Advertisement

ಧೂಳು ಹಿಡಿದ ಬೆಟಗೇರಿ ಲೈಬ್ರರಿ

04:24 PM Nov 19, 2019 | Suhan S |

ಗದಗ: ಗ್ರಂಥಗಳನ್ನು ಮುಟ್ಟಿದರೆ ಸಾಕು ಕೈಗೆ ಮೆತ್ತಿಕೊಳ್ಳುವ ಧೂಳು. ಜೇಡರ ಬಲೆಯಲ್ಲಿ ಇಣುಕಿ ನೋಡುವ ಗ್ರಂಥಗಳು. ಸ್ವಚ್ಛತೆ ಕೊರತೆಯಿಂದ ಅಸಡ್ಡೆಗೆ ಒಳಗಾದ ಸಾವಿರಾರು ಪುಸ್ತಕಗಳು. ಇದು ಬೆಟಗೇರಿಯ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನಕ್ಕೆ ಹೊಂದಿಕೊಂಡಿರುವ ಗದಗ-ಬೆಟಗೇರಿ ನಗರಸಭೆಯ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಯ ದುಸ್ಥಿತಿ.  1-6-1975ರಲ್ಲಿಆರಂಭಗೊಂಡಿದ್ದು, ಈ ಭಾಗದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಆದರೆ, ಕೆಲ ವರ್ಷಗಳಿಂದ ಗ್ರಂಥಾಲಯದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ.

Advertisement

ಹಲವು ತಿಂಗಳಿಂದ ಗ್ರಂಥಾಲಯದಲ್ಲಿ ಧೂಳು ಹೊಡೆಯದ ಕಾರಣ ಬೃಹತ್‌ ಕಟ್ಟಡ ಮೂಲೆ ಮೂಲೆಗಳಲ್ಲಿ ಜೇಡರ ಬಲೆ ಕಟ್ಟಿದೆ. ಹತ್ತಾರು ರ್ಯಾಕ್‌ ಗಳಲ್ಲಿ ಜೋಡಿಸಿರುವ ಪುಸ್ತಕಗಳ ಮೇಲೆ ಧೂಳು ಕುಳಿತಿದೆ. ತಮಗೆ ಇಷ್ಟವಾದ ಪುಸ್ತಕವನ್ನು ಓದಬೇಕು ಎನ್ನುವವರು ಮೊದಲು ಪುಸ್ತಕದ ಧೂಳು ಜಾಡಿಸಿಕೊಳ್ಳುವುದು ಅನಿವಾರ್ಯ. ಇನ್ನೂ, ಗ್ರಂಥಾಲಯದ ಮೂಲೆ ಮೂಲೆಗಳಲ್ಲಿ ರಾಶಿಗಟ್ಟಲೆ ಪುಸ್ತಕಗಳು ಬಿದ್ದಿದ್ದು, ಕೇಳುವವರಿಲ್ಲದಂತಾಗಿದೆ. ಕುರ್ಚಿ-ಮೇಜುಗಳು ಹಳೆಯದಾಗಿವೆ. 60 ಕುರ್ಚಿ, 12 ರ್ಯಾಕ್‌ ಗಳ ಪೈಕಿ ಬಹುತೇಕ ಕಿತ್ತು ಹೋಗಿವೆ. ಮಳೆ ಬಂದರೆ ಮೇಲ್ಛಾವಣಿ ಸೋರುತ್ತಿದೆ. ಇದರಿಂದ ಗ್ರಂಥಾಲಯದ ಪುಸ್ತಕಗಳು ಒದ್ದೆಯಾಗಿ ಹಾಳಾಗುತ್ತಿವೆ. ಗ್ರಂಥಾಲಯದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕೊರತೆಯಿಂದಾಗಿ ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಮುತ್ತಿಕೊಳ್ಳುತ್ತವೆ ಎಂಬುದು ಓದುಗರ ದೂರು.

ಯಥಾಸ್ಥಿತಿಯಲ್ಲಿ ಓದುಗರ ಸಂಖ್ಯೆ!: ದಶಕಗಳ ಇತಿಹಾಸ ಹೊಂದಿರುವ ಬೆಟಗೇರಿಯ ಶಾಖಾ ಗ್ರಂಥಾಲಯ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ. ಆದರೂ, ಓದುಗರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ. ಈ ಭಾಗದಲ್ಲಿ ಎಎಸ್‌ಎಸ್‌ ಕಾಲೇಜು, ಲೋಯಲಾ ಕಾನ್ವೆಂಟ್‌ ಶಾಲೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು, ನಿವೃತ್ತ ನೌಕರರು, ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ಓದುಗರಿಂದ ತುಂಬಿರುತ್ತದೆ. ಗ್ರಂಥಾಲಯದ ಬಹುತೇಕ ರ್ಯಾಕ್‌ಗಳು ಧೂಳು, ಜೇಡರ ಬಲೆಯಿಂದ ಆವರಿಸಿದ್ದರಿಂದ ಬಹುತೇಕರು ದಿನಪತ್ರಿಕೆಗಳನ್ನು ಮಾತ್ರ ಓದುವಂತಾಗಿದೆ.

ಈ ಬಗ್ಗೆ ಸ್ಥಳೀಯ ಗ್ರಂಥಾಲಯದ ಸಿಬ್ಬಂದಿ ಗಮನಕ್ಕೆ ತಂದರೆ ಸಿಬ್ಬಂದಿ ಕೊರತೆಯ ನೆಪ ಹೇಳಿ ಜಾರಿಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗ್ರಂಥಾಲಯದ ಮೇಲ್ವಿಚಾರಕ ಗಿರಿಯಪ್ಪನವರ, ಈ ಹಿಂದೆ ಗ್ರಂಥಾಲಯದಲ್ಲಿ ನಾಲ್ವರು ಸಿಬ್ಬಂದಿಯಿದ್ದರು. ಇದೀಗ ನಾನೊಬ್ಬನೇ ಉಳಿದಿದ್ದೇನೆ. ರಜೆ ಹಾಕಲು ಕಷ್ಟವಾಗಿದೆ. ಸರಕಾರ ನೀಡುವ 2 ಸಾವಿರ ರೂ. ಗೌರವ ಧನದಲ್ಲಿ ಸ್ವಚ್ಛತೆಗಾಗಿ ಓರ್ವರನ್ನು ನೇಮಿಸಲಾಗಿದೆ. ಅವರು ಕಸ ಗುಡಿಸಿ, ಒಂದು ಕೊಡ ನೀರು ತರುವುದಕ್ಕೆ ಸೀಮಿತವಾಗಿದ್ದಾರೆ. ಜೇಡ ತೆಗೆಯುವಂತೆ ಹೇಳಿದರೆ ಹೆಚ್ಚಿನ ಸಂಭಾವನೆ ಕೊಡಿಸಿ ಎನ್ನುತ್ತಿದ್ದಾರೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ. ಆದರೆ, ದಶಕಗಳ ಓದುಗರ ಜ್ಞಾನದ ದಾಹ ನೀಗಿಸಿದ ಗ್ರಂಥಾಲಯ ಇದೀಗ ಧೂಳಿನ ಆಗರವಾಗಿರುವುದು ವಿಪರ್ಯಾಸದ ಸಂಗತಿ.

 

Advertisement

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next