Advertisement

ಇ.ಡಿ. ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಮಧ್ಯಂತರ ರಕ್ಷಣೆಗೆ ಹೈಕೋರ್ಟ್ ನಕಾರ

09:33 AM Aug 31, 2019 | Team Udayavani |

ಬೆಂಗಳೂರು: ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಜಾರಿಗೊಳಿಸಿದ್ದ ಸಮನ್ಸ್ ಗೆ ಸಂಬಂಧಿಸಿದಂತೆ ಮಧ್ಯಂತರ ರಕ್ಷಣೆ ನೀಡಬೇಕೆಂದು ಕೋರಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಮಧ್ಯಂತರ ರಕ್ಷಣೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಮೇಲ್ಮವಿಯನ್ನು ಹೈಕೋರ್ಟ್ ಪೀಠ ಶುಕ್ರವಾರ ವಜಾಗೊಳಿಸಿದೆ. ಪ್ರಕರಣದ ಎಲ್ಲಾ ಅಂಶ ಪರಿಗಣಿಸಿ ನಿನ್ನೆಯೇ ತೀರ್ಪು ನೀಡಲಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Advertisement

ಜಾರಿ ನಿರ್ದೇಶನಾಲಯ ಜಾರಿಗೊಳಿಸಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿತ್ತು. ಇದರೊಂದಿಗೆ ಡಿಕೆ ಶಿವಕುಮಾರ್ ಗೆ ಬಂಧನ ಭೀತಿ ಎದುರಾಗಿತ್ತು. ಏತನ್ಮಧ್ಯೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ರಾತ್ರಿ ಸದಾಶಿವ ನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.

ಹೈಕೋರ್ಟ್ ಆದೇಶದ ಪ್ರತಿ ನಮಗಿನ್ನೂ ಸಿಕ್ಕಿಲ್ಲ, ಸಿಕ್ಕಿದ ಮೇಲೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಪರ ವಕೀಲರಾದ ಬಿವಿ ಆಚಾರ್ಯ ವಾದಿಸಿದ್ದರು. ಈಗಾಗಲೇ ತೀರ್ಪಿನ ಪ್ರತಿ ವೆಬ್ ಸೈಟಿನಲ್ಲಿ ಪ್ರಕಟಿಸಿದ್ದೇವೆ. ನೀವು ಇಂದೇ ಮೇಲ್ಮನವಿ ಸಲ್ಲಿಸಬಹುದು ಎಂದು ಹೈಕೋರ್ಟ್ ನ್ಯಾ.ಅರವಿಂದ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮೇಲ್ಮನವಿ ವಿಚಾರಣೆವರೆಗೆ ಮಧ್ಯಂತರ ರಕ್ಷಣೆ ಕೊಡಬೇಕೆಂದು ಮನವಿ ಮಾಡಿಕೊಂಡಾಗ, ನಾಳೆ ಡಿಕೆ ಶಿ ಇ.ಡಿ.ವಿಚಾರಣೆಗೆ ಹಾಜರಾಗುತ್ತಾರಾ ಎಂಬ ನ್ಯಾಯಾಧೀಶರ ಪ್ರಶ್ನೆಗೆ, ಇಲ್ಲ ಸೆಪ್ಟೆಂಬರ್ 4 ಅಥವಾ 6ರಂದು ಹಾಜರಾಗುತ್ತಾರೆ. ಅಲ್ಲಿಯವರೆಗೆ  ಬಂಧಿಸದಂತೆ ಹಿಂದೆ ನೀಡಿದ್ದ ಮಧ್ಯಂತರ ರಕ್ಷಣೆ ಮುಂದುವರಿಸಬೇಕೆಂದು ವಾದ ಮಂಡಿಸಿದ್ದರು.

ಮಧ್ಯಂತರ ರಕ್ಷಣೆ ಬೇಡ:ಇಡಿ ವಾದ

Advertisement

ಯಾವುದೇ ಕಾರಣಕ್ಕೂ ಡಿಕೆಶಿಗೆ ಮಧ್ಯಂತರ ರಕ್ಷಣೆ ಕೊಡಬಾರದು. ಮಧ್ಯಂತರ ರಕ್ಷಣೆ ನೀಡಿದ್ದು ಪ್ರಕರಣ ಮುಗಿಯುವವರೆಗೆ ಮಾತ್ರ. ಹೀಗಾಗಿ ತೀರ್ಪು ಬಂದ ಮೇಲೆ ಮಧ್ಯಂತರ ರಕ್ಷಣೆ ಪ್ರಶ್ನೆ ಬರುವುದಿಲ್ಲ ಎಂದು ಇಡಿ ಪರ ವಕೀಲರಾದ ಎಂಬಿ ನರಗುಂದ ಆಕ್ಷೇಪ ವ್ಯಕ್ತಪಡಿಸಿದ್ದರು.

ವಾದ ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ಪೀಠದ ನ್ಯಾ.ಅರವಿಂದ್ ಕುಮಾರ್ ಅವರು, ಜಾರಿ ನಿರ್ದೇಶನಾಲಯದ ಸಮನ್ಸ್ ಗೆ ಸಂಬಂಧಿಸಿದಂತೆ ನಿನ್ನೆಯೇ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಮಧ್ಯಂತರ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next