ತುಮಕೂರು: ನಗರ ಸ್ಮಾರ್ಟ್‌ಸಿಟಿಯಾಗುವ ಬದಲು ಧೂಳು ಸಿಟಿಯಾಗಿದೆ. ಅಧಿಕಾರಿಗಳು ಜನರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ತಾಕೀತು ಮಾಡಿದರು.
ಮಹಾನಗರಪಾಲಿಕೆ ಸಭಾಂಗಣಲ್ಲಿ ಸೋಮವಾರ ಸ್ಮಾರ್ಟ್‌ಸಿಟಿ, ಪಾಲಿಕೆ, ಬೆಸ್ಕಾಂ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಅಧಿಕಾರಿಗಳಲ್ಲಿ ಸಮನ್ವತೆ ಕೊರತೆ ಕಾಣುತ್ತಿದೆ. ಎಲ್ಲರೂ ಸಮನ್ವತೆಯಿಂದ ಕೆಲಸ ಮಾಡಿದರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬಹುದು. ಸ್ಮಾರ್ಟ್‌ಸಿಟಿಗೆ ಆಯ್ಕೆಗೊಂಡು 2 ವರ್ಷವಾದರೂ ಸಾರ್ವಜನಿಕರಿಗೆ ಹತ್ತಿರವಾಗುವ ಯೋಜನೆ ಕಾರ್ಯ ರೂಪಕ್ಕೆ ಬಂದಿಲ್ಲ. ಎಲ್ಲ ಕಡೆ ಗುಂಡಿ ತೆಗೆದು ಕಾಮಗಾರಿ ಪೂರ್ಣವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆಯಿಂದ ಅಪಘಾತ ಹೆಚ್ಚಾಗುತ್ತಿದೆ. ಕೋಟೆ ಆಂಜನೇಯ ಸ್ವಾಮಿ ವೃತ್ತದಿಂದ ಶಿರಾಗೇಟ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-4 ಕ್ಕೆ ತಲುಪುವ ರಸ್ತೆಯಲ್ಲಿ ಹಲವು ಕಡೆ ಅಪಘಾತ ವಲಯಗಳಿವೆ. ತುಮಕೂರು ಅಮಾನಿಕೆರೆ ಕೋಡಿಯ ಬಳಿ ವಿಸ್ತಾರವಾದ ಸೇತುವೆ ನಿರ್ಮಿಸಲು ಅವಶ್ಯಕ ಯೋಜನೆ ರೂಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ರಿಂಗ್ ರಸ್ತೆಯು ಸ್ಮಾಟ್‌ಸಿಟಿಯಿಂದ ಅಭಿವೃದ್ಧಿಗೊಳ್ಳುತ್ತಿದ್ದು, ಸರ್ವೀಸ್ ರಸ್ತೆ ಪ್ರಾರಂಭಿಸುವ ಮುಂಚೆಯೇ ಒಳಚರಂಡಿ ಕಾಮಗಾರಿ ಪೂರ್ಣ ಗೊಳಿಸುವಂತೆ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ನಿರ್ಮಿಸಲಾಗುತ್ತಿರುವ ಅಂಡರ್‌ಗ್ರೌಂಡ್ ಕೇಬಲ್ ನೆಟ್‌ವರ್ಕಿಂಗ್ ಕಾರ್ಯ ಪ್ರಾಯೋಗಿಕವಾಗಿ ಜನರಲ್ ಕಾರ್ಯಪ್ಪ ರಸ್ತೆ, ಎಂ.ಜಿ ರಸ್ತೆ, ಅಶೋಕ ರಸ್ತೆಗಳಲ್ಲಿ ಕಾರ್ಯಗತಗೊಳಿಸುವಂತೆ ತಿಳಿಸಿದರು. ಮೇಯರ್ ಲಲಿತಾ ರವೀಶ್, ಉಪ ಮೇಯರ್ ರೂಪ ಶೆಟ್ಟಳ್ಳಯ್ಯ, ಪ್ರಭಾರ ಆಯುಕ್ತ ಸಿ.ಎಲ್ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ ಸಿ.ಎನ್. ರಮೇಶ್ ಮತ್ತಿತರರು ಇದ್ದರು.