ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಮತಬೇಟೆ ಮುಂದುವರಿದಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನಗರದ ಮೂರು ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸುವ ಪಕ್ಷದ ಅಭ್ಯರ್ಥಿಗಳ ಪರವಾಗಿ ಭಾನುವಾರ ಬಿರುಸಿನ ಮತಯಾಚನೆ ನಡೆಸಿದರು.
ಚುನಾವಣೆಗೆ ಕೆಲವು ದಿನಗಳಷ್ಟೇ ಬಾಕಿಯಿರುವ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರದ ಅಬ್ಬರ ಜೋರಾಗಿದ್ದು, ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರೋಡ್‌ಶೋ ನಡೆಸುವ ಮೂಲಕ ಅಬ್ಬರದ ಪ್ರಚಾರ ನಡೆಸಿದ್ದರು. ಇದರ ಬೆನ್ನಲ್ಲೆ ಡಿ.ವಿ.ಸದಾನಂದಗೌಡ ಹಾಗೂ ಮತ್ತಿತರ ಮುಖಂಡರು, ಮನೆ ಮನೆಗೆ ತೆರಳಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ನಗರದ ಚಾಮರಾಜ ಕ್ಷೇತ್ರದ ಕೆ.ಜಿ.ಕೊಪ್ಪಲಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ ಸದಾನಂದಗೌಡ, ಪಾದಯಾತ್ರೆ ಮೂಲಕ ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ಪರವಾಗಿ ಪ್ರಚಾರ ಮಾಡಿದರು. ಬಳಿಕ ಕೃಷ್ಣರಾಜ ಕ್ಷೇತ್ರದಲ್ಲಿನ ಹಲವು ಬಡಾವಣೆಗಳಿಗೆ ತೆರಳಿದ ಸದಾನಂದಗೌಡ, ಸ್ಥಳೀಯ ಅಭ್ಯರ್ಥಿ ಎಸ್.ಎ.ರಾಮದಾಸ್ ಪರವಾಗಿ ಮತಯಾಚನೆ ನಡೆಸಿದರು.
ಬಳಿಕ ಎನ್.ಆರ್.ಕ್ಷೇತ್ರಕ್ಕೆ ತೆರಳಿ ಕ್ಷೇತ್ರದ ಪ್ರಮುಖ ಬಡಾವಣೆಗಳಲ್ಲಿನ ಮನೆ ಮನೆಗೆ ತೆರಳಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಂದೇಶ್ ಸ್ವಾಮಿ ಅವರಿಗೆ ಬೆಂಬಲ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂದೇಶ್‌ಸ್ವಾಮಿ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಮುಖಂಡರಾದ ಸಿ.ಬಸವೇಗೌಡ, ಯುವ ಮೋರ್ಚಾ ಅಧ್ಯಕ್ಷ ಕಿರಣ್‌ಗೌಡ ಮತ್ತಿತರರು ಪ್ರಚಾರದಲ್ಲಿ ಭಾಗವಹಿಸಿದ್ದರು.