Advertisement
ಮಂಗಳೂರು: ಡ್ರಗ್ಸ್ ಚಟಕ್ಕೆ ಬೀಳಿಸುವ ಇ-ಸಿಗರೇಟ್ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಸೇರಿದ್ದರೂ ಜಿಲ್ಲೆಯಲ್ಲಿ ಯುವಜನರ ಕೈಗೆ ನಿರಾಂತಕವಾಗಿ ಲಭ್ಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
Related Articles
Advertisement
2019ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರವು ಆರೋಗ್ಯದ ದೃಷ್ಟಿಯಿಂದ ಇ- ಸಿಗರೇಟ್ ನಿಷೇಧಿಸಿತ್ತು. ಸಾಮಾನ್ಯವಾಗಿ ಸಿಗರೇಟ್‌ಗಳು ಉರಿಯುವಾಗ ಹೊಗೆ ಬಿಡುತ್ತವೆ. ಆದರೆ ಇ-ಸಿಗರೇಟ್ ಹಾಗಲ್ಲ. ಇದು ಸಿಗರೇಟ್ ಒಳಗಿನ ಬ್ಯಾಟರಿಗೆ ಅಳವಡಿಸಲಾದ ಕಾಯಿಲ್‌ನಿಂದ ಬೆಂಕಿ ಹತ್ತಿಕೊಂಡು ದ್ರವ ರೂಪದಲ್ಲಿರುವ ನಿಕೋಟಿನ್ ಹೊಗೆಯ ರೂಪದಲ್ಲಿ ಹೊರಸೂಸತೊಡಗುತ್ತದೆ. ಇದು ಸಾಮಾನ್ಯ ಸಿಗರೇಟ್‌ನ ಹೊಗೆಗಿಂತ ಶೇ. 20ರಷ್ಟು ಹೆಚ್ಚು ದಟ್ಟವಾಗಿರುತ್ತದೆ. ವಿಶೇಷವೆಂದರೆ, ಸಿಗರೇಟ್ ಸ್ವಾಭಾವಿಕ ತಂಬಾಕಿನ ವಾಸನೆಯನ್ನು ಹೊಂದಿದ್ದರೆ, ಇ- ಸಿಗರೇಟ್ ನಾನಾ ರೀತಿಯ ಸುಗಂಧ ದ್ರವ್ಯಗಳ ಪರಿಮಳದಲ್ಲಿ (ಚಾಕೋಲೆಟ್, ವೆನಿಲ್ಲಾ, ಸ್ಟ್ರಾಬೆರಿ ಇತ್ಯಾದಿ) ಲಭ್ಯ. ಆದರೆ ಈ ನಿಕೋಟಿನ್ ಸಾಮಾನ್ಯ ಸಿಗರೇಟ್‌ಗಿಂತಲೂ ವೇಗವಾಗಿ ವ್ಯಸನಿಯನ್ನಾಗಿಸುತ್ತದೆ.ಯುವಜನರನ್ನು ಅತಿಯಾಗಿ ಆಕರ್ಷಿಸುವ ಇ- ಸಿಗರೇಟ್ ವ್ಯಸನ ಇತರ ಅಪಾಯಕಾರಿ ನಿಷೇಧಿತ ಮಾದಕ ವಸ್ತುಗಳತ್ತ ಕೊಂಡೊಯ್ಯುತ್ತದೆ. ಇದೇ ಇ- ಸಿಗರೇಟ್ ನಿಷೇಧಕ್ಕೆ ಪ್ರಮುಖ ಕಾರಣ ಎನ್ನುವುದು ತಜ್ಞರ ಅಭಿಪ್ರಾಯ. ದುಬಾರಿ ಬೆಲೆಯಲ್ಲಿ ಮಾರಾಟವಾಗುವ ಇ- ಸಿಗರೇಟ್, ನಗರ ಪ್ರದೇಶದಲ್ಲಿಯಂತೂ ಜನನಿಬಿಡ, ಆಯಕಟ್ಟಿನ ಪ್ರದೇಶಗಳ ಅಂಗಡಿ ಮುಂಗಟ್ಟುಗಳಲ್ಲೇ ಎಗ್ಗಿಲ್ಲದೆ ಮಾರಾಟವಾಗುತ್ತದೆ. ಯುವ ಜನತೆಯೇ ಇದರ ಗ್ರಾಹಕರು. ಆದ ಕಾರಣ ಇಲಾಖೆಗಳು ಈ ಬಗ್ಗೆ ಕಟ್ಟನಿಟ್ಟಿನ ಕ್ರಮ ಕೈಗೊಂಡು ಡ್ರಗ್ಸ್ ವ್ಯಸನಕ್ಕೆ ತುತ್ತಾಗುವ ಯುವ ಸಮುದಾಯವನ್ನು ರಕ್ಷಿಸಬೇಕಿದೆ. ದ.ಕ. ಪೊಲೀಸ್ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತ ಮಾದಕ ದ್ರವ್ಯಗಳ ಸಾಗಣೆ-ಮಾರಾಟ ಜಾಲದ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ನಾಲ್ಕೈದು ದಿನಗಳ ಹಿಂದೆ ನಡೆದ ವಿಶೇಷ ದಾಳಿಯಲ್ಲಿ ಮೊಬೈಲ್ ಅಂಗಡಿಯೊಂದರಿಂದ 52 ಇ- ಸಿಗರೇಟ್‌ಗಳು ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕ್ರಮ ವಹಿಸಲಾಗಿದೆ. ಇದಲ್ಲದೆ ಎರಡು ವಾರಗಳಿಂದೀಚೆಗೆ ಪೊಲೀಸರ ಕಾರ್ಯಾಚರಣೆಯ ಸಂದರ್ಭ 7 ಕೆಜಿ ಗಾಂಜಾ, ಸಿಂಥೆಟಿಕ್ ಡ್ರಗ್ ಆದ 75 ಗ್ರಾಂ ಎಂಡಿಎಂ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ನಿಯಂತ್ರಣಕ್ಕೆ ಸಂಬಂಧಿಸಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು.
– ಡಾ| ವಿಕ್ರಮ್ ಅಮಟೆ, ಪೊಲೀಸ್ ವರಿಷ್ಠಾಧಿಕಾರಿ, ದ.ಕ. ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಇ- ಸಿಗರೇಟ್ ಮಾರಾಟದ ಬಗ್ಗೆಯೂ ಇಲಾಖೆಗೆ ಮಾಹಿತಿ ಬಂದಲ್ಲಿ ಸೂಕ್ತ ರೀತಿಯಲ್ಲಿ ಕ್ರಮ ವಹಿಸಲಾಗುವುದು. ವಿಶೇಷ ಡ್ರೈವ್ ಬಗ್ಗೆಯೂ ಚಿಂತಿಸಲಾಗುವುದು.
– ಕುಲ್‌ದೀಪ್ ಕುಮಾರ್ ಜೈನ್, ಪೊಲೀಸ್ ಆಯುಕ್ತರು, ಮಂಗಳೂರು