ಹುಬ್ಬಳ್ಳಿ: ಆದಾಯ, ಜಾತಿ, ರಹವಾಸಿ ಪ್ರಮಾಣ ಪತ್ರ ಪಡೆಯಲು ಇನ್ನು ಸರತಿಯಲ್ಲಿ ನಿಂತು ದಿನಗಟ್ಟಲೆ ಕಾಯುವ ಸ್ಥಿತಿ ಇಲ್ಲ. ಅರ್ಜಿ ಸಲ್ಲಿಸಿದ ನಂತರ 7 ದಿನ, 21 ದಿನ ಕಾಯಬೇಕಿಲ್ಲ. ಅರ್ಜಿ ಸಲ್ಲಿಸಿದ ಕ್ಷಣಾರ್ಧದಲ್ಲಿ ಈ ಎಲ್ಲ ದಾಖಲೆಗಳು ಕೈಗೆ ಸಿಗಲಿವೆ.
ಸಾರ್ವಜನಿಕರಿಗೆ ಶಿಕ್ಷಣ, ಉದ್ಯೋಗ, ಸರಕಾರದ ಯೋಜನೆಗಳನ್ನು ಪಡೆಯಲು ಬೇಕಾದ ಜಾತಿ, ಆದಾಯ ಹಾಗೂ ರಹವಾಸಿ ಪ್ರಮಾಣ ಪತ್ರಗಳಿಗೆ ಹಿಂದೆ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅದು ಬರುವವರೆಗೆ ಕಾಯುವ ಸ್ಥಿತಿ ಇತ್ತು. ಆದರೆ, ಸರಕಾರದಿಂದ ಜಾರಿ ಮಾಡಿರುವ “ಇ-ಕ್ಷಣ’ ಯೋಜನೆಯಿಂದಾಗಿ ಕ್ಷಣಾರ್ಧದಲ್ಲಿ ಫಲಾನುಭವಿಗಳ ಕೈಗೆ ಸಿಗಲಿದೆ.
ಗ್ರಾಮೀಣ ಶೇ. 100 ಸಾಧನೆ: ಇ-ಕ್ಷಣ ಜಾರಿ ಮಾಡುವ ಉದ್ದೇಶದಿಂದ ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ಹಾಗೂ ಶಹರ ತಾಲೂಕಿನಡಿ ರಹವಾಸಿಗಳ ಎಲ್ಲ ದಾಖಲಾತಿಗಳನ್ನು ಕಲೆ ಹಾಕಲಾಗುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ ಹುಬ್ಬಳ್ಳಿ ಗ್ರಾಮೀಣ ಭಾಗದ 46 ಹಳ್ಳಿಗಳ 32,757 ಕುಟುಂಬಗಳ ದಾಖಲಾತಿ ಕಲೆ ಹಾಕಬೇಕಾಗಿದ್ದು, ಮೊದಲ ಹಂತದಲ್ಲಿ (16-11-2017ರಲ್ಲಿ) ಶೇ. 86.61ರಷ್ಟು ಅಂದರೆ 29,323 ಕುಟುಂಬಗಳ ದಾಖಲಾತಿ ಕಲೆ ಹಾಕಲಾಗಿದೆ. ಎರಡನೇ ಹಂತದಲ್ಲಿ (31-07-2019ರಲ್ಲಿ) ಇನ್ನುಳಿದ ಎಲ್ಲ ಕುಟುಂಬಗಳ ದಾಖಲಾತಿ ಕಲೆ ಹಾಕುವ ಮೂಲಕ ಹುಬ್ಬಳ್ಳಿ ಗ್ರಾಮೀಣ ತಾಲೂಕು ಇ-ಕ್ಷಣ ಯೋಜನೆಗೆ ಶೇ.100 ದಾಖಲಾತಿ ಕಲೆ ಹಾಕಿದೆ. ಗ್ರಾಮೀಣ ಭಾಗದ ಜನರಿಗೆ ಕ್ಷಣಾರ್ಧದಲ್ಲಿ ದಾಖಲಾತಿ ವಿತರಣೆಗೆ ಕ್ರಮ ತೆಗೆದುಕೊಂಡಿದೆ.
ಶಹರ ದಾಖಲಾತಿ ಪ್ರಗತಿಯಲ್ಲಿ: ಕಳೆದ ಎರಡು-ಮೂರು ತಿಂಗಳಿಂದ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಲಾಗಿದ್ದು, ಈಗಾಗಲೇ ಸುಮಾರು 38 ಸಾವಿರ ಜನರ ಮಾಹಿತಿ ಸಂಗ್ರಹ ಮಾಡಲಾಗಿದೆ. ಶಹರ ಮಟ್ಟದಲ್ಲಿ ಪಡಿತರ ಚೀಟಿ ಆಧಾರದ ಮೇಲೆ ಸುಮಾರು 4,83,299 ಜನ ಇದ್ದು, ಇವರ ಮಾಹಿತಿ ಕಲೆ ಹಾಕುವ ಕಾರ್ಯ ನಡೆಯುತ್ತಿದೆ. ಶಹರದಲ್ಲಿರುವ 67 ವಾರ್ಡ್‌ಗಳಲ್ಲಿ ಈಗಾಗಲೇ ದಾಖಲಾತಿ ಕಲೆ ಹಾಕುವ ಕೆಲಸ ನಡೆಯುತ್ತಿದ್ದು, ಅದಕ್ಕಾಗಿ 36 ಗ್ರಾಮಲೆಕ್ಕಾಧಿಕಾರಿ ಹಾಗೂ 36 ಜನ ಬಿಲ್ ಕಲೆಕ್ಟರ್ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರತಿ ಕುಟುಂಬದ ಮಾಹಿತಿ: ಇ-ಕ್ಷಣ ಯೋಜನೆಯಡಿ ಆದಾಯ, ಜಾತಿ, ರಹವಾಸಿ ದಾಖಲೆಗಳನ್ನು ಪಡೆಯಲು ಈಗಾಗಲೇ ಕುಟುಂಬಗಳ ದಾಖಲಾತಿ ಕಲೆ ಹಾಕಿದ್ದು, ಬೇಕಾದವರು ದಾಖಲಾತಿಗಳನ್ನು ಪಡೆಯಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಯಾರ ಹೆಸರ ಮೇಲೆ ದಾಖಲಾತಿಗಳು ಬೇಕಾಗಿರುವುದೋ ಅವರ ಹೆಸರ ಮೇಲೆ ಕ್ಲಿಕ್ ಮಾಡಿದಾಗ ದಾಖಲಾತಿಗಳು ಬರುತ್ತವೆ.
ಪಡಿತರ ಚೀಟಿ ಸಮಸ್ಯೆ: ಗ್ರಾಮೀಣ ಭಾಗದಲ್ಲಿ ಕೆಲವೊಂದು ಕಡೆ ಪಡಿತರ ಚೀಟಿ ಸಮಸ್ಯೆಗಳಿದ್ದು, ಕೆಲವೊಂದು ದಾಖಲಾತಿಗಳು ಕಲೆ ಹಾಕಲುಸಾಧ್ಯವಾಗಿಲ್ಲ. ನಂತರದ ದಿನಗಳಲ್ಲಿ ಅವುಗಳನ್ನು ಕಲೆ ಹಾಕುವ ಮೂಲಕ ಇ-ಕ್ಷಣಕ್ಕೆ ಜೋಡಣೆ ಮಾಡಲಾಗುತ್ತದೆ.
ಸಿಎಎ-ಎನ್‌ಆರ್‌ಸಿಯಿಂದ ಹಿನ್ನಡೆ : ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಎನ್‌ಆರ್‌ಸಿ ಜಾರಿ ಕುರಿತು ಎದ್ದಿರುವ ಗೊಂದಲದಿಂದ ಮಾಹಿತಿ ಕಲೆ ಹಾಕುವವರಿಗೆ ಹಿನ್ನಡೆಯಾಗುತ್ತಿದೆ. ಇ-ಕ್ಷಣ ಮಾಹಿತಿಗೆ ಬೇಕಾದ ದಾಖಲಾತಿಗಳು ಹಾಗೂ ಮಾಹಿತಿ ಪಡೆಯಲು ಸಿಬ್ಬಂದಿ ಮನೆಗಳಿಗೆ ತೆರಳಿದರೆ ಸಾರ್ವಜನಿಕರು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
25 ರೂ.ಗೆ ದಾಖಲಾತಿ : ಇ-ಕ್ಷಣ ಯೋಜನೆಯಡಿ ಆಲ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿಕೊಂಡು ದಾಖಲಾತಿಗಳನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದು. ಇ-ಕ್ಷಣ ಯೋಜನೆಯಡಿ ಆರಂಭದಲ್ಲಿ 15 ರೂ.ಗೆ ದಾಖಲಾತಿಗಳು ಸಿಗುತ್ತಿದ್ದವು, ಆದರೆ ಇದೀಗ ದರವನ್ನು 25 ರೂ.ಗೆ ಏರಿಕೆ ಮಾಡಲಾಗಿದೆ.
ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಇ-ಕ್ಷಣ ಮಾಹಿತಿ ಎಲ್ಲವೂ ಸಂಗ್ರಹ ಮಾಡಲಾಗಿದ್ದು, ಶೇ.100 ಗುರಿ ಸಾಧಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಕ್ಷಣಾರ್ಧದಲ್ಲಿ ದಾಖಲಾತಿಗಳನ್ನು ನೀಡಲು ಅನುಕೂಲವಾಗಿದೆ.
–ಪ್ರಕಾಶ ನಾಶಿ, ಗ್ರಾಮೀಣ ತಹಶೀಲ್ದಾರ್
-ಬಸವರಾಜ ಹೂಗಾರ