ಕುದೂರು: ಕುದೂರು ಸಾರ್ವಜನಿಕರ ಹೆರಿಗೆ ಆಸ್ಪತ್ರೆ ಪಕ್ಕದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಕಾರ್ಯ ನೆಡೆಯುತ್ತಿದೆ. ಈ ಹೊಸ ಆಸ್ಪತ್ರೆಯೊಂದಿಗೆ ಹೆರಿಗೆ ಆಸ್ಪತ್ರೆ ಜೋಡಿಸುವ ಸಲುವಾಗಿ ಗೋಡೆಯನ್ನು ಕೆಡವಲಾಗಿದೆ. ಆದರೆ, ಇದರಿಂದ ಪ್ರತಿನಿತ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುವ ರೋಗಿಗಳು ಧೂಳುನಿಂದ ನರಳುವಂತಾಗಿದೆ.
ಹೊಸ ಆಸ್ಪತ್ರೆ ಕಟ್ಟಡದ ನಿರ್ಮಾಣದ ಬಳಿಕ ಹೆರಿಗೆ ಆಸ್ಪತ್ರೆಯನ್ನು ಜೋಡಿಸಬಹುದಿತ್ತು. ಅದು ಬಿಟ್ಟು ಕಟ್ಟಡ ನಿರ್ಮಾಣವಾಗುವ ಮೊದಲೇ ಹೆರಿಗೆ ಆಸ್ಪತ್ರೆಯ ಗೋಡೆ ಕೆಡವಿ ಹಾಕಿರುವುದರಿಂದ ಕಟ್ಟಡ ನಿರ್ಮಾಣ ಕೆಲಸದ ವೇಳೆ, ಮೇಲೇಳುವಅಪಾರ ಪ್ರಮಾಣದ ಧೂಳು ಆಸ್ಪತ್ರೆಯ ಕೊಠಡಿಗೆ ನುಗ್ಗುತ್ತಿದೆ. ಇದರಿಂದ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಮತ್ತು ಅವರ ಜೊತೆಗೆ ಬಂದವರೂ ಧೂಳಿನ ಆಲರ್ಜಿಯಿಂದ ಬಳಲುವಂತಾಗಿದೆ.
ಕಿಟಕಿ ಅಳವಡಿಸಿಲ್ಲ: ಕಿಟಕಿ ಇಡುತ್ತೇವೆ ಎಂದು ಸುಳ್ಳು ಹೇಳಿ ಆಸ್ಪತ್ರೆಯ ಗೋಡೆ ಹೊಡೆಯಲಾಗಿದ್ದು, ಇಪ್ಪತ್ತು ದಿನಗಳು ಕಳೆದರೂ ಕಿಟಕಿ ಅಳವಡಿಸಿಲ್ಲ. ಒಡೆದ ಗೋಡೆಯ ಮೂಲಕ ಸಲಿಸಾಗಿ ಒಳನುಗ್ಗುವ ಕೋತಿಗಳು ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಗೆ ಉಪಟಳ ನೀಡುತ್ತವೆ. ಸಮಸ್ಯೆಯನ್ನು ತಿಳಿಸಿ ಗೋಡೆ ಮುಚ್ಚುವಂತೆ ಕಂಟ್ರಾಕ್ಟರ್ ಅವರನ್ನು ಕೇಳಿದರೆ ಸಿಬ್ಬಂದಿ ಮೇಲಯೇ ಹರಿಹಾಯುತ್ತಿದ್ದಾರೆ.
ಕೋತಿಗಳ ಕಾಟ ಮತ್ತು ಧೂಳು ಸೇವಿಸಿಕೊಂಡುಕಾರ್ಯನಿರ್ವಹಿಸುವಂತಾಗಿದೆ ಸಿಬ್ಬಂದಿಗಳ ಪಾಡು. ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆಯ ಕಾಮಗಾರಿ ಮುಗಿದ ಮೇಲೆ ಎರಡು ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸಬಹುದಿತ್ತು ಆದರೆ ನಿರ್ಮಾಣ ಹಂತದಲ್ಲೇ ಸಂಪರ್ಕ ಕಲ್ಪಿಸುವ ಅಗತ್ಯವೇನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆ ? ಈ ಸಂಬಂಧ ಕಂಟ್ರಾಕ್ಟರ್ ಮತ್ತು ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಮುಂದಾದರೆ ಸಂಪರ್ಕಕ್ಕೆ ಸಿಗುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಕುದೂರು ಆಸ್ಪತ್ರೆ ಕಾಮಗಾರಿ ಕಳಪೆಯಿಂದ ಕೂಡಿದೆ.ಈ ಸಂಬಂಧ ಶಾಸಕರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ರೋಗಿಗಳು ನಿತ್ಯ ಧೋಳಿನ ಗೋಳು ಅನುಭವಿಸುವಂತಾಗಿದೆ. ಮುಂದಾಗುವ ಅನಾಹುತಕ್ಕೆ ಗೋಡೆ ಒಡೆದವರೇ ನೇರ ಜವಬ್ದಾರಿಯಾಗುತ್ತಾರೆ
.-ಕೆ.ಆರ್.ಯತಿರಾಜು ಕುದೂರು, ತಾಪಂ.ಮಾಜಿ ಅಧ್ಯಕ್ಷ