Advertisement

12 ವರ್ಷಗಳ ಬಳಿಕ ದ್ವಾರಸಮುದ್ರ ಕೆರೆ ಭರ್ತಿ : ಊರಿನ ಜನತೆ, ರೈತರ ಮೊಗದಲ್ಲಿ ಸಂತಸ

02:17 PM Dec 09, 2021 | Team Udayavani |

ಹಳೇಬೀಡು: ನಿರಂತರವಾಗಿ ಸುರಿದ ಮಳೆಯಿಂದ ದ್ವಾರಸಮುದ್ರ ಕೆರೆಗೆ ನೀರು ಹರಿದು ಬರುತ್ತಿದ್ದು, ಸಾವಿರಾರು ರೈತರ ಮೊಗದಲ್ಲಿ, ಹೋಬಳಿ ಜನರಿಗೆ ಸಂತಸ ಉಂಟುಮಾಡಿದೆ.
ಸುಮಾರು 9ನೇ ಶತಮಾನದಲ್ಲಿ ರಾಷ್ಟ್ರಕೂಟರ ದೊರೆ ನಿರ್ಮಿಸಿದ್ದ ಎನ್ನಲಾದ ದ್ವಾರಸಮುದ್ರ ಕೆರೆ ಸುಮಾರು 900 ಹೆಕ್ಟೇರ್‌ ವಿಸ್ತೀರ್ಣ ಹೊಂದಿದೆ. ದ್ವಾರಸಮುದ್ರ ಕರೆ ಭರ್ತಿಯಾಗಿರುವುದರಿಂದ 3-4 ವರ್ಷಗಳ ಕಾಲ ರೈತರು ನೆಮ್ಮದಿ ಜೀವನ ಸಾಗಿಸಬಹುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಮಹಿಳೆಯರಿಂದ ನಿತ್ಯ ಗಂಗಾ ಪೂಜೆ: 12 ವರ್ಷಗಳ ನಂತರ ಭರ್ತಿಯಾಗಿರುವ ದ್ವಾರಸಮುದ್ರ ಕೆರೆಗೆ ಗ್ರಾಮದ ಮಹಿಳೆಯರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ದ್ವಾರಸಮುದ್ರ ಕೆರೆಗೆ ಬಂದು ಗಂಗಾ ಮಾತೆಗೆ ಹೂವು, ಹಣ್ಣು, ತಂಬಿಟ್ಟು ಸೇರಿದಂತೆ ಇನ್ನಿತರ ಪೂಜಾ ಪರಿಕರಗಳೊಂದಿಗೆ ಭಕ್ತಿಯಿಂದ ಗಂಗೆ ಪೂಜೆ ಮಾಡಿ, ಹೋಬಳಿಯ ಜನತೆಗೆ ರೈತರಿಗೆ ಸುಖ- ಸಮೃದ್ಧಿ ನೀಡಲಿ ಎಂದು ದೇವರಲ್ಲಿ ನಿತ್ಯ ಪಾರ್ಥನೆ ಮಾಡುತ್ತಿರುವುದು ದ್ವಾರಸಮುದ್ರ ಕೆರೆಗೆ ಜೀವ ಕಳೆ ಬಂದಂತೆ ಕಾಣುತ್ತಿದೆ.

ಆಕರ್ಷಣೆಗೆ ಬೋಟಿಂಗ್‌ ವ್ಯವಸ್ಥೆ: ದ್ವಾರಸಮುದ್ರ ಕೆರೆ ತುಂಬಿರುವುದರಿಂದ ಬಂದ ಪ್ರವಾಸಿಗರಿಗೆ ಮುದ ನೀಡಲು ಮತ್ತು ಪ್ರವಾಸಿಗರನ್ನು ಆಕರ್ಷಿಸಲು ಹೊಯ್ಸಳ ಬೋಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಭಯದ ನಡುವೆ ಪ್ರವಾಸಿಗರು ಹೊಯ್ಸಳರ ಕಾಲದ ಪ್ರಸಿದ್ಧ ದೇವಾಲಯ ವೀಕ್ಷಣೆ ಮಾಡಲು ಆಗಮಿಸಿದವರು ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ದ್ವಾರಸಮುದ್ರ ಕರೆಗೆ ಬಂದು ಬೋಟಿಂಗ್‌ ವಿಹಾರದ ಮೂಲಕ ಸ್ಥಳೀಯ ಪ್ರಕೃತಿ ಸೌಂದರ್ಯ ಸವಿದು ಮನಃ ತುಂಬಿಕೊಂಡು ವಾಪಾಸ್‌ ಹೋಗಲು ದ್ವಾರಸಮುದ್ರ ಕೆರೆ ಆಕರ್ಷಣೀಯ ಕೇಂದ್ರವಾಗಿದೆ.  ದ್ವಾರಸಮುದ್ರ ಕೆರೆ ತುಂಬಿದ ನಂತರ ಕೆರೆ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯ ಮತ್ತು ಹೊರರಾಜ್ಯ ಪ್ರವಾಸಿಗರ ಜತೆಗೆ ಸ್ಥಳೀಯರು ಮಕ್ಕಳು ಕೂಡ ಬೋಟಿಂಗ್‌ಗೆ ಹೋಗಿ ಖುಷಿಪಡುತ್ತಿದ್ದಾರೆ.

ರಣಘಟ್ಟ ಯೋಜನೆ ಕಾಮಗಾರಿ ಪ್ರಾರಂಭ:
ಹಳೇಬೀಡಿನಿಂದ ಕೇವಲ 10 ಕೀಲೋ ಮೀಟರ್‌ ದೂರದಲ್ಲಿಯೇ ಬೇಲೂರಿನಲ್ಲಿ ಯಗಚಿ ನದಿ ಇದ್ದರೂ, ಹಳೇಬೀಡಿನ ದ್ವಾರಸಮುದ್ರ ಕರೆಗೆ ಹೊಯ್ಸಳರ ಕಾಲದ ರಣಘಟ್ಟ ಒಡ್ಡಿನ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ, ಸುಮಾರು ಎರಡು- ಮೂರು ದಶಕಗಳಿಂದಲೂ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ, ನೀರು ಮಾತ್ರ ದ್ವಾರಸಮುದ್ರ ಕೆರೆಗೆ ಬರುವುದು
ಮರೀಚಿಕೆಯಾಗಿ ಉಳಿದಿತ್ತು. ರೈತರ ಹೋರಾಟ, ಸ್ಥಳೀಯ ಶಾಸಕ ಕೆ.ಎಸ್‌.ಲಿಂಗೇಶ್‌ ಒತ್ತಡ, ಹಲವು ಸ್ವಾಮೀಜಿಗಳ ಹೋರಾಟಕ್ಕೆ ಮಣಿದು ತಮ್ಮ ಸರ್ಕಾರದ ಅವಧಿಯ ಬಜೆಟ್‌ನಲ್ಲಿ ಸುಮಾರು 100 ಕೋಟಿ ಹಣವನ್ನು ರಣಘಟ್ಟ ಯೋಜನೆ ಮೀಸಲಿಟ್ಟರು. ನಂತರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕುಮಾರಸ್ವಾಮಿ ಸರ್ಕಾರದ ಬಜೆಟ್‌ನಲ್ಲಿ ಮೀಸಲಿಟ್ಟ
ಹಣವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿ, ಅದರಂತೆ ನಡೆದುಕೊಂಡು ಹೆಚ್ಚುವರಿಯಾಗಿ 28 ಕೋಟಿ ಹಣ ಮೀಸಲಿಟ್ಟು, ರಣಘಟ್ಟ ಶಾಶ್ವತ ನೀರಾವರಿ ಯೋಜನೆಗೆ ಅವಕಾಶ ನೀಡಿತ್ತು. ಅದರ ಕಾಮಗಾರಿ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.

Advertisement

– ಕುಮಾರ್‌.ಎಂ.ಸಿ

Advertisement

Udayavani is now on Telegram. Click here to join our channel and stay updated with the latest news.

Next