Advertisement
ಡಿಸೆಂಬರ್ 31, ಗಡಿಯಾರದ ಮುಳ್ಳು ಮಧ್ಯರಾತ್ರಿ 12ಕ್ಕೆ ಮುಟ್ಟಿತೆಂದರೆ, ಬೆಂಗಳೂರಿನಲ್ಲಿ ಬಾನಿಗೂ ರಂಗು, ಭುವಿಗೂ ರಂಗು. ಪಟಾಕಿಗಳ ಸದ್ದು, ಕಲರ್‌ಫುಲ್ ಲೈಟಿಂಗ್ಸ್‌ನಲ್ಲಿ ಮಿಂದೇಳುವ ಬೀದಿಗಳು, ಪಾರ್ಟಿಯ ಗುಂಗಿನಲ್ಲಿ ತೇಲುವ ಜನರು, ಅಬ್ಬರದ ಡಿಜೆ ಮ್ಯೂಸಿಕ್‌ಗಳು… ಆ ಹೊತ್ತಿಗಾಗಲೇ ಪ್ರತಿಯೊಬ್ಬರ ಮೊಬೈಲೂನಲ್ಲೂ ಠಣ್ ಠಣ್ ಎನ್ನುವ ಮೆಸೇಜುಗಳು. ಮುಖದಲ್ಲಿ ಸ್ಟೈಲಿ, ನಾನಾ ವೈಯ್ನಾರದ ಸೆಲ್ಫಿ, ವಿಡಿಯೋ ಕಾಲ್‌ಗಳು… ಸಂಭ್ರಮದ ಅಷ್ಟೂ ಮುಖಗಳ ದರ್ಶನ ಅವತ್ತು ರಾಜಧಾನಿಯಲ್ಲಾಗುತ್ತದೆ.
Related Articles
Advertisement
ಎಂ.ಜಿ. ರಸ್ತೆಯಲ್ಲಿ ಶಾಂತಿ ಕಾಪಾಡುತ್ತಾ…ಕಳೆದ ಹದಿಮೂರು ವರ್ಷಗಳಿಂದ, ಡಿ.31ರ ಮಧ್ಯರಾತ್ರಿ 12ಕ್ಕೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಾನು ಹಾಜರಿರುತ್ತೇನೆ. ಪಾರ್ಟಿ ಮಾಡ್ತಾ ಅಲ್ಲ; ಡ್ಯೂಟಿ ಮಾಡುತ್ತಾ! ಹೊಸವರ್ಷದ ದಿನ ರಾಜಧಾನಿಯ ಸಂಭ್ರಮ, ಸಡಗರ, ಅಬ್ಬರ ಎಲ್ಲ ನಿಮಗೆ ಗೊತ್ತೇ ಇದೆ. ಅವತ್ತಿನ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವುದು ನಮ್ಮ ಕೆಲಸ. ಒಬ್ಬ ಪೊಲೀಸ್ ಆಗಿ, ಸಾಮಾನ್ಯ ಜನರು ಶಾಂತಿಯುತವಾಗಿ, ಯಾರಿಗೂ ತೊಂದರೆಯಾಗದಂತೆ ಹೊಸ ವರ್ಷ ಆಚರಿಸಿದರೆ, ಸುರಕ್ಷಿತವಾಗಿ ಮನೆಗೆ ವಾಪಸಾದರೆ ಅದೇ ನನಗೆ ದೊಡ್ಡ ಸೆಲೆಬ್ರೇಷನ್. ಕಾಲೇಜು ದಿನಗಳಲ್ಲಿ, ನಾನೂ ಗೆಳೆಯರ ಜೊತೆ ಸೇರಿ ಭರ್ಜರಿಯಾಗಿ ಹೊಸ ವರ್ಷ ಆಚರಿಸುತ್ತಿದ್ದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕೆಲವೊಮ್ಮೆ, ಜನರ ಖುಷಿ-ಸಂಭ್ರಮಕ್ಕೆ ನಾವು ಅಡ್ಡಿ ಮಾಡ್ತಿದ್ದೇವಾ ಅಂತ ಅನ್ನಿಸಿದರೂ, ಕರ್ತವ್ಯದ ವಿಷಯದಲ್ಲಿ ರಾಜಿಯಾಗುವ ಮಾತಿಲ್ಲ. ಸಂಭ್ರಮದ ಸಮಯದಲ್ಲಿ ಯಾರಿಗೂ ಅಡಚಣೆ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.
-ರವಿಕುಮಾರ್ ತುಮಕೂರು, ಪೊಲೀಸ್ ಪೇದೆ, ಇಂದಿರಾನಗರ ಠಾಣೆ ಮಧ್ಯ ರಸ್ತೇಲಿ, ಸ್ಟೀರಿಂಗ್ ಜೊತೆಯಲ್ಲಿ…
ನಮ್ಮ ಬಸ್ ದಿನಾ ಸಂಜೆ 6.30ಕ್ಕೆ ಮುಧೋಳದಿಂದ ಹೊರಟರೆ, ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪುತ್ತದೆ. ಹೊಸವರ್ಷದ ದಿನವೂ ಇದಕ್ಕೆ ಹೊರತೇನಲ್ಲ. ಹಾಗಾಗಿ ನಮ್ಮ ಹೊಸ ವರ್ಷ ಶುರುವಾಗುವುದು ಬಸ್‌ನಲ್ಲಿಯೇ. ದಾರಿಯುದ್ದಕ್ಕೂ ಅಲ್ಲಲ್ಲಿ ಜನರು ಪಾರ್ಟಿ ಮಾಡುತ್ತಿರುವುದು, ರಸ್ತೆ ಮೇಲೆ “ಹ್ಯಾಪಿ ನ್ಯೂ ಇಯರ್’ ಅಂತ ಬರೆದಿರುವುದು ಕಾಣುತ್ತದೆ. ಕೆಲವೊಮ್ಮೆ, ಪ್ರಯಾಣಿಕರಲ್ಲಿ ಕೆಲವರು ಸ್ವೀಟ್ಸ್ ತಂದಿರುತ್ತಾರೆ. ಅವರು 12 ಗಂಟೆ ಕಳೆಯುತ್ತಿದ್ದಂತೆ ನಮಗೆಲ್ಲಾ ಸಿಹಿ ನೀಡಿ, ಶುಭಾಶಯ ಕೋರುತ್ತಾರೆ. ಮರುದಿನ ಬೆಳಗ್ಗೆ, ನಾವು ಐದಾರು ಬಸ್‌ನ ಚಾಲಕ-ನಿರ್ವಾಹಕರು ಒಟ್ಟಿಗೆ ಸೇರಿ ಪಾರ್ಟಿ ಮಾಡುತ್ತೇವೆ. ಪಾರ್ಟಿ ಅಂದ್ರೆ, ಜೋಳದ ರೊಟ್ಟಿ- ಚಟ್ನಿ- ಮೊಸರು, ಅಷ್ಟೇ! ಎಲ್ಲರೂ ಒಟ್ಟಿಗೇ ಕುಳಿತು, ನಾವು ತಂದಿರುವುದನ್ನು ಹಂಚಿ ತಿನ್ನುತ್ತೇವೆ. 13-14 ವರ್ಷಗಳಿಂದ ಹೀಗೇ ನಡೆದುಕೊಂಡು ಬಂದಿದೆ.
-ಉಮೇಶ್ ಲಕ್ಷ್ಮಣ ಜಾಧವ್ ಇಂಡಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕ ರಾತ್ರಿಯಿಡೀ ಡ್ಯೂಟಿಯ ಜಾಗರಣೆ
ದುಡ್ಡು ಕೊಡುವ ಯಂತ್ರದ ಮುಂದೆ ರಾತ್ರಿಯಿಡೀ ಕಾಯುವ ಕೆಲಸ ನನ್ನದು. ನಾನೇ ಈ ಕುರ್ಚಿಯಿಂದ ಎದ್ದು, ಪಾರ್ಟಿಗೆ ಹೋದರೆ, ನನ್ನ ಕರ್ತವ್ಯಕ್ಕೆ ಮೋಸ ಮಾಡಿದ ಹಾಗಾಗುತ್ತೆ. ಕೋರಮಂಗಲದ ಫೋರಂ ಸಮೀಪವೇ ಇರುವುದರಿಂದ, ಇಲ್ಲಿ ರಾತ್ರಿಪೂರಾ ಜನ ಓಡಾಡುತ್ತಿರುತ್ತಾರೆ. ಹೊಸ ವರ್ಷದ ಆ ರಾತ್ರಿ ಜನ ಎಟಿಎಂ ಮುಂದೆ ಸಾಲುಗಟ್ಟಿರುತ್ತಾರೆ. ಅವರಂತೆ ನಾನೂ ಪಾರ್ಟಿ ಮಾಡ್ಬೇಕು ಅಂತ ಆಸೆ ಆಗುತ್ತೆ. ಆದರೆ, ಸಾಧ್ಯವಾಗುವುದಿಲ್ಲ. ಬಹುಶಃ ನಾನು ಹೊಸ ವರ್ಷ ಆಚರಿಸದೆ, ಹತ್ತಾರು ವರ್ಷಗಳೇ ಆದವೇನೋ. ನಾನು ಹುಟ್ಟಿದ್ದು ಮಧ್ಯಪ್ರದೇಶದ ಜಬಲುರದಲ್ಲಿ. ಬಾಲ್ಯದಲ್ಲಿ ಪ್ರತಿವರ್ಷ ಡಿ.31ರಂದು ಮಧ್ಯರಾತ್ರಿ 12 ಗಂಟೆ ಆಗುವುದನ್ನೇ ಕಾಯುತ್ತಿದ್ದೆವು. ಯಾರೋ ಶ್ರೀಮಂತರ ಮನೇಲಿ ಪಟಾಕಿ ಹೊಡೆಯೋರು. ಅದನ್ನು ನಾವು ನೋಡೋದು. ದುಡ್ಡಿಲ್ಲದ ಆ ದಿನಗಳಲ್ಲಿ, ಸಣ್ಣಪುಟ್ಟ ಸ್ವೀಟು ಹಂಚಿಕೊಂಡು ಸಂಭ್ರಮಿಸುತ್ತಿದ್ದೆವು. ಈಗ ಅವೆಲ್ಲವೂ ನೆನಪಾಗುತ್ತಿದೆ. ನಮ್ಮೂರಿನ ಚಿತ್ರಗಳು ಕಣ್ಣಮುಂದೆ ಹಾದುಹೋಗುತ್ತವೆ.
– ಮನ್‌ದೀಪ್ ಸಿಂಗ್, ಎಟಿಎಂ ಕಾವಲುಗಾರ