ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರಾಜ್ಯದ 25 ಮಂದಿ ಬಿಜೆಪಿ ಸಂಸದರ ಪೈಕಿ ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಮತ್ತೆ ಸಚಿವ ಸ್ಥಾನ ದೊರಕಿದೆ. ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರಿಗೆ ಈ ಬಾರಿ ಅದೃಷ್ಟ ಕುದುರಿದ್ದು ಸಚಿವರಾಗುಲ ಭಾಗ್ಯ ದೊರಕಿದೆ. ಹುಬ್ಬಳ್ಳಿ -ಧಾರಾವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಷಿ ಅವರಿಗೂ ಸಚಿವ ಸ್ಥಾನ ಒಲಿದಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಂಸದರಿಗೆ ಖುದ್ದು ಕರೆ ಮಾಡಿ ಸಚಿವ ಸ್ಥಾನನೀಡುವ ಬಗ್ಗೆ ಮಾಹಿತಿ ನೀಡಿ ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಆಗಮಿಸಲು ಸೂಚನೆ ನೀಡಿದ್ದಾರೆ.
ಒಕ್ಕಲಿಗ ಕೋಟಾದಡಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರಿಗೆ ಸಚಿವ ಸ್ಥಾನ ಒಲಿದಿದೆ. ಬೆಳಗಾವಿಯಿಂದ 4 ನೇ ಬಾರಿ ಸಂಸದರಾಗಿರುವ ಸುರೇಶ್ ಅಂಗಡಿ ಅವರಿಗೆ ಹಿರಿತನದ ಆಧಾರ ಮತ್ತು ಲಿಂಗಾಯತ ಕೋಟಾದಡಿಯಲ್ಲಿ ಸಚಿವ ಸ್ಥಾನ ನೀಡಲಾಗಿದೆ.
4 ನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ 56 ರ ಹರೆಯದ ಪ್ರಹ್ಲಾದ್ ಜೋಷಿ ಅವರಿಗೆ ಸಚಿವ ಸ್ಥಾನ ದೊರಕಿದೆ.
ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಸಚಿವಸ್ಥಾನ ದೊರಕಿದೆ.