Advertisement

ರಾಮ ನಿರ್ಯಾಣದ ಪ್ರವಚನಗೈಯುತ್ತಲೇ ಮೋಕ್ಷಯಾನ ಕೈಗೊಂಡ ದ್ವೈತ ವೇದಾಂತ ವಿಚಕ್ಷಣ

03:50 PM Jun 15, 2024 | Team Udayavani |

ಉಡುಪಿ: ಜೂ. 14ರ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರ ದಿವ್ಯಾನುಗ್ರಗದೊಂದಿಗೆ ನಡೆಯುತ್ತಿದ್ದ ಸರಣಿ ಪ್ರವಚನ ಮಾಲಿಕೆಯಲ್ಲಿ ಶ್ರೀರಾಮ ನಿರ್ಯಣದ ವಿಷಯದಲ್ಲಿ ಪ್ರವಚನಗೈದ ಬಳಿಕ ಅಲ್ಲೇ ಕುಸಿದು ಅಸ್ವಸ್ಥಗೊಂಡಿದ್ದ ದ್ವೈತ ಸಿದ್ಧಾಂತ ಮೇರು ವಿದ್ವಾಂಸರೂ, ಪ್ರಚನಕಾರರೂ ಲೇಖಕರೂ ಶ್ರೀ ಕೃಷ್ಣ ಮಠ ಅಷ್ಟಮಠಗಳ ಆಸ್ಥಾನ ವಿದ್ವಾಂಸರೂ ಆಗಿದ್ದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಜೂ.15ರ ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. 72 ವರ್ಷ ಪ್ರಾಯವಾಗಿತ್ತು.

Advertisement

ವಿದ್ವಾಂಸರ ಮನೆತನದಲ್ಲೇ ಜನಿಸಿದ್ದ ಉಪಾಧ್ಯಾಯರು ಸಂಪ್ರದಾಯ ನಿಷ್ಠೆ ಹಾಗೂ ವಿಪ್ರವಿಹಿತ ಕರ್ಮಾನುಷ್ಠಾನಗಳಲ್ಲಿ ಆತ್ಯಂತಿಕ ಶ್ರದ್ಧೆ ಹೊಂದಿದ್ದು ಜೀವನಪರ್ಯಂತ ಅವುಗಳನ್ನು ಪಾಲಿಸಿಕೊಂಡು ಬಂದಿದ್ದರು.

ಉಡುಪಿಯ ಪ್ರಸಿದ್ಧ ಶ್ರೀ ಮನ್ನಧ್ವ ಸಿದ್ಧಾಂತ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಅವಧಿ ದ್ವೈತ ವೇದಾಂತ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಅನೇಕ ಮಠಗಳಿಂದ ಪ್ರಕಟವಾಗುತ್ತಿದ್ದ ಸುಗುಣಮಾಲಾ, ಸರ್ವಮೂಲ ತತ್ತ್ವವಾದ ಮೊದಲಾದ ಅನೇಕ ಮಾಸಪತ್ರಿಕೆಗಳಲ್ಲಿ ನಿರಂತರ ಅಧ್ಯಾತ್ಮಿಕ ಚಿಂತನ ಅಂಕಣಗಳ ಮೂಲಕ ಪ್ರಸಿದ್ಧರಾಗಿದ್ದರು. ಪ್ರವಚನ‌ ಕುಶಲಿಗಳೂ ಆಗಿದ್ಸು ದ್ವೈತ ವೇದಾಂತ ಶಾಸ್ತ್ರದ ಹಳೆಯ ತಲೆಮಾರಿನ ವಿದ್ವಾಂಸರ ಮಹತ್ವದ ಕೊಂಡಿಯಾಗಿದ್ದರು.

ಮಧ್ವಶಾಸ್ತ್ರದ ಬಗ್ಗೆ ಇದಮಿತ್ಥಂ ಎಂದು ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದ ಶ್ರೀಯುತರು ಶ್ರೀಕೃಷ್ಣ ಮಠ ಹಾಗೂ ಬಹುತೇಕ ಎಲ್ಲ ಮಾಧ್ವಮಠಗಳಿಂದ ವಿಶೇಷವಾಗಿ ಪುರಸ್ಕೃತರಾಗಿದ್ದರು.

Advertisement

ಇತತೀಚೆಗಷ್ಟೆ ಅಯೋಧ್ಯೆಯಲ್ಲಿ ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ  ಸಂಪನ್ನಗೊಂಡ  ಮಂಡಲೋತ್ಸವದಲ್ಲೂ ಭಾಗವಹಿಸಿ ಅಷ್ಡಾವಧಾನ ಸೇವೆಗೈದಿದ್ದರು.

ಇವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರು ಅಭಿಮಾನಿಗಳನ್ನು ಅಗಲಿದ್ದಾರೆ.

ಕರಂಬಳ್ಳಿ ವಲಯ ಬ್ರಾಹ್ಮಣ ಸಂಘದಲ್ಲಿ ಅವರ ಪ್ರವಚನ ಮಾಲಿಕೆ ನೆರವೇರಿತ್ತು.

ಉಪಾಧ್ಯಾಯರ ನಿಧನಕ್ಕೆ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪಲಿಮಾರು ಮತ್ತು ಅದಮಾರು ಉಭಯ ಶ್ರೀಗಳು, ಪೇಜಾವರ  ಕಾಣಿಯೂರು ಸೋದೆ ಶೀರೂರು ಮಂತ್ರಾಲಯ, ಭಂಡಾರಕೇರಿ, ಚಿತ್ರಾಪುರ ಶ್ರೀಗಳು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಯುವಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ, ತುಳುಶಿವಳ್ಳಿ ಬ್ರಾಹ್ಮಣ ಮಹಾಮಂಡಲ, ಉಡುಪಿ ಪುರೋಹಿತರ ಸಂಘ, ಸಂಸ್ಕೃತ ಮಹಾವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ ಮಾಜಿ ಶಾಸಕ ಕೆ. ರಘುಪತಿ ಭಟ್, ಶಾಸಕ ಯಶ್ಪಾಲ್ ಸುವರ್ಣ ಹೀಗೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‌

Advertisement

Udayavani is now on Telegram. Click here to join our channel and stay updated with the latest news.

Next