Advertisement

E-bus: ಚಾಲಕರ ಧರಣಿ: ರಸ್ತೆಗಿಳಿಯದ 113 ಇ-ಬಸ್‌

11:37 AM May 15, 2024 | Team Udayavani |

ಬೆಂಗಳೂರು: ಸಮರ್ಪಕ ಮತ್ತು ನಿಯಮಿತವಾಗಿ ವೇತನ ಪಾವತಿ ಮಾಡುತ್ತಿಲ್ಲ ಎಂದು ಆರೋಪಿಸಿ ವಿದ್ಯುತ್‌ಚಾಲಿತ ಹವಾ ನಿಯಂತ್ರಣರಹಿತ ಬಸ್‌ ಚಾಲಕರು ಶಾಂತಿನಗರದಲ್ಲಿ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದರು.

Advertisement

ಈ ದಿಢೀರ್‌ ಬೆಳವಣಿಗೆ ಯಿಂದ ಬಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿ, ಸಾವಿರಾರು ಪ್ರಯಾಣಿಕರು ಪರದಾಡಿದರು. ಡಿಪೋ- 3 (ಶಾಂತಿನಗರ)ರಿಂದ ನಿತ್ಯ 113 ಎಲೆಕ್ಟ್ರಿಕ್‌ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಈ ಬಸ್‌ಗಳ ಚಾಲಕರು ಟಿಎಂಎಲ್‌ ಸ್ಮಾರ್ಟ್‌ಸಿಟಿ ಮೊಬಿಲಿಟಿ ಸಲ್ಯುಷನ್ಸ್‌ ಲಿ. ವತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಗೆ ನಿಯಮಿತವಾಗಿ ವೇತನ ಪಾವತಿ ಆಗುತ್ತಿಲ್ಲ. ಅಷ್ಟೇ ಅಲ್ಲ, ಸಮರ್ಪಕವಾಗಿ ವೇತನವನ್ನೂ ನೀಡುತ್ತಿಲ್ಲ. ಮಾಸಿಕ ಕನಿಷ್ಠ 30 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿ ಚಾಲಕರು ಪ್ರತಿಭಟನೆ ನಡೆಸಿದರು.

ಕರ್ತವ್ಯಕ್ಕೆ ಗೈರಾಗುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಸುಮಾರು 5 ಗಂಟೆಗೂ ಹೆಚ್ಚು ಹೊತ್ತು ವಿದ್ಯುತ್‌ಚಾಲಿತ ಹವಾನಿಯಂತ್ರಣರಹಿತ ಬಸ್‌ಗಳು ನಿಂತಲ್ಲೇ ನಿಂತಿದ್ದವು. ಏಕಾಏಕಿ ಪ್ರತಿಭಟನೆ ನಡೆದಿದ್ದರಿಂದ ಪ್ರಯಾಣಿಕರಿಗೆ ಇದರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಪರಿಣಾಮ ಎಂದಿನಂತೆ ನಿಲ್ದಾಣಕ್ಕೆ ಬಂದ ಸಾವಿರಾರು ಜನರಿಗೆ ಇದರ ಬಿಸಿ ತಟ್ಟಿತು.

ಸಾಮಾನ್ಯವಾಗಿ ಈ ಬಸ್‌ಗಳು ನಗರದ ಮೆಜೆಸ್ಟಿಕ್‌ ನಿಂದ ಅತ್ತಿಬೆಲೆ, ಚಂದಾಪುರ, ಎಲೆಕ್ಟ್ರಾನಿಕ್‌ಸಿಟಿ, ಶಿವಾಜಿನಗರ, ಬನಶಂಕರಿ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ಮಾಡುತ್ತವೆ. ಬೆಳಗ್ಗೆ ಮತ್ತು ಸಾಮಾನ್ಯ ಪಾಳಿಯಲ್ಲಿ ಸಂಚರಿಸುವ ಬಸ್‌ಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಿಎಂಟಿಸಿ ಅಧಿಕಾರಿಗಳು, ಚಾಲಕರೊಂದಿಗೆ ಮಾತುಕತೆ ನಡೆಸಿ, ಮನವೊಲಿಕೆಗೆ ಯತ್ನಿಸಿದರು.

ಮತ್ತೂಂದೆಡೆ ಡಿಪೋ 2, 4 ಮತ್ತು 7ರಿಂದ ಹೆಚ್ಚುವರಿ ಸೇವೆಗಳನ್ನು ಕಾರ್ಯಾಚರಣೆಗೊಳಿಸುವ ಮೂಲಕ ಪ್ರಯಾಣಿಕರಿಗೆ ಬಿಸಿ ತಟ್ಟದಂತೆ ಕ್ರಮ ಕೈಗೊಳ್ಳಲಾಯಿತು. ಸುಮಾರು 2 ತಿಂಗಳ ಹಿಂದೆ ಇದೇ ಡಿಪೋ- 3ರಲ್ಲಿ ವಿದ್ಯುತ್‌ಚಾಲಿತ ಹವಾನಿಯಂತ್ರಣರಹಿತ ಬಸ್‌ ಚಾಲಕರು ಇದೇ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ಆಗ 1 ತಾಸು ಸೇವೆಯಲ್ಲಿ ವ್ಯತ್ಯಯ ಆಗಿತ್ತು. ಆದರೆ, ಪ್ರಯಾಣಿಕರಿಗೆ ಇದರಿಂದ ಅಷ್ಟೇನೂ ಸಮಸ್ಯೆ ಆಗಿರಲಿಲ್ಲ. ಈಗ ಮತ್ತೆ ಪ್ರತಿಭಟನೆ ಪುನರಾವರ್ತನೆ ಆಗಿದ್ದು, ಬಿಎಂಟಿಸಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಬಿಎಂಟಿಸಿಗೆ ನೇರ ಸಂಬಂಧ ಇಲ್ಲ: ಈ ಚಾಲಕರು ನೇರವಾಗಿ ಬಿಎಂಟಿಸಿಗೆ ಸಂಬಂಧಪಡುವುದಿಲ್ಲ. ಗುತ್ತಿಗೆ ಪಡೆದ ಸಂಸ್ಥೆಯ ಅಡಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿಂದಲೇ ನೇರವಾಗಿ ವೇತನ ಪಾವತಿ ಆಗುತ್ತಿದೆ. ಆದರೆ, ಬೇಡಿಕೆ ಈಡೇರಿಕೆಗಾಗಿ ಆಗಾಗ್ಗೆ ಪ್ರತಿಭಟನೆಗಿಳಿಯುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಸಂಸ್ಥೆ ಅಧಿಕಾರಿಗಳು ಕಸರತ್ತು ನಡೆಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬೆಳಗಿನ ಪಾಳಿಯಲ್ಲಿ 27 ಮತ್ತು ಸಾಮಾನ್ಯ ಪಾಳಿಯಲ್ಲಿ 46 ವಿದ್ಯುತ್‌ಚಾಲಿತ ಬಸ್‌ಗಳ ಕಾರ್ಯಾಚರಣೆಯಲ್ಲಿ ಬೆಳಗ್ಗೆ 7ರಿಂದ 11ರವರೆಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಕಂಪನಿ ಪ್ರತಿನಿಧಿಗಳು ಮತ್ತು ಬಿಎಂಟಿಸಿ ಸಂಸ್ಥೆ ಅಧಿಕಾರಿಗಳು ಚಾಲಕರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಿದ್ದು, 11 ರಿಂದ ಕಾರ್ಯಾಚರಣೆ ಯಥಾಸ್ಥಿತಿಗೆ ಮರಳಿದೆ. ಈ ವ್ಯತ್ಯಯದಲ್ಲಿ ಸಂಸ್ಥೆ ಯಾವುದೇ ರೀತಿ ಹೊಣೆ ಇರುವುದಿಲ್ಲ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next