Advertisement

ಡಂಬಳ ಗ್ರಂಥಾಲಯಕ್ಕೆ ಧೂಳಿನ ಮಜ್ಜನ!

02:19 PM Dec 02, 2019 | Suhan S |

ಮುಂಡರಗಿ: ವಾಹನ ಸಂಚಾರದ ಧೂಳಿನಿಂದ ಧೂಳು ತಿನ್ನುತ್ತಿರುವ ಪುಸ್ತಕಗಳು..ಸುತ್ತಲೂ ಬೆಳೆದ ಗಿಡಗಂಟಿ, ಕಸದಿಂದ ಸೊಳ್ಳೆಗಳ ನೀನಾದ. ಸೋರುತ್ತಿರುವ ಮೇಲ್ಛಾವಣೆ, ವಿದ್ಯುತ್‌ ಸಂಪರ್ಕವಿಲ್ಲದೇ ಕತ್ತಲೆ ವಾತಾವರಣ. ಇದು ಡಂಬಳದ ಸಾರ್ವಜನಿಕ ಗ್ರಂಥಾಲಯದ ದುಸ್ಥಿತಿ.

Advertisement

ಈ ಗ್ರಂಥಾಲಯ ರಸ್ತೆ ಪಕ್ಕದಲ್ಲಿಯೇ ಇದ್ದು, ನಿತ್ಯ ಸಂಚರಿಸುವ ವಾಹನಗಳಿಂದ ಪುಸ್ತಕಗಳೆಲ್ಲವೂ ಧೂಳುಮಯವಾಗಿವೆ. ಧೂಳಿನಿಂದಾಗಿ ಟೇಬಲ್‌ ಮೇಲೆ ಪತ್ರಿಕೆಗಳನ್ನಿಡಲುಕುರ್ಚಿಗಳಲ್ಲಿ ಓದುಗರು ಕುಳಿತುಕೊಳ್ಳಲು ಹಿಂಜರಿಯುವ ವಾತಾವರಣವಿದ್ದು, ಧೂಳಿನಲ್ಲಿಯೇ ಅನಿವಾರ್ಯವಾಗಿ ಓದುಗರು ಪತ್ರಿಕೆ ಓದುವ ಪರಿಸ್ಥಿತಿ ಎದುರಾಗಿದೆ.

ಗ್ರಂಥಾಲಯದ ಸುತ್ತಲೂ ಕಸ ಬೆಳೆದಿದೆ. ಮುಂದೆ ಇರುವ ಚರಂಡಿ ಮತ್ತುಆವರಣದಲ್ಲಿರುವ ಕಸದಿಂದ ಸೊಳ್ಳಗಳ ಕಾಟ ಹೆಚ್ಚಾಗಿದ್ದು, ಓದುಗರು ನೆಮ್ಮದಿಯಿಂದ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. 1992ರಲ್ಲಿ ಪ್ರಾರಂಭವಾಗಿರುವ ಗ್ರಂಥಾಲಯ ಕಳೆದ 27 ವರ್ಷಗಳಿಂದಲೂ ಗ್ರಾಪಂ ಕಟ್ಟಡದಲ್ಲಿಯೇ ಗ್ರಂಥಾಲಯವಿದೆ.

ಗ್ರಂಥಾಲಯದ ಮೇಲ್ಛಾವಣಿಗೆ ಸಿಮೆಂಟ್‌ ಸೀಟು ಹಾಕಿದ್ದು, ಮಳೆಗಾಲದಲ್ಲಿ ಸೋರುತ್ತಿರುವುದು ಒಂದೆಡೆಯಾದರೆ ವಿದ್ಯುತ್‌ ಸಂಪರ್ಕವಿಲ್ಲದೇ ಲೈಟುಗಳು ಬೆಳಗದಿರುವುದು ಇನ್ನೊಂದೆಡೆ.

ಸ್ಫರ್ಧಾತ್ಮಕ ಪುಸ್ತಕಮಾಸಪತ್ರಿಕೆಗಳೇ ಇಲ್ಲ: ಗ್ರಂಥಾಲಯದ ಅವಧಿ ಬೆಳಗ್ಗೆ ಎರಡು ತಾಸು ಮತ್ತು ಸಂಜೆ ಎರಡು ತಾಸು ಎಂದು ನಿಗದಿಯಾಗಿದ್ದರೂ ಮುಂಜಾನೆಯಿಂದ ಸಂಜೆಯವರೆಗೂ ಗ್ರಂಥಾಲಯ ತೆರೆದಿರುವುದು ಸಮಾಧಾನದ ಸಂಗತಿ. ಗ್ರಾಮದಲ್ಲಿ ಅಂದಾಜು 15 ಸಾವಿರ ಜನಸಂಖ್ಯೆಇದೆ. ಜೊತೆಗೆ ರಾಣಿ ಚನ್ನಮ್ಮ ವಸತಿ ಶಾಲೆ,ಕಸ್ತೂರ ಬಾ ವಸತಿ ಶಾಲೆ, ಎರಡು ಮೆಟ್ರಿಕ್‌ಪೂರ್ವ ವಸತಿ ನಿಲಯಗಳು, ಒಂದು ಖಾಸಗಿ ಪ್ರೌಢಶಾಲೆ, ಒಂದು ಪ.ಪೂ ಕಾಲೇಜು, ಒಂದು ಕೈಗಾರಿಕಾ ತರಬೇತಿ ಸಂಸ್ಥೆ ಕೂಡ ಇದೆ.ಆದರೆ ಗ್ರಾಮದ ಯುವಕರು, ವಿದ್ಯಾರ್ಥಿಗಳುಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪುಸ್ತಕಗಳುಮಾಸಪತ್ರಿಕೆಗಳೇ ಇಲ್ಲಿಲ್ಲ.

Advertisement

ತೀರದ ಜ್ಞಾನದಾಹ: ಗ್ರಾಮೀಣ ಪ್ರದೇಶದ ಗ್ರಂಥಾಲಯಗಳಿಗೆ ದಿನಪತ್ರಿಕೆ ಕೊಳ್ಳಲು ಮಾಸಿಕವಾಗಿ ಬರುವ ಅನುದಾನವೇ ಬರೀ 400 ರೂ. ಅದು ಮೂರು ದಿನಪತ್ರಿಕೆ ಕೊಳ್ಳಲು ಸಾಧ್ಯವಾಗುತ್ತದೆ. ಕರ್ನಾಟಕ ಸರಕಾರದ ಜನಪದ, ಕರ್ನಾಟಕ ವಿಕಾಸ ಎಂಬ ಎರಡು ಮಾಸಿಕ ಪತ್ರಿಕೆಗಳು ಬರುತ್ತವೆ. ಈ ಐದು ಪತ್ರಿಕೆಗಳಲ್ಲಿಯೇ ಗ್ರಾಮದ ಓದುಗರು, ವಿದ್ಯಾರ್ಥಿಗಳು, ಯುವಜನರು ಜ್ಞಾನದಾಹ ಇಂಗಿಸಿಕೊಳ್ಳಬೇಕಿದೆ.

ಗೆದ್ದಲು ಹುಳುಗಳ ಕಾಟ: ಗ್ರಂಥಾಲಯದ ಸುತ್ತಲೂ ಕಸ ಬೆಳೆದಿರುವುದರಿಂದ ಗೋಡೆಗಳಿಗೆ ಗೆದ್ದಲು ಹುಳುಗಳ ಕಾಟ ಹೆಚ್ಚಾಗಿದೆ. ಈ ಕಾರಣಕ್ಕಾಗಿಯೇ ಸುಮಾರು 5 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಗಂಟುಕಟ್ಟಿ ಚೀಲದಲ್ಲಿಡಲಾಗಿದೆ.

ಪುಸ್ತಕ ಆಯ್ಕೆಯೇ ಸಮಸ್ಯೆ: ಕಾಯಂ ಸದಸ್ಯರು 236 ಜನರು ಇದ್ದು, ಪ್ರತಿದಿನವೂಇಬ್ಬರು ಇಲ್ಲವೇ ಮೂರು ಜನ ಎರವಲು ಗ್ರಂಥಗಳನ್ನು ಮನೆಗೆ ತೆಗೆದುಕೊಂಡುಹೋಗುತ್ತಾರೆ. ಗಂಟು ಇಲ್ಲವೇ ಚೀಲದಲ್ಲಿ ಪುಸ್ತಕಗಳನ್ನು ಕಟ್ಟಿ ಇಟ್ಟಿರುವುದರಿಂದಾಗಿ ಪುಸ್ತಕ ಎರವಲು ತೆಗೆದುಕೊಂಡು ಹೋಗುವಾಗ ಆಯ್ಕೆ ಮಾಡುವುದೇ ದೊಡ್ಡ ತೆಲೆನೋವು. ರಸ್ತೆಯಿಂದ ದೂರವಿರುವ ಸುಸಜ್ಜಿತ ಪಂಚಾಯಿತಿ ಆವರಣದಲ್ಲಿರುವ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರಿಸಿದರೆ ಓದುಗರಿಗೆ ಅನುಕೂಲವಾಗಲಿದೆ. ಧೂಳಿನಿಂದ ಓದುಗರು ಮುಕ್ತಿ ಪಡೆದು ನೆಮ್ಮದಿಯಿಂದ ಕುಳಿತು ಓದಲು ಅನುಕೂಲವಾಗಲಿದ್ದು, ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆಯೂ ಓದುಗರು ಒತ್ತಾಯಿಸುತ್ತಿದ್ದಾರೆ. ಗ್ರಾಪಂ ಕೂಡ ಗ್ರಂಥಾಲಯಕ್ಕೆ ಅನುದಾನ ನೀಡಿದರೆ ಮತ್ತಷ್ಟು ಬಲ ಬರುತ್ತದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

 

-ಹು.ಬಾ.ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next