ಭದ್ರಾವತಿ: ಕೋವಿಡ್ ಕಾರಣದಿಂದ ನವರಾತ್ರಿ ವೈಭವಕ್ಕೆ ಮಂಕು ಹಿಡಿದಂತಾಗಿದೆಯಾದರೂ ಕಲವು ಮನೆಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ದಸರ ಬೊಂಬೆ ಪ್ರದರ್ಶನ ಹಾಗೂ ದೇವಾಲಯಗಳಲ್ಲಿ ದೇವತೆಗಳಿಗೆ ಪ್ರತಿದಿನ ಒಂದೊಂದು ವಿಶೇಷ ಅಲಂಕಾರ ಮಾಡಲಾಗುತ್ತಿದ್ದು ಗೊಂಬೆ ಪ್ರದರ್ಶನವನ್ನೂ ಜನ ವೀಕ್ಷಿಸುತ್ತಿದ್ದಾರೆ.
ನ್ಯೂಕಾಲೋನಿಯಲ್ಲಿ ಹೆಲ್ತ್‌ಕೇರ್ ಉದ್ಯೋಗಿ ಉಮೇಶ್ ಹಾಗೂನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವ ಅವರ ಪತ್ನಿ ಕುಸುಮ ದಂಪತಿ ಮನೆಯ ಹಿರಿಯರಾದ ನಾಗರತ್ನಮ್ಮ ಅವರ ಒತ್ತಾಸೆಯ ಪ್ರೋತ್ಸಾಹದೊಂದಿಗೆ ಕಳೆದ 15 ವರ್ಷಗಳಿಂದದಸರಾಬೊಂಬೆಗಳನ್ನು ಮನೆಯಲ್ಲಿ ಇಡುತ್ತಾ ಬಂದಿದ್ದು, ಈ ಬಾರಿ ಸಹ ದಸರ ಗೊಂಬೆ ಪ್ರದರ್ಶಿಸುತ್ತಿದ್ದಾರೆ.
ಪ್ರದರ್ಶನಕ್ಕಿಟ್ಟಿರುವ ಗೊಂಬೆಗಳಲ್ಲಿ ವೈವಿಧ್ಯತೆಯಿದ್ದು ಪ್ರಧಾನವಾಗಿ ಪಟ್ಟದ ಬೊಂಬೆಗಳ ಅಡಿಯಲ್ಲಿ ಪುರಾಣ ಕಾಲದ ಐತಿಹ್ಯವನ್ನು ಸಾರುವ ವಿಷ್ಣುವಿನ ದಶಾವತಾರದ ಬೊಂಬೆಗಳು, ರಾಮಾಯಣದ ರಾವಣ ಆತ್ಮಲಿಂಗವನ್ನು ಪಡೆಯುತ್ತಿರುವ ದೃಶ್ಯಸಾರುವ ಬೊಂಬೆಗಳು, ರಾಮಾಯಣ- ಮಹಾಭಾರತದ ಕಥೆಗಳನ್ನು ನೆನಪಿಸುವ ಬೊಂಬೆಗಳು, ಅಷ್ಠಲಕ್ಷ್ಮೀಯರ ಬೊಂಬೆಗಳು, ಅಯೋಧ್ಯೆಯ ಶ್ರೀರಾಮ, ಇಡಗುಂಜಿ ಗಣಪತಿ, ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ, ಮುತ್ತು,ರತ್ನವನ್ನು ಬೀದಿಗಳಲ್ಲಿ ಮಾರುತ್ತಿದ್ದ ವಿಜಯನಗರದ ವೈಭವವನ್ನು ತಿಳಿಸುವ ದೃಶ್ಯದ ಬೊಂಬೆಗಳು, ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ಮನೆಗಳಲ್ಲಿ ಅಡುಗೆ ಮಾಡಲು ಬಳಸುತಯ್ತದ್ದ ಪಾತ್ರೆ ಪಗಡಗಳ ಮಾದರಿ, ಶಿವಮೊಗ್ಗದ ಸಕ್ರೈಬೈಲು ಆನೆಬಿಡಾರ, ಆರೋಗ್ಯಧಾಮ, ಹುಲಿ-ಸಿಂಹಧಾಮ, ಬುದ್ಧನ ಗೋಲ್ಡನ್ ಟೆಂಪಲ್, ಶಿರಡಿ ಸಾಯಿಬಾಬ, ಗುಡವಿ ಪಕ್ಷಿಧಾಮ, ಭಾರತದ ವೀರಯೋಧರ ನೆನಪಿನ ಬೊಂಬೆಗಳು, ಹಳ್ಳಿಮನೆಯ ವಾತಾವರಣ ತಿಳಿಸುವ ಪರಿಸರದ ಗೊಂಬೆಗಳು, ಹಳ್ಳಿಯಲ್ಲಿ ಆಡುತ್ತಿದ್ದ ಆಟಗಳು, ಮತ್ಸ್ಯ ಪ್ರದರ್ಶನ, ಆಧುನಿಕ ಅಡುಗೆಮನೆ ದೃಶ್ಯ ಸಾರುವ ಆಟಿಕೆ ಬೊಂಬೆಗಳು, ದೇಶಕ್ಕೆ ಅನ್ನ ನೀಡುವ ರೈತನ ವಿಶೇಷತೆ ಸಾರುವ ಬೊಂಬೆಗಳು, ಸೇರಿದಂತೆ ಹಂತ-ಹಂತವಾಗಿ ಜೋಡಿಸಿಟ್ಟಿರುವ ವೈವಿಧ್ಯಮಯವಾದ ಬೊಂಬೆಗಳ ಪ್ರದರ್ಶನವನ್ನು ನವರಾತ್ರಿ ಪಾಡ್ಯದಿಂದ ವಿಜಯದಶಮಿಯವರೆಗೆ ಪ್ರದರ್ಶನಕ್ಕೆ ಇಡಲಾಗಿದೆ. ಸಂಜೆ ವರ್ಣಮಯವಾದ ವಿದ್ಯುತ್ ದೀಪಗಳ ಅಲಂಕಾರದ ನಡುವೆ ಕಂಗೊಂಳಿಸುವ ಬೊಂಬೆ ವೀಕ್ಷಿಸಲು ಪ್ರತಿನಿತ್ಯ ಅನೇಕ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಕೆ.ಎಸ್.ಸುಧೀಂದ್ರ