಸಾಮಗ್ರಿಯನ್ನು ಅರ್ಹರಿಗೆ ನೀಡುವ ನಿಟ್ಟಿನಲ್ಲಿ ಕೆವೈಸಿ ಜಾರಿಗೊಳಿಸಲಾಗಿದೆ. ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರು ತೆಗೆಯದಿರುವುದು ಸಹಿತ ಹತ್ತಾರು ಸಮಸ್ಯೆಗಳು ಇರುವ ಕಾರಣ ಪಡಿತರ ಸಾಮಗ್ರಿ ಅರ್ಹರಲ್ಲದವರಿಗೂ . ಸಂದಾಯ ಆಗುತ್ತಿತ್ತು. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಪ್ರಕಾರ ಕೆವೈಸಿ (ನೋ ಯುವರ್‌ ಕಸ್ಟಮರ್‌, ನಿಮ್ಮ ಗ್ರಾಹಕರನ್ನು ಅರಿಯಿರಿ) ಆರಂಭಿಸಿದೆ. ಜೂನ್‌ನಲ್ಲಿ ಆರಂಭಿಸಿ ಈ ವರ್ಷ ಜನವರಿ ತಿಂಗಳಿಗೆ ಕೊನೆ ದಿನಾಂಕದ ಗಡುವು ನೀಡಲಾಗಿತ್ತು. ಜ. 31ರೊಳಗೆ ಪೂರ್ಣಪ್ರಮಾಣದಲ್ಲಿ ಅಪ್‌ಡೇಟ್‌ ಮಾಡ ಬೇಕಿತ್ತು. ಅದು ಸಾಧ್ಯವಾಗದ ಕಾರಣ ಮಾ. 31ರ ವರೆಗೆ ಅವಧಿಯನ್ನು ವಿಸ್ತರಿಸಿ ಸರಕಾರ ಆದೇಶಿಸಿದೆ.

ಉಳಿದವರು ಕಾಯಬೇಕಿಲ್ಲ
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಗ್ರಾಹಕರು ಬೆರಳಚ್ಚು ನೀಡಬೇಕು. ಆಹಾರ ಶಾಖೆಯಲ್ಲಷ್ಟೇ ಇದ್ದ ಸೌಲಭ್ಯವನ್ನು ಈಗ ನ್ಯಾಯಬೆಲೆ ಅಂಗಡಿಗಳಲ್ಲೂ ಅಳವಡಿಸಲಾಗಿದೆ. ಇದರ ಪ್ರಕಾರ ಸೇವಾ ಸಿಂಧು ಕಚೇರಿಯಲ್ಲಿ ಕುಟುಂಬದ ಓರ್ವ ಸದಸ್ಯ ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿ ಬೆರಳಚ್ಚು ನೀಡಿದಾಗ ಉಳಿದ ಸದಸ್ಯರ ಮೊಬೈಲ್‌ ನಂಬರ್‌ ಆಧಾರ್‌ ಕಾರ್ಡ್‌ ನಲ್ಲಿ ದಾಖಲಾಗಿದ್ದರೆ ಅವರಿಗೆ ಒಟಿಪಿ ಸಂಖ್ಯೆ ಸಂದೇಶ ಬರುತ್ತದೆ. ಅದನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿದರೆ ಕೆವೈಸಿ ಅಪ್‌ಡೇಟ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಹಾಗಾಗಿ ಎಲ್ಲರೂ ಏಕಕಾಲದಲ್ಲಿ ನ್ಯಾಯಬೆಲೆ ಅಂಗಡಿ ಅಥವಾ ಆಹಾರ ಇಲಾಖೆಗೆ ಬರಬೇಕಿಲ್ಲ.

ಸರ್ವರ್‌ ಸಮಸ್ಯೆ
ತಾಲೂಕಿನ ಹಲವೆಡೆ ನೆಟ್‌ವರ್ಕ್‌ ಸಮಸ್ಯೆಯಿಂದ, ಸರ್ವರ್‌ ಕೈಕೊಟ್ಟ ಕಾರಣ ಅಪ್‌ಡೇಟ್‌ ಕೂಡ ಸವಾಲಾಗಿದೆ. ನೆಟ್ ವರ್ಕ್ ಇಲ್ಲದ ಕಡೆಗಳಲ್ಲಿ ಆಯಾ ಸಿಎ ಬ್ಯಾಂಕ್‌ ಅಥವಾ ತಾಲೂಕು ಕಚೇರಿ ಆಹಾರ ಇಲಾಖೆಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಅಂತಿಮ ದಿನಾಂಕ ವಿಸ್ತರಿಸಿದ ಕಾರಣ ಗ್ರಾಹಕರಿಗೂ ಆತಂಕ ದೂರವಾಗಿದೆ.

ಅಪ್‌ಡೇಟ್‌ಗೆ ಪ್ರಭಾವ!
ಟೋಕನ್‌ ನಿಯಮದಲ್ಲಿ ಕೆವೈಸಿ ನೋಂದಣಿಗೆ ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಅಪ್‌ಡೇಟ್‌ ಮಾಡಿಸಲು ಯಾವ ದಿನ ಬರಬೇಕು ಎಂದು ಅಧಿಕಾರಿಗಳು ಗುರುತಿಸಿ ಟೋಕನ್‌ ನೀಡುತ್ತಿದ್ದಾರೆ. ಆದರೆ ಕೆಲವೆಡೆ ರಾಜ ಕೀಯ ಪ್ರಭಾವ ಬಳಸಿ ಟೋಕನ್‌ ಪಡೆ ದವರಿಗಿಂತ ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳುತ್ತಿರುವ ದೂರುಗಳಿವೆ. ಇದರಿಂದ ನಿಗದಿತ ದಿನ ಬರುವ ಗ್ರಾಹಕರಿಗೆ ತೊಂದರೆ ಉಂಟಾಗಿದೆ.

Advertisement

ಶೇ. 49 ಪ್ರಗತಿ
ತಾಲೂಕಿನ 59 ಪಡಿತರ ಅಂಗಡಿಗಳ ವ್ಯಾಪ್ತಿಯಲ್ಲಿ ಶೇ. 49ರಷ್ಟು ಫಲಾನುಭವಿಗಳ ಕೆವೈಸಿ ಅಪ್‌ಡ್‌ಟ್‌ ಪೂರ್ಣಗೊಂಡಿದೆ. ಉಳಿದ ಅಪ್‌ಡೇಟ್‌ ಜ. 10ರಿಂದ ಆರಂಭಗೊಳ್ಳಲಿದೆ. ಸುಮಾರು 15ಕ್ಕೂ ಅಧಿಕ ಪಡಿತರ ಅಂಗಡಿಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇರುವುದರಿಂದ ಹತ್ತಿರದ ಸಿಎ ಬ್ಯಾಂಕ್‌ ಅಥವಾ ಆಹಾರ ಇಲಾಖೆಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಅಪ್‌ಡೇಟ್‌ ಪ್ರಗತಿ
ತಾಲೂಕಿನಲ್ಲಿ ಈ ತನಕ ಶೇ. 49ರಷ್ಟು ಅಪ್‌ಡೇಟ್‌ ಪೂರ್ಣಗೊಂಡಿದೆ. ಜ. 10ರಿಂದ ಮತ್ತೆ ಅಪ್‌ಡೇಟ್‌ ಪ್ರಕ್ರಿಯೆ ನಡೆಯಲಿದೆ.
– ವಸಂತಿ , ಆಹಾರ ನಿರೀಕ್ಷಕಿ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next