ಹುಬ್ಬಳ್ಳಿ: ಕೋವಿಡ್ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಶುಶ್ರೂಷಕರಿಗೆ ಕೋವಿಡ್ ರಿಸ್ಕ್ ಭತ್ಯೆ ನೀಡುವಲ್ಲಿ ಸರಕಾರ ವಿಫಲವಾಗಿದ್ದು, ತಾರತಮ್ಯ ಮಾಡುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಶುಶ್ರೂಷಕರು ಕಪ್ಪು ಪಟ್ಟಿ ಧರಿಸಿ ಕರ್ತವ್ಯದಲ್ಲಿ ತೊಡಗುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.
ಸರಕಾರ ಮಲತಾಯಿ ಧೋರಣೆ ಖಂಡಿಸಿ ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿರುವ ಸಿಬ್ಬಂದಿ ಸೋಮವಾರದಿಂದ ಕಪ್ಪು ಪಟ್ಟಿ ಧರಿಸಿ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದು, ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್ ರಿಸ್ಕ್ ನೀಡಲಾಗುವುದು ಎಂದು ಸರಕಾರ ಘೋಷಿಸಿತ್ತು.
ಆದರೆ ಸರಕಾರ ಕೇವಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ಮಾತ್ರ ರಿಸ್ಕ್ ಭತ್ಯೆ ನೀಡಿದೆ. ಆದರೆ ಇದೇ ಸೇವೆಯಲ್ಲಿದ್ದರೂ ವೈದ್ಯಕೀಯ ಶಿಕ್ಷಣ ವ್ಯಾಪ್ತಿಯಲ್ಲಿರುವ ಸಿಬ್ಬಂದಿಗೆ ನಯಾ ಪೈಸೆ ಬಂದಿಲ್ಲ. ಸರಕಾರದ ಈ ತಾರತಮ್ಯ ಖಂಡಿಸಿ ಮೊದಲ ಹಂತದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳ ಸಂಘ ಕರೆ ನೀಡಿದ ಹಿನ್ನೆಲೆಯಲ್ಲಿ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರತಿಭಟನೆಗೆ ಮುಂದಾಗಿದ್ದು, ಮುಂದೆ ಸಂಘದ ನಿರ್ಧಾರದಂತೆ ಪ್ರತಿಭಟನೆ ನಡೆಸಲು ಸಿಬ್ಬಂದಿ ನಿರ್ಧರಿಸಿದ್ದಾರೆ. ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿನ ಸಿಬ್ಬಂದಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಕೋವಿಡ್ ಆಸ್ಪತ್ರೆಯಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಒಂದು ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ನಯಾ ಪೈಸೆ ಕೂಡ ನೀಡಲಿಲ್ಲ.
ಪಿಪಿಇ ಕಿಟ್ ಧರಿಸಿ ಕಾರ್ಯ ನಿರ್ವಹಿಸಿದವರಿಗೆ ಮಾತ್ರ ಈ ಭತ್ಯೆ ಎನ್ನುವ ಆದೇಶ ಸರಕಾರ ಹೊರಡಿಸಿತ್ತು. ಆ ಆದೇಶದ ಪ್ರಕಾರವೂ ನಾವು ಭತ್ಯೆ ಪಡೆಯಲು ಅರ್ಹರಿದ್ದೇವೆ. ಆದರೆ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದ್ದಾರೆ. ಪ್ರತಿಭಟನೆ ಹಾಗೂ ಬೇಡಿಕೆ ಕುರಿತು ಸಿಬ್ಬಂದಿ ಟ್ವೀಟರ್ ಚಳವಳಿ ಆರಂಭಿಸಿದ್ದಾರೆ. ಸರಕಾರ ಹಾಗೂ ಸಚಿವರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಸಿಬ್ಬಂದಿ ಸಚಿವ ಸುಧಾಕರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಕರ್ತವ್ಯ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿದ ಚಿತ್ರಗಳು ಹಾಗೂ ಬೇಡಿಕೆ ಪತ್ರವನ್ನು ಟ್ವೀಟ್ ಮಾಡುತ್ತಿದ್ದಾರೆ.