ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರೋಬ್ಬರಿ 18,731 ಮಂದಿ ರೈತರು ಕೇಂದ್ರ ಸರ್ಕಾರ ನೀಡುವ ಮಹತ್ವಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಲಾಭ ದೊರೆಯದೇ ದೂರ ಉಳಿದಿದ್ದಾರೆ. ಆದರೆ 18,731 ಮಂದಿ ರೈತರು ಜಿಲ್ಲೆಯಲ್ಲಿ ಇದ್ದಾರೆಯೆ ಇಲ್ಲವೇ ಎನ್ನುವ ನಿಖರ ಮಾಹಿತಿಗಾಗಿ ಕೃಷಿ ಇಲಾಖೆ ರೈತರ ಹುಡುಕಾಟಕ್ಕೆ ಮುಂದಾಗಿದೆ.
ಹೌದು, ಜಿಲ್ಲೆಯಲ್ಲಿ ಒಟ್ಟಾರೆ ಬರೋಬ್ಬರಿ 1,27,274 ಮಂದಿ ರೈತರು ನೋಂದಣಿ ಆಗಿದ್ದಾರೆ. ಆ ಪೈಕಿ 1,14,764 ಮಂದಿ ರೈತರು ಮಾತ್ರ ಪ್ರತಿ ಕಂತಿನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಪಡೆಯುತ್ತಿದ್ದಾರೆ. ಆದರೆ, ಕೃಷಿ ಇಲಾಖೆ ಮಾಡಿರುವ ಪಟ್ಟಿಯಲ್ಲಿಯೆ ಸುಮಾರು 18 ಸಾವಿರಕ್ಕೂ ಹೆಚ್ಚು ಮಂದಿ ಪಿಎಂ ಕಿಸಾನ್ ನಿಧಿಯಿಂದ ವಂಚಿರಾಗುತ್ತಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಗೊಮ್ಮೆ ವರ್ಷದಲ್ಲಿ 3 ಕಂತುಗಳಲ್ಲಿ ತಲಾ 2,000 ಸಾವಿರ ರೂ. ನಂತೆ ಒಟ್ಟು 6 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಈಗಾಗಲೇ ಜಿಲ್ಲೆಗೆ 13ನೇ ಕಂತು ಬಿಡುಗಡೆ ಆಗಿದೆ. ಲಕ್ಷಾಂತರ ರೈತರಿಗೆ ಯೋಜನೆ ಲಾಭ ಸಿಕ್ಕಿದೆ. ಆದರೆ, ಇನ್ನೂ 18 ಸಾವಿರಕ್ಕೂ ಹೆಚ್ಚು ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ ಸಿಗದೇ ಇರುವುದು ಕೃಷಿ ಇಲಾಖೆ ಪಟ್ಟಿಯಿಂದ ಬಹಿರಂಗವಾಗಿದೆ.
ಮನೆ ಮನೆಗೂ ಕೃಷಿ ಇಲಾಖೆ ಸಿಬ್ಬಂದಿ ಭೇಟಿ: ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಿಗದ ಕಾರಣ ಯೋಜನೆಯಿಂದ ವಂಚಿತರಾಗುತ್ತಿರುವ ರೈತರ ಪಟ್ಟಿ ಗ್ರಾಮವಾರ ಸಿದ್ದಪಡಿಸಿಕೊಂಡಿರುವ ಕೃಷಿ ಇಲಾಖೆ ಸಿಬ್ಬಂದಿ, ರೈತರ ಹುಡುಕಾಟದಲ್ಲಿ ತೊಡಗಿದೆ.
ಆಧಾರ್ ಆಪ್‌ಡೇಟ್ ಆಗದ ರೈತರಿಗೆ ಅರಿವು ಮೂಡಿ ಸುವುದರ ಜತೆಗೆ ಇ-ಕೆ.ವೈಸಿ ಬಾಕಿ ಇದ್ದರೆ ತಕ್ಷಣ ಮಾಡಿಸುವಂತೆ ಸೂಚಿಸಲಾಗಿದೆ. ಇನ್ನೂ ಕೆಲ ರೈತರು ಕೃಷಿ ಭೂಮಿ ಮಾರಾಟ ಮಾಡಿ ಬೇರೆ ಊರುಗಳಿಗೆ ತೆರಳಿರುವುದು ಕಂಡು ಬಂದಿದ್ದರೆ ಮತ್ತೆ ಕೆಲ ರೈತರು ಮರಣ ಹೊಂದಿರುವುದು ಕೃಷಿ ಅಧಿಕಾರಿಗಳ ಪರಿಶೀಲನೆ ವೇಳೆ ಕಂಡು ಬಂದಿದೆ.
ಕೆಲ ವೊಂದು ರೈತರು ತಮ್ಮ ಬ್ಯಾಂಕ್ ಖಾತೆಗೆ ಇನ್ನೂ ಆಧಾರ್ ಲಿಂಕ್ ಮಾಡಿಲ್ಲ. ಕೆಲವು ರೈತರು ಮರಣ ಹೊಂದಿದ್ದು ಅವರ ಜಮೀನು ಪೌತೆ ಖಾತೆ ಆಗಿಲ್ಲ. ಇನ್ನೂ ಕೆಲವರು ಇ-ಕೆವೈಸಿ ಮಾಡಿಸದ ಕಾರಣ ಕಿಸಾನ್ ಸಮ್ಮಾನ್ ನಿಧಿ ಬರುತ್ತಿಲ್ಲ. ಗ್ರಾಮವಾರು ಪಟ್ಟಿ ಹಿಡಿದುಕೊಂಡು ಕೃಷಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶೇ.85 ರಷ್ಟು ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಬರುತ್ತಿದೆ.
-ಜಾವೀದಾ ನಸೀಮಾ ಖಾನಂ, ಜಂಟಿ ಕೃಷಿ ನಿರ್ದೇಶಕರು.
-ಕಾಗತಿ ನಾಗರಾಜಪ್ಪ