ಬೆಂಗಳೂರು: ಪಾರದರ್ಶಕತೆ ಹಾಗೂ ಯೋಜನೆಗಳಿಗೆ ವೇಗ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ- ಆಡಳಿತ ಜಾರಿಗೊಳಿಸಲು ಮುಂದಾಗಿದ್ದು, ಬರುವ ತಿಂಗಳಿನಿಂದಲೇ ಎಲ್ಲ ಜಿಲ್ಲಾ ಮತ್ತು ತಾಲೂಕು ಕಚೇರಿಗಳು ಪೇಪರ್‌ಮುಕ್ತವಾಗಲಿವೆ.
ಭಾಗ್ಯಲಕ್ಷ್ಮೀ, ಕ್ಷೀರಭಾಗ್ಯ, ಅಂಗನ ವಾಡಿ, ಸಖೀ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಉಜ್ವಲ, ಬೇಟಿ ಬಚಾವೂ ಬೇಟಿ ಪಡಾವೋ ಸಹಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಹಲವಾರು ಯೋಜನೆಗಳಿದ್ದು, ಆಡಳಿತ ಯಂತ್ರಕ್ಕೆ ವೇಗ ನೀಡಲು ಇಲಾಖೆ ಸಂಪೂರ್ಣ ಇ-ಆಡಳಿತಕ್ಕೆ ಒತ್ತು ನೀಡಿದೆ. ಈಗಾಗಲೇ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಜಾರಿ ಯಾಗಿದ್ದು, ಜನವರಿ ವೇಳೆಗೆ ಜಿಲ್ಲಾ ಮಟ್ಟದ ಎಲ್ಲ ಕಚೇರಿಗಳಲ್ಲೂ ಆರಂಭವಾಗಲಿದೆ.
ಕಡತಗಳು ಕಳೆದುಹೋಗುವುದು, ಯೋಜನೆ ನನೆಗುದಿ, ನಾಗರಿಕ ಕೇಂದ್ರಿತ ಸೇವೆಗಳು ಮತ್ತು ಮಾಹಿತಿ ಪೂರೈಕೆ ಸೇವೆಗಳಲ್ಲಿ ವಿಳಂಬ ಧೋರಣೆ ತಪ್ಪಿಸಲು ಇದು ಅನುಕೂಲವಾಗಲಿದೆ. ದಿಲ್ಲಿಯ ಎನ್‌ಐಸಿ (ನ್ಯಾಶನಲ್ ಇನ್ಫೋರ್ಮಾಟಿಕ್ಸ್ ಸೆಂಟರ್) ಯಿಂದ ಅಭಿವೃದ್ಧಿ ಪಡಿಸಿದ್ದ ತಂತ್ರಾಂಶ ಮೂಲಕ ಇಲಾಖೆಯ ಎಲ್ಲ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯಲಿದ್ದು, ಕೆಲಸದಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ.
ರಾಜ್ಯದ 225 ತಾಲೂಕುಗಳಲ್ಲಿ ಒಟ್ಟು 62,580 ಅಂಗನವಾಡಿ ಕೇಂದ್ರಗಳು ಹಾಗೂ 3,331 ಮಿನಿ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆಡಳಿತ ವೆಚ್ಚದಡಿ ಅಂಗನವಾಡಿ ಕೇಂದ್ರಕ್ಕೆ ಮೆಡಿಸಿನ್ ಕಿಟ್‌ಗಳ ವಿತರಣೆ, ಪೂರಕ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಸೃಷ್ಟಿ, ಬಾಲಸ್ನೇಹಿ, ಮಾತೃಪೂರ್ಣ, ಅಂಗನವಾಡಿ ಕಟ್ಟಡಗಳು, ಕಿಶೋರಿ ಶಕ್ತಿ, ರಾಷ್ಟ್ರೀಯ ಶಿಶು ಪಾಲನಾ ಯೋಜನೆಗಳು, ಜೆಜೆ ಕಾಯ್ದೆ, ಪೋಕ್ಸೋ, ಮಕ್ಕಳ ಸ್ನೇಹಿ ನ್ಯಾಯಾಲಯ, ಬಾಲ ಮಂದಿರಗಳು, ಎಚ್.ಐ.ವಿ. ಪೀಡಿತರಿಗೆ ಸೇವೆಗಳು, ಸ್ವಯಂ ಸೇವಾ ಸಂಸ್ಥೆಗಳ ನೋಂದಣಿ, ಸಾಂತ್ವನ, ನಿಲಯಗಳು, ಗೆಳತಿ, ಸ್ಥೈರ್ಯ ಯೋಜನೆಗಳ ಸ್ಥಿತಿಗತಿ ತಿಳಿಯಲು ಇ ಆಡಳಿತ ಸಹಕಾರಿಯಾಗಲಿದೆ.
ವಿಳಂಬ ನೀತಿಗೆ ಬ್ರೇಕ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಚೇರಿಯಿಂದ ಕಡತಗಳು ಕೇಂದ್ರ ಕಚೇರಿಗೆ ಬಂದಿರುವುದು ಯಾವ ದಿನಾಂಕ, ಯಾವ ಸಮಯ ಎಂಬುದನ್ನು ತಿಳಿಯಬಹುದು. ಯಾವ ಕಡತ ವಿಲೇವಾರಿಗೆ ಬಾಕಿ ಇದೆ, ಯಾವ ಯೋಜನೆಗೆ ಎಷ್ಟು ಹಣ, ಯಾವ ತಾಲೂಕಿನಲ್ಲಿ ಎಷ್ಟು ಅಂಗನವಾಡಿ ಕಾರ್ಯಕರ್ತರು, ತರಬೇತಿ, ವೇತನ, ಮಕ್ಕಳ ಸಂಖ್ಯೆ ಹೀಗೆ ಹಲವಾರು ವಿಷಯ ಕುಳಿತ ಸ್ಥಳದಲ್ಲಿಯೇ ಪಡೆಯಬಹುದು.
ಇಲಾಖೆಯಲ್ಲಿ ಇರುವ ಅನುದಾನದಲ್ಲಿಯೇ ಇ-ಆಡಳಿತ ಅಳವಡಿಸಲಾಗುತ್ತಿದೆ. ಇದರಿಂದ ಪೇಪರ್ ಮುಕ್ತವಾಗಲಿದ್ದು, ಸಂಪೂರ್ಣ ಡಿಜಿಟಲೀ ಕರಣವಾಗಲಿದೆ.
– ಕೆ. ದಯಾನಂದ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ
- ಮಂಜುನಾಥ ಗಂಗಾವತಿ