Advertisement

ಧೂಳು ಸಮಸ್ಯೆ: ನಿಧಾನಗತಿ ಕಾಮಗಾರಿ ಆರೋಪ

10:09 PM Dec 16, 2019 | Sriram |

ಪುಂಜಾಲಕಟ್ಟೆ: ಬಂಟ್ವಾಳ- ಸಿದ್ದಕಟ್ಟೆ- ಮೂಡುಬಿದಿರೆ ರಸ್ತೆಯಲ್ಲಿ ಬಂಟ್ವಾಳದಿಂದ ಸೊರ್ನಾಡು ವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಿಂದಾಗಿ ಸಾರ್ವಜನಿಕರು ಹಲವಾರು ಸಮಸ್ಯೆ ಗಳನ್ನು ಎದುರಿಸುವಂತಾಗಿದೆ.

Advertisement

ಸಿಆರ್‌ಎಫ್‌ ನಿಧಿಯಿಂದ 5 ಕೋ. ರೂ. ವೆಚ್ಚದಲ್ಲಿ ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ಕಳೆದ ಎರಡು ತಿಂಗಳುಗಳಿಂದ ನಡೆಯುತ್ತಿದ್ದು, ಹಿಂದಿನ ರಸ್ತೆಯನ್ನು ವಿಸ್ತರಣೆಗೊಳಿಸಲಾಗುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ಮಣ್ಣು ತೆಗೆದು ಜಲ್ಲಿ ಕಲ್ಲು ಮತ್ತು ಜಲ್ಲಿ ಹುಡಿ ಹಾಕಲಾಗಿದೆ. ಪ್ರಸ್ತುತ ಇದುವೇ ದೊಡ್ಡ ಸಮಸ್ಯೆಯಾಗಿದೆ. ವಿಸ್ತರಣೆಗೆ ಹಾಕಿದ ಜಲ್ಲಿ ಕಲ್ಲು ರಸ್ತೆಯಲ್ಲಿ ಹರಡಿಕೊಂಡಿದೆ. ಜಲ್ಲಿ ಹುಡಿ ಧೂಳಿನಿಂದ ಪರಿಸರ ಮಾಲಿನ್ಯ ಉಂಟಾಗಿದೆ.

ಧೂಳಿನಿಂದಾಗಿ ವ್ಯವಹಾರ ನಡೆಸಲು ಕಷ್ಟವಾಗಿದೆ ಎಂದು ವ್ಯಾಪಾರಸ್ಥರು ದೂರಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವವರಿಗೆ ಧೂಳಿನಿಂದಾಗಿ ಅನಾರೋಗ್ಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ನಿತ್ಯ ಪ್ರಯಾಣಿಕರು ಅಲವತ್ತು ಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಹರಡಿದ ಜಲ್ಲಿ ಕಲ್ಲುಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಅಪಘಾತ ಕ್ಕೀಡಾಗುವ ಸಾಧ್ಯತೆ ಇದೆ. ರಸ್ತೆ ಬದಿ ಜಲ್ಲಿ ಕಲ್ಲು ಹಾಕಿರುವುದರಿಂದ ನಡೆದಾಡಲೂ ಅಸಾಧ್ಯವಾಗಿದೆ. ಮತ್ತೂಂದೆಡೆ ರಸ್ತೆ ಬದಿ ಕೇಬಲ್‌ ಅಳವಡಿಕೆಗೆ ಹೊಂಡ ತೋಡ ಲಾಗಿದೆ. ಇದರಿಂದಾಗಿ ಧೂಳು ಪರಿಸರ ವ್ಯಾಪಿಸಿದೆ.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಈ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಕಾರ್ಕಳ-ಬಂಟ್ವಾಳ ರಾ.ಹೆ.ಯಾಗಿ ಮೇಲ್ದರ್ಜೆಗೇರಲಿದೆ ಎಂದು ಘೋಷಣೆ ಯಾಗಿದೆ. ಪ್ರಸ್ತುತ ಸಾವಿರಾರು ವಾಹನಗಳು ಈ ರಸ್ತೆ ಯಲ್ಲಿ ಸಂಚರಿಸುತ್ತಿವೆ. ರಾ.ಹೆ. ಇಲಾಖೆ ಈ ಕಾಮಗಾರಿ ನಡೆಸುತ್ತಿದ್ದು, ಬಳಿಕ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಿದೆ.

ರಸ್ತೆಗೆ ಮರು ಡಾಮರು ಕಾಮಗಾರಿ ಆಗು ವುದೆಂದು ಭಾವಿಸಲಾಗಿತ್ತು. ರಸ್ತೆಯ ತಿರುವುಗಳನ್ನು ಸರಿಪಡಿಸುವಂತೆ ಲೊರೆಟ್ಟೋ ಹಿಲ್‌ ರೋಟರಿ ಕ್ಲಬ್‌ ಡಿಸಿಯವರಿಗೆ ಮನವಿ ಮಾಡಿತ್ತು. ಸಾರ್ವಜನಿ ಕರೂ ಆಗ್ರಹಿಸಿದ್ದರು. ಆದರೆ ಕಾಮಗಾರಿ ಆರಂಭಿಸಿ ತಿಂಗಳುಗಳು ಕಳೆದರೂ ರಸ್ತೆಯ ದುರವಸ್ಥೆ ಹೆಚ್ಚಾಗುತ್ತಿದೆ.

Advertisement

ಪ್ರಸ್ತುತ ಈ ಕಾಮಗಾರಿಯಲ್ಲಿ ರಸ್ತೆ ಇದ್ದ ಸ್ಥಿತಿಯಲ್ಲಿ ವಿಸ್ತರಣೆ ಮಾತ್ರ ನಡೆಯುತ್ತಿದೆ. ಭೂಸ್ವಾಧೀನ, ವಿದ್ಯುತ್‌ ಕಂಬ, ಮರಗಳ ತೆರವು ಮೊದಲಾದ ಯಾವುದೇ ಕಾರ್ಯಗಳಿಗೆ ಅವಕಾಶವಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಿದ್ದೂ ನಿಧಾನಗತಿಯ ಕಾಮಗಾರಿಯಿಂದಾಗಿ ಈ ದುರವಸ್ಥೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಶೀಘ್ರ ಕಾಮ ಗಾರಿ ನಡೆಯುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

 ಕ್ರಮ ಅಗತ್ಯ
ರಸ್ತೆಯುದ್ದಕ್ಕೂ ಜಲ್ಲಿ ಕಲ್ಲು ಹರಡಿದ್ದು, ಧೂಳು ತುಂಬಿದ ಹೊಂಡಗಳಿರುವ ಕಾರಣ ನಿತ್ಯ ಪ್ರಯಾಣ ಕಷ್ಟವಾಗಿದೆ. ಸಂಬಂಧಿತ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು
– ರಾಮಚಂದ್ರ ಶೆಟ್ಟಿಗಾರ್‌, ಅಣ್ಣಳಿಕೆ

 ಅನಾರೋಗ್ಯ ಭೀತಿ
ವಾಹನಗಳು ಸಂಚರಿಸುವಾಗ ವಾತಾವರಣ ಧೂಳುಮಯವಾಗಿ ವ್ಯಾಪಾರ ಕಷ್ಟವಾಗಿದೆ. ಪರಿಸರದ ಎಲ್ಲರಿಗೆ ಅನಾರೋಗ್ಯ ಬಾಧಿಸುವಂತಾಗಿದೆ.
– ರಾಮಣ್ಣ, ವ್ಯಾಪಾರಸ್ಥರು, ಬಂಡಸಾಲೆ

 ಶೀಘ್ರ ಕಾಮಗಾರಿಗೆ ಸೂಚನೆ
ಬಂಟ್ವಾಳದಿಂದ ಸೊರ್ನಾಡುವರೆಗೆ 4 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, 5 ಮೀ. ಅಗಲದಿಂದ 7 ಮೀ.ಗೆ ವಿಸ್ತರಿಸಲಾಗುತ್ತಿದೆ. ಶೀಘ್ರ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
– ಮುರುಘೇಶ್‌, ಅಭಿಯಂತರು, ರಾಷ್ಟ್ರೀಯ ಹೆದ್ದಾರಿ ಇಲಾಖೆ

– ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next