ಕುಷ್ಟಗಿ: ಗ್ರಾಪಂ ಚುನಾವಣೆಗಳು ಶಾಂತಿ ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ರೌಡಿಶೀಟರ್ ಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹದ್ದು
ಮೀರಿ ವರ್ತಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ರುದ್ರೇಶ
ಉಜ್ಜನಕೊಪ್ಪ ಎಚ್ಚರಿಸಿದರು.
ಪಟ್ಟಣದ ಪೊಲೀಸ್ ಠಾಣೆ ಮೈದಾನದಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರೌಡಿಶೀಟರ್‌ಗಳ ಪರೇಡ್ ನಡೆಸಿ ಎಚ್ಚರಿಕೆ
ನೀಡಿದರು. ಗ್ರಾಪಂ ಚುನಾವಣೆಗಳು ಶಾಂತಿ, ಸುವ್ಯವಸ್ಥಿತವಾಗಿ ನಡೆಯಬೇಕಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆ,
ಗದ್ದಲಗಳಿಗೆ ಅವಕಾಶದಂತೆ ತಾವಾಯಿತು ತಮ್ಮ ಮನೆ ಕೆಲಸವಾಯಿತು ಎನ್ನುವಂತಿರಬೇಕು. ಊರು ಉಸಾಬರಿಗೆ ಮುಂದಾಗಿ ರಾಜಕೀಯ ಪಕ್ಷವಹಿಸಿ ಗಲಾಟೆ ಮಾಡಿದ್ದರಿಂದಲೇ ರೌಡಿಶೀಟ್‌ನಲ್ಲಿದ್ದೀರಿ ನೆನಪಿರಲಿ. ಇದರಲ್ಲಿ ಕೆಲವರಿಗೆ ರೌಡಿಶೀಟ್‌ನಲ್ಲಿ ಇದ್ದಾರೆಂದು ಗೊತ್ತಿಲ್ಲ. ಕಾನೂನು ಬಾಹಿರ ವರ್ತನೆ ಬದಲಿಸಿಕೊಳ್ಳಬೇಕಿದೆ. ಒಂದು ಬಾರಿ ರೌಡಿಶೀಟ್‌ನಲ್ಲಿ ಹೆಸರು ದಾಖಲಾದರೆ 10 ವರ್ಷಗಳವರೆಗೆ ಸಮಾಜದಲ್ಲಿ ಹೇಗಿದ್ದಾನೆ ಎನ್ನುವುದನ್ನು ಗಮನಿಸಲಾಗುತ್ತಿದೆ.
ಇದನ್ನೂ ಓದಿ:ಗ್ರಾ.ಪಂ. ಚುನಾವಣೆ ಹಿನ್ನೆಲೆ: ನಾಲ್ಕೇ ದಿನಕ್ಕೆ ಮುಗಿಯಲಿದೆ ಅಧಿವೇಶನ!
ನಡವಳಿಕೆಯಲ್ಲಿ ಚೆನ್ನಾಗಿದ್ದು, ಕಾನೂನಿನ್ವಯ ನಡೆದುಕೊಂಡರೆ ಮಾತ್ರ ಪೂರ್ವಾಪರ ಅವಲೋಕಿಸಿ ರೌಡಿಶೀಟ್‌ನಿಂದ ಹೆಸರು ತೆಗೆದು ಹಾಕುವ ಅವಕಾಶವಿದೆ. ಈ 10 ವರ್ಷಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಪುನರಾವರ್ತನೆಗೊಳಿಸಿದರೆ ಪಿಎಸ್‌ಐ, ಸಿಪಿಐ, ಡಿವೈಎಸ್‌ಪಿ ವರದಿ ಅವಲೋಕಿಸಿ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅದೇ ಹಳೆ ಚಾಳಿ ಮುಂದುವರಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತಷ್ಟು ಬಿಗಿಯಾಯಾಗಲಿದೆ ಎಂದು ಎಚ್ಚರಿಸಿದರು.
ಅಕ್ರಮ ಮದ್ಯ ಮಾರಾಟ, ಚುಡಾಯಿಸುವಿಕೆ, ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುವುದು ಸೇರಿದಂತೆ ಪ್ರತಿಭಟನೆ ಹೆಸರಲ್ಲಿ ರಸ್ತಾರೋಖ್ ಮಾಡುವುದು, ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಿಂದಾಗಿ ರೌಡಿಶೀಟ್ ತೆರೆದಿರಲಾಗಿರುತ್ತದೆ. ಕೋರ್ಟ್, ಕಚೇರಿಗಳಲ್ಲಿ ರೌಡಿಶೀಟರ್‌ಗೆ ಯಾವೂದೇ ಮುಲಾಜು ತೋರಿಸುವುದಿಲ್ಲ. ತಮ್ಮ ನಡುವಳಿಕೆ ಸರಿಪಡಿಸಿಕೊಂಡು ಸಮಾಜದಲ್ಲಿ ಶಾಂತಿ ಭಂಗವಾಗದಂತೆ ನಿಗಾವಹಿಸಬೇಕೆಂದರು.