ಹೊಸದಿಲ್ಲಿ: ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಇದೀಗ, 10 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆಯಿರುವ ನಗರಗಳು ಹಾಗೂ ಸ್ಮಾರ್ಟ್ ಸಿಟಿಗಳಲ್ಲಿ ಪ್ರತಿ ಮೂರು ಕಿ.ಮೀ.ಗಳಿಗೊಂದು ವಿದ್ಯುತ್ ಚಾರ್ಜಿಂಗ್ ಕೇಂದ್ರ (ಇ-ಚಾರ್ಜಿಂಗ್) ಸ್ಥಾಪಿಸಲು ತೀರ್ಮಾನಿಸಿದೆ.
ಹಾಗಾಗಿ, ಈ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಆಕರ್ಷಕ ಪ್ರೋತ್ಸಾಹ ಧನ, ಸ್ಥಳೀಯ ಆಡಳಿತಗಳಿಂದ ಭೂಮಿಯನ್ನೂ ನೀಡುವುದಾಗಿ ಕೇಂದ್ರ ಘೋಷಿಸಿದೆ.
ಈ ಬಗ್ಗೆ ವಿವರಣೆ ನೀಡಿರುವ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು,” ದೇಶಾದ್ಯಂತ ಸುಮಾರು 30,000 ಮಂದಗತಿಯ ಚಾರ್ಜಿಂಗ್ ಕೇಂದ್ರ ಹಾಗೂ 15,000 ತ್ವರಿತಗತಿಯ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧ ರಿಸಲಾಗಿದೆ. ಮೂರರಿಂದ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ಯೋಜನೆ ಕಾರ್ಯಗತವಾಗಲಿದೆ. ಇನ್ನು, ಹೈವೇಗಳಲ್ಲಿ ಪ್ರತಿ 50 ಕಿ.ಮೀ. ದೂರ ಕ್ಕೊಂದು ಚಾರ್ಜಿಂಗ್ ಕೇಂದ್ರ ನೀಡಲು ತೀರ್ಮಾನಿಸಲಾಗಿದೆ’ ಎಂದಿದ್ದಾರೆ.
ಸ್ಥಳೀಯ ಸರಕಾರಗಳ ಜತೆ ಮಾತುಕತೆ ನಡೆಸಿ, ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಎನ್‌ಟಿಪಿಸಿ, ಪವರ್‌ಗ್ರಿಡ್ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಗಳು ಇಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಪ್ರಕ್ರಿಯೆಗೆ ಸದ್ಯದಲ್ಲೇ ಚಾಲನೆ ನೀಡಲಿವೆ ಎಂದು ಅವರು ತಿಳಿಸಿ ದ್ದಾರೆ.